ಸಾರಾಂಶ
ಆಮಂತ್ರಣ ಪತ್ರಿಕೆಯಲ್ಲಿ ಕನ್ನಡಿಗ, ಕನ್ನಡತಿ ಎಂದು ಬರೆಸಿದ ವಧು, ವರ । ಭುವನೇಶ್ವರಿ ಚಿತ್ರದೊಂದಿಗೆ ಕೆಂಪು, ಹಳದಿ ಬಣ್ಣ ಬಳಕೆ
ನಂದನ್‌ಪುಟ್ಟಣ್ಣ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣನವೆಂಬರ್ ಬಂದರೆ ಕನ್ನಡ ಕನ್ನಡ ಎಂಬುವ ಕೆಲ ಸಂಘ ಸಂಸ್ಥೆಗಳು, ಇನ್ನು ಪತ್ರಿಕೆಗಳಲ್ಲಿ ಫೋಸ್ ನೀಡುವ ಕೆಲ ರಾಜಕೀಯ ನಾಯಕರು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತರಾಗಿರುತ್ತಾರೆ. ಆದರೆ ಇಲ್ಲೊಬ್ಬ ಕನ್ನಡದ ಕಟ್ಟಾ ಅಭಿಮಾನಿ ತನ್ನ ಮದುವೆ ಆಮಂತ್ರಣಕ್ಕೆ ಕನ್ನಡಿಗ ಎಂಬ ಹೆಸರು ಹಾಕಿಸಿ ಕನ್ನಡ ಧ್ವಜದ ಸಾಂಕೇತಿಕವಾಗಿ ಅರಿಶಿನ ಮತ್ತು ಕುಂಕುಮ ಬಣ್ಣಗಳಿಂದ ವಿಭಿನ್ನವಾಗಿ ಆಹ್ವಾನ ಪತ್ರಿಯನ್ನು ಮಾಡಿಸಿ ಕನ್ನಡದ ದೇವಿ ಭುವನೇಶ್ವರಿ ತಾಯಿಯ ಹಾರೈಕೆಯೊಂದಿಗೆ ಎಂದು ಮುದ್ರಿಸಿ ಕನ್ನಡದ ಬಗ್ಗೆ ಅಭಿಮಾನವನ್ನು ಮೆರೆದಿದ್ದಾರೆ.
ತಾಲೂಕಿನ ದಂಡಿಗನಹಳ್ಳಿ ಹೋಬಳಿ ಶೆಟ್ಟಿಗೌಡನಹಳ್ಳಿ ಗ್ರಾಮದ ತಿಮ್ಮೇಗೌಡರ ಮಗ ಮಂಜೇಗೌಡ ಹಾಗೂ ಬನ್ನೂರು ತಾಲೂಕು ಆಲದಕಟ್ಟಿ ಗ್ರಾಮದ ಮಹೇಶಪ್ಪನ ಮಗಳು ಸಂಗೀತಾ ತಮ್ಮ ಆಹ್ವಾನ ಪತ್ರಿಕೆಯಲ್ಲಿ ಕನ್ನಡಿಗ ಚಿ.ರಾ. ಹಾಗೂ ಕನ್ನಡತಿ ಚಿ.ಸೌ. ಸಂಗೀತಾ ಎಂಬುದಾಗಿ ಭುವನೇಶ್ವರಿ ತಾಯಿಯ ಹಾರೈಕೆಯೊಂದಿಗೆ ಮದುವೆಯ ಮಮತೆಯ ಕರೆಯೋಲೆ ಎಂದು ಮುದ್ರಿಸಿ ಸಾವಿರಾರು ಪತ್ರಿಕೆಯನ್ನು ನೆಂಟರು ಹಾಗೂ ಸ್ನೇಹಿತರಿಗೆ ವಿತರಿಸಿದ್ದಾರೆ.ವಧುವರರ ಹೆಸರಿನ ಮುಂದೆ ಚಿರಂಜೀವಿ ರಾಜಮಾನ ರಾಜಶ್ರೀ (ಚಿ.ರಾ.) ಹಾಗೂ ಚಿರಂಜೀವಿ ಸೌಭಾಗ್ಯವತಿ (ಚಿ.ಸೌ.), ಇನ್ನು ಕೆಲವು ಅರಿಶಿನ ಕುಂಕುಮ ಚಿರಂಜೀವಿ ಸೌಭಾಗ್ಯವತಿ (ಅ.ಕು.ಚಿ.ಸೌ.) ಎಂದೆಲ್ಲಾ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವುದು ಹಿಂದಿನಿಂದಲೂ ಪ್ರತೀತಿ ಇದೆ.
ಕೆಲವು ವರ್ಷಗಳಿಂದ ಇತ್ತೀಚೆಗೆ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ವರ ಅಥವಾ ವರು ತಾವು ಇಂತಹವರನ್ನು ವಿವಾಹವಾಗುತ್ತಿದ್ದೇವೆ, ತಾವು ಇಂತಹ ಸ್ಥಳಕ್ಕೆ ಬನ್ನಿ ಎಂದಷ್ಟೇ ವಯಕ್ತಿಕ ಆಹ್ವಾನ ಪತ್ರಿಕೆ ಮಾಡಿಸಿ ಗಂಡು ಹೆಣ್ಣಿನ ಭಾವಚಿತ್ರ ಹಾಕಿಸಿ ಕರೆಯುವುದು ಈಗಿನ ಫ್ಯಾಷನ್ ಆಗಿಬಿಟ್ಟಿದೆ. ಅದರಲ್ಲೂ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ಕೆರೆಯುವಂತಹದು ಈಗ ಹೆಚ್ಚಾಗಿದೆ. ಪಟ್ಟಣದ ಹೇಮಾವತಿ ಆಫ್‌ಸೆಟ್ ಪ್ರಿಂಟರ್ಸ್‌ನ ಮಲೀಕರು ವಿಶೇಷವಾಗಿ ಪತ್ರಿಕೆಯನ್ನು ಮುದ್ರಿಸಿಕೊಟ್ಟಿದ್ದು ಸುಮಾರು ಒಂದು ವಾರ ಸಮಯ ತೆಗೆದುಕೊಂಡು ಒಂದು ಹೊಸ ಪ್ರಯತ್ನದೊಂದಿಗೆ ತಾಯಿ ಭುವನೇಶ್ವರಿ ಭಾವಚಿತ್ರ ಇರುವ ಪತ್ರಿಕೆಗೆ ಕೆಂಪು ಹಾಗೂ ಹಳದಿಯ ಕನ್ನಡ ಧ್ವಜದ ಬಣ್ಣವನ್ನೇ ಹಾಕಿರುವುದು ವಿಶೇಷ.ಮಂಜೇಗೌಡ ಎಂಬುವರು ತಮ್ಮ ಹಳ್ಳಿ ಸೊಗಡಿನ ಸಂಸ್ಕೃತಿ ಜತೆಗೆ ಕನ್ನಡ ಭಾಷಾಭಿಮಾನ ಮೆರೆದಿರುವುದು ಬೇರೆಯವರಿಗೆ ಮಾದರಿಯಾಗಿದೆ.
ತಾಲೂಕಿನಲ್ಲಿ ಅತೀ ಹಳೆಯ ಹಾಗೂ ಮೂರು ತಲೆಮಾರಿನ ಮುದ್ರಣ ಕ್ಷೇತ್ರವಾದ ನಮ್ಮ ಅಂಗಡಿಯಲ್ಲಿ ಕನ್ನಡದ ಬಗ್ಗೆ ವಿಶೇಷವಾಗಿ ಆಹ್ವಾನ ಪತ್ರಿಕೆ ಮಾಡಿಕೊಡಿ ಎಂದು ವರ ಬಂದು ಕೇಳಿಕೊಂಡಿದ್ದರಿಂದ ಒಂದು ವಾರ ಸಮಯ ತೆಗೆದುಕೊಂಡು ವಿಭಿನ್ನವಾಗಿ ಪತ್ರಿಕೆಯನ್ನು ಮುದ್ರಿಸಿಕೊಡಲಾಗಿದೆ. ಇದೊಂದು ಹೊಸ ಪ್ರಯತ್ನವಾಗಿದೆ.ಪರಿಸರ, ಹೇಮಾವತಿ ಪ್ರಿಂಟಿಂಗ್ ಪ್ರೆಸ್ ಮಾಲೀಕ.
ಕನ್ನಡದ ಬಗ್ಗೆ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದರ ಪರಿಣಾಮ ಕನ್ನಡದ ಬಗ್ಗೆ ಪ್ರೀತಿ ಹೆಚ್ಚಾಗಿ ಎಲ್ಲೇ ಹೋದರೂ ನಾನು ಕನ್ನಡಿಗ ಎಂದು ಹೇಳಿಕೊಳುತ್ತೇನೆ. ನನ್ನ ಮದುವೆಗೆ ಕನ್ನಡದ ಬಣ್ಣದಲ್ಲೇ ಮುದ್ರಿಸಿ ಹಂಚುತ್ತಿರುವುದು ಕನ್ನಡಿಗನಾದ ನನಗೆ ಹೆಮ್ಮೆ ಇದೆ.ಮಂಜೇಗೌಡ, ವರ.ಕನ್ನಡಿಗ ಮಂಜೇಗೌಡ ಅವರ ಕನ್ನಡದ ಮದುವೆ ಕರೆಯೋಲೆ.