ಶಿರಹಟ್ಟಿ: ಸರ್ಕಾರದ ವಿವಿಧ ಎಲ್ಲ ಇಲಾಖೆಗಳಲ್ಲಿ ಅಧಿಕಾರಿಗಳು ಕನ್ನಡ ಹೆಚ್ಚಾಗಿ ಬಳಸಬೇಕು. ಅದನ್ನು ಕರುಳಿನ ಭಾಷೆಯಾಗಿ ಭಾವಿಸಿದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಪ್ರೊ. ಬಸವರಾಜ ಕುಂದೂರ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಶಿರಹಟ್ಟಿ ತಾಲೂಕು ಘಟಕ ಹಾಗೂ ಬೆಳ್ಳಟ್ಟಿ ಕದಂಬ ಕಲಿಕಾ ಶಿಬಿರದ ಸಹಯೋಗದೊಂದಿಗೆ ನಡೆದ ೧೧೨ನೇ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಅವರು ಉಪನ್ಯಾಸ ನೀಡಿದರು. ಭಾರತದ ಅತ್ಯಂತ ಪ್ರಭಾವಶಾಲಿ ಭಾಷೆಗಳಲ್ಲಿ ಕನ್ನಡ ಒಂದು ಪ್ರಚಂಡ ಭಾಷೆಯಾಗಿದೆ. ನಮ್ಮ ಪರಂಪರೆ ಕಲಿಯಲು ಮಾತೃಭಾಷೆ ಅಸ್ಮಿತೆ ಉಳಿಸಲು ನಾವು ಅದನ್ನು ಉಳಿಸಿಕೊಂಡು ಹೋಗಬೇಕಿದೆ. ಇಲ್ಲವಾದರೆ ನಮ್ಮನ್ನು ನಾವೇ ಆತ್ಮಹತ್ಯೆ ಮಾಡಿಕೊಂಡಂತೆ ಆಗುತ್ತದೆ ಎಂದು ಹೇಳಿದರು.

೧೧೨ ವರ್ಷದಲ್ಲಿ ಪರಿಷತ್ತು ಕನ್ನಡ ನೆಲ, ಜಲ, ಭಾಷೆ ಬೆಳೆಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಕನ್ನಡದ ಅಸ್ಮಿತೆಗಾಗಿ ನಾವೆಲ್ಲರೂ ಒಂದಾಗಬೇಕು. ಕನ್ನಡ ಮಾತೃಭಾಷೆ, ಅದು ತಾಯಿ ಇದ್ದಂತೆ, ಅದಕ್ಕಾಗಿ ಸಾಹಿತ್ಯ ಪರಿಷತ್ತು ಹಗಲಿರುಳು ಶ್ರಮಿಸುತ್ತಿದೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ ಸಂಸ್ಕೃತಿಗಳ ಸಂವರ್ಧನೆಗೆ ಹಾಗೂ ಸಂರಕ್ಷಣೆಯ ಮಹದಾಸೆಯೊಂದಿಗೆ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ನಾಡಿನ ನಾಡು, ನುಡಿ ಮತ್ತು ಜನರ ಹಿತಾಸಕ್ತಿಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಮತ್ತು ವಿಶೇಷ ಜವಾಬ್ದಾರಿ ಈ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ ಎಂದರು.

ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡವನ್ನು ಬೃಹತ್ ಹೆಮ್ಮರವಾಗಿ ಬೆಳೆಸಬೇಕು. ಭಾಷೆ ಸದೃಢವಾಗಿದ್ದರೆ ಆ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಭಾರತದಲ್ಲಿ ಅತ್ಯಂತ ಪುರಾತನವಾದ ಭಾಷೆ ಕನ್ನಡ. ಕನ್ನಡ ಭಾಷೆಗೆ ತನ್ನದೇ ಆದ ಅಂತರ್ಗತ ಶಕ್ತಿ ಇದೆ. ಎಲ್ಲ ರಂಗಗಳಲ್ಲಿಯೂ ಕನ್ನಡಕ್ಕೆ ಸ್ಥಾನ ನೀಡಬೇಕು ಎಂದರು.

ಬಿ.ಎಂ. ಯರಕದ ಮಾತನಾಡಿ, ಸರ್ಕಾರ ಭಾಷಾ ವಿಷಯದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದೆ. ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದು ಕನ್ನಡಕ್ಕೆ ಸಂಕಷ್ಟ ತಂದೊಡ್ಡುತ್ತಿದೆ. ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ಸಂಸ್ಕೃತಿ, ಗುರುತು ಮತ್ತು ಸ್ವಾಭಿಮಾನಕ್ಕೆ ಸಂಬಂಧಿಸಿದೆ. ಆದ್ದರಿಂದ ನೀತಿಗಳು ಸ್ಪಷ್ಟವಾಗಿಯೂ, ಅನುಷ್ಠಾನ ಸಮಗ್ರವಾಗಿಯೂ ಇರಬೇಕು ಎಂದರು.


ಕಸಾಪ ಅಧ್ಯಕ್ಷ ನವೀನಕುಮಾರ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು. ಈಶಪ್ಪ ಅಕ್ಕೂರ, ಎಚ್.ಟಿ. ಬಿಜ್ಜೂರು, ವಿ.ಜಿ. ಅಂಗಡಿ, ಜಯಶ್ರೀ ಬಸವರೆಡ್ಡಿ, ಶಿವಯೋಗಿ ವಿಭೂತಿ, ಸುರೇಶ ಬಸವರೆಡ್ಡಿ, ರಮೇಶ್ ಮಲ್ಲಾಡದ, ದೇವೇಂದ್ರ ಅಂಬಣ್ಣವರ್, ವಿನಾಯಕ ಅಳವಂಡಿ, ಡಾ. ಪ್ರಭುಗೌಡರ, ರವಿ ಪಾಟೀಲ, ಎಸ್.ಯು. ಬಟ್ಟೂರ, ವೆಂಕಟೇಶ್ ಬಸವರೆಡ್ಡಿ, ಕೊಟ್ರಯ್ಯ ಹೊಂಬಾಳ್ಮಠ, ಸತೀಶ ವಾರದ ಉಪಸ್ಥಿತರಿದ್ದರು.

ಅಶೋಕ ಬಡಿಗೇರ ಅವರ ಕಲಾ ತಂಡದಿಂದ ಕನ್ನಡ ನಾಡು-ನುಡಿ ಕುರಿತಾದ ಹಾಡುಗಳನ್ನು ಹಾಡಲಾಯಿತು. ರಣತೂರು ಗ್ರಾಮದ ಶಿವಕುಮಾರ ಫಕೀರಪ್ಪ ಪಲ್ಲೇದ ನೂತನ ಪಿಎಸ್‌ಐ ಆಗಿ ಆಯ್ಕೆಯಾದ ನಿಮಿತ್ತ ಅವರನ್ನು ಕದಂಬ ಕಲಿಕಾ ಶಿಬಿರದ ವತಿಯಿಂದ ಸನ್ಮಾನಿಸಲಾಯಿತು. ಅಶೋಕ ಬಡಿಗೇರ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ನಿಮಿತ್ತ ಕಸಾಪ ವತಿಯಿಂದ ಸನ್ಮಾನಿಸಲಾಯಿತು.