ಸಾರಾಂಶ
ಮಾತೃಭಾಷೆ, ತಂದೆ-ತಾಯಿ, ಗುರು ಹಿರಿಯರಿಗೆ ಗೌರವ ನೀಡುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಕನ್ನಡ ಭಾಷೆ ಜ್ಞಾನವನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು. ಕನ್ನಡ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೇ ನಿರಂತರ ನಿತ್ಯೋತ್ಸವ ಆಗಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಶಾಲಾ ಕಾಲೇಜು ವಿದ್ಯಾರ್ಥಿಗಳ ಭಾಷೆ ಬೆಳವಣಿಗೆ, ಸ್ಪಷ್ಟ ಉಚ್ಚಾರಣೆ, ನಡೆ, ನುಡಿ, ಲಿಪಿ ಮಾಲಿನ್ಯಗಳಿಂದ ದೂರವಾಗಲು ಹಾಗೂ ಸರಳ ಕನ್ನಡ ಪದಗಳಲ್ಲಿರುವ ಅರ್ಥ, ಶ್ರೀಮಂತಿಕೆ ಹೆಚ್ಚಿಸಲು ವಿಶೇಷ ಉಪನ್ಯಾಸ, ಕಮ್ಮಟ ಸಹಾಯವಾಗುತ್ತಿದೆ ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿ ಅಧ್ಯಕ್ಷ ಓಂಕಾರಪ್ರಿಯ ಬಾಗೇಪಲ್ಲಿ ತಿಳಿಸಿದರು.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಂಸ್ಕೃತಿ ಸೇವಾ ಭಾರತಿ ವತಿಯಿಂದ ನಡೆದ ಕನ್ನಡಪದ ಸಂಪತ್ತು ವಿಶೇಷ ಉಪನ್ಯಾಸ ಕಮ್ಮಟದಲ್ಲಿ ಮಾತನಾಡಿ, ಎಲ್ಲಾ ಭಾಷೆಗಳಿಗಿಂತ ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದೆ. ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಭಾಷೆ ಜ್ಞಾನದ ಅರಿವಿನ ಕೊರತೆಯಿಂದ ಹಲವು ವಿಷಯಗಳು ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಮಾತೃಭಾಷೆ, ತಂದೆ-ತಾಯಿ, ಗುರು ಹಿರಿಯರಿಗೆ ಗೌರವ ನೀಡುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಕನ್ನಡ ಭಾಷೆ ಜ್ಞಾನವನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು. ಕನ್ನಡ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೇ ನಿರಂತರ ನಿತ್ಯೋತ್ಸವ ಆಗಬೇಕೆಂದು ಸಲಹೆ ನೀಡಿದರು.ಪ್ರಾಂಶುಪಾಲ ಶಿವಮೂರ್ತಿ ಉದ್ಘಾಟಿಸಿ ಮಾತನಾಡಿ, ಮಂಡ್ಯದಲ್ಲಿ ಸಮ್ಮೇಳನ ನಡೆಯುತ್ತಿರುವ ಪ್ರಸ್ತುತ ಕನ್ನಡ ಭಾಷೆ ಉಳಿವು ಹಾಗೂ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಓಂಕಾರಪ್ರಿಯ ಬಾಗೇಪಲ್ಲಿ ಅವರ ಸೇವೆ ಮಾದರಿಯಾಗಿದೆ ಎಂದರು.
ಮಂಡ್ಯ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ. ಇಲ್ಲಿನ ಸಂಸ್ಕೃತಿ ಆಚಾರ ವಿಚಾರಗಳು ರಾಜ್ಯದಲ್ಲಿಯೇ ವಿಭಿನ್ನವಾಗಿದೆ. ವಿದ್ಯಾರ್ಥಿಗಳು ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡದ ಪದಗಳನ್ನು ಅರ್ಥೈಸಿಕೊಳ್ಳಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಣ್ಣಪ್ಪ, ಪ್ರಶಾಂತ್ ಸೇರಿದಂತೆ ಇತರರು ಇದ್ದರು.