ಕನ್ನಡಪ್ರಭ ವರದಿ ಪರಿಣಾಮ: ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ನಿಯೋಜನೆ

| Published : Jun 13 2024, 12:48 AM IST

ಕನ್ನಡಪ್ರಭ ವರದಿ ಪರಿಣಾಮ: ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ನಿಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಮರಳು ಸಾಗಾಟ ತಡೆಯಲು ಹಗಲು-ರಾತ್ರಿ ಸಂಚರಿಸುವ ಪ್ರತಿಯೊಂದು ಮರಳು ಸಾಗಾಟ ವಾಹನಗಳ ಮೇಲೆ ನಿಗಾ ವಹಿಸಿ, ಕಡ್ಡಾಯ ತಪಾಸಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ರೋಣ

ಅಕ್ರಮ ಮರಳು ಸಾಗಾಟ ತಡೆಗಾಗಿ ತೆರೆಯಲಾದ ತಾಲೂಕಿನ ಬೆಳವಣಕಿ, ಹಿರೇಹಾಳ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಡಿ.ಎಸ್ಪಿ ಪ್ರಭುಗೌಡ ಡಿ.ಕೆ. ಅವರು ಪಿಎಸ್ಐ ಎಲ್.ಕೆ. ಜೂಲಕಟ್ಟಿ ನೇತೃತ್ವದಲ್ಲಿ ಪೊಲೀಸ್ ತಂಡ ನಿಯೋಜಿಸಿ, ಹಗಲು-ರಾತ್ರಿ ಸಂಚರಿಸುವ ಪ್ರತಿಯೊಂದು ಮರಳು ಸಾಗಾಟ ವಾಹನಗಳ ಮೇಲೆ ನಿಗಾ ವಹಿಸಿ, ಕಡ್ಡಾಯ ತಪಾಸಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

ತಾಲೂಕಿನಲ್ಲಿ ಅಕ್ರಮ ಮರಳು ಹಾಗೂ ಓವರ್ ಲೋಡ್ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿರುವ ಕುರಿತು, ಇದರಿಂದ ಸರ್ಕಾರದ ಬೊಕ್ಕಸಕ್ಕಾಗುವ ನಷ್ಟ, ಅಧಿಕೃತ ಪಾಯಿಂಟ್ ಗಳಲ್ಲಿಯೇ ನಿಯಮ ಉಲ್ಲಂಘನೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಕನ್ನಡಪ್ರಭ ಜೂ. 11ರಂದು "ಅನಧಿಕೃತ ಮರಳು ದಂಧೆ ಅವ್ಯಾಹತ ", ಜೂ. 12ರಂದು "ಒಂದೇ ಪಾಸ್‌ಗೆ ಮೂರು ಲೋಡ್ ಮರಳು " ಸಾಗಾಟ ಎಂಬ ವಿಸ್ತೃತ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಡಿಎಸ್ಪಿ ಪ್ರಭುಗೌಡ ಡಿ.ಕೆ., ಪಿ.ಎಸ್.ಐ. ಎಲ್.ಕೆ. ಜೂಲಕಟ್ಟಿ ತಾಲೂಕಿನ ಬೆಳವಣಕಿ, ಹಿರೇಹಾಳ ಚೆಕ್ ಪೋಸ್ಟ್‌ಗೆ ತೆರಳಿ ಅಲ್ಲಿ ಪೊಲೀಸ್ ಸಿಬ್ಬಂದಿ ನೇಮಿಸಿ, ಮರಳು ಸಾಗಾಟ ಪ್ರತಿಯೊಂದು ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಈ ಹಿಂದೆ ಮರಳು ಸಾಗಾಟ ವಾಹನಗಳ ಚಾಲಕ, ಮಾಲೀಕರಿಂದ ತಹಸೀಲ್ದಾರ್‌ ಸಮ್ಮುಖದಲ್ಲಿ ಬರೆಯಿಸಿಕೊಂಡ 7 ಅಂಶ ಮುಚ್ಚಳಿಕೆ ಪಾಲನೆ ಮಾಡಲಾಗುತ್ತಿದೆಯೋ? ಅಥವಾ ಉಲ್ಲಂಘಿಸಲಾಗುತ್ತಿದೆಯೋ ಎಂಬುದನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಯಾವುದೇ ಮುಲಾಜಿಲ್ಲದೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಡಿಎಸ್ಪಿ ಪ್ರಭುಗೌಡ ಡಿ.ಕೆ. ಚೆಕ್ ಪೋಸ್ಟ್‌ಗಳಲ್ಲಿ ನಿಯೋಜಿಸಿದ ಸಿಬ್ಬಂದಿಗೆ ಸೂಚಿಸಿದರು.

ಬಳಿಕ ತಾಲೂಕಿನ ಬಳಗೋಡ, ಹಿರೇಹಾಳ ಸಮೀಪದಲ್ಲಿನ ಅಧಿಕೃತ ಮರಳು ಸಾಗಾಟ ಪಾಯಿಂಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿ, ನಿಯಮ ಉಲ್ಲಂಘಿಸಿ ಓವರ್ ಲೋಡ ಮರಳು ಸಾಗಟ ಮಾಡದಂತೆ, ಪಾಸ್ ವಿತರಿಸದೇ ಮರಳು ತುಂಬಿಸದಂತೆ, ವೇಬ್ರಿಡ್ಜ್‌ ಮೂಲಕವೇ ನಿಗದಿತ ಪ್ರಮಾಣದಲ್ಲಿ ಉಸುಕು ಲೋಡ್ ಮಾಡುವಂತೆ ಮರಳು ಪಾಯಿಂಟ್ ಮಾಲೀಕರಿಗೆ ಡಿಎಸ್ಪಿ ಪ್ರಭುಗೌಡ ಡಿ.ಕೆ. ಸೂಚನೆ ನೀಡಿದರು.

ಹೆಚ್ಚಿನ ಸಿಬ್ಬಂದಿ ನಿಯೋಜನೆ

ಓವರ್ ಲೋಡ್‌ ಮರಳು ಹಾಗೂ ಅಕ್ರಮ ಮರಳು ಸಾಗಾಟ ತಡೆಗೆ ಈಗಾಗಲೇ ಇರುವ ಚೆಕ್ ಪೋಸ್ಟ್‌ಗಳಲ್ಲಿ ಪಿ.ಎಸ್‌.ಐ. ಎಲ್.ಕೆ. ಜೂಲಕಟ್ಟಿ ನೇತೃತ್ವದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು. ಮರಳು ಸಾಗಿಸುವ ಪ್ರತಿಯೊಂದು ವಾಹನ ಕಡ್ಡಾಯವಾಗಿ ತಪಾಸಣೆ‌ ಮಾಡಲಾಗುವುದು. ಕಳೆದ ವರ್ಷ ಏಪ್ರಿಲ್ ಅಂತ್ಯದೊಳಗೆ ಅಕ್ರಮ ಮರಳು ಸಾಗಾಟ ಮಾಡುವ 13 ವಾಹನಗಳ ಮೇಲೆ ಪ್ರಕರಣ ದಾಖಲಿಸಿ, ಒಟ್ಟು ₹7.59 ಲಕ್ಷ ದಂಡ ಹಾಕಲಾಗಿದೆ.

ಪ್ರಭುಗೌಡ ಡಿ.ಕೆ. ಡಿಎಸ್ಪಿ ನರಗುಂದ ವಿಭಾಗ.

ಮಿಂಚಿನ ಸಂಚಾರ

ರೋಣ ತಾಲೂಕಿನಲ್ಲಿ ಓವರ್ ಲೋಡ್ ಮರಳು ಸಾಗಾಟ ವಾಹನ ಸಂಚಾರ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಾರದಲ್ಲಿ ಎರಡ್ಮೂರು ದಿನ ರೋಣ ತಾಲೂಕಿನಲ್ಲಿಯೇ ಮಿಂಚಿನ ಸಂಚಾರ ಮಾಡಿ, ಯಾವುದೇ ಓವರ್ ಲೋಡ್ ವಾಹನಗಳು ಕಣ್ತಪ್ಪಿಸಿಕೊಂಡು ಹೋಗದಂತೆ ನಿಗಾ ವಹಿಸಲಾಗುವುದು. ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಪ್ರಕರಣ ಹಾಗೂ ದಂಡ ವಿಧಿಸಲಾಗುವುದು.

ಬಾಲಚಂದ್ರ, ಆರ್.ಟಿ.ಒ ಇನ್‌ಸ್ಪೆಕ್ಟರ್, ಗದಗಮುಲಾಜಿಲ್ಲದೆ ಕ್ರಮ

ರೋಣ ತಾಲೂಕಿನಲ್ಲಿ ಎಲ್ಲೆಲ್ಲಿ ಅಕ್ರಮ ಮರಳು ದಂಧೆ ನಡೆದಿದೆಯೋ ಎಂಬುದರ ಕುರಿತು ತೀವ್ರ ಕಾರ್ಯಾಚರಣೆ ನಡೆಸಿ, ಅಧಿಕೃತ ಪಾಯಿಂಟ್‌ಗಳು ನಿಯಮ ಉಲ್ಲಂಘಿಸಿದ್ದಾಗಲಿ, ಜಮೀನುಗಳಲ್ಲಿ ಅಕ್ರಮ ಮರಳು ಸಾಗಾಟ ಮಾಡಿದ್ದು ಕಂಡು ಬಂದಲ್ಲಿ, ಅಂತಹ ಜಮೀನಗಳ ಮೇಲೆ‌ ಬೋಜಾ ದಾಖಲಿಸಲಾಗುವುದು. ಅಕ್ರಮ ಮರಳು ಸಾಗಾಟ ದಂಧೆಯಲ್ಲಿ ಯಾರೇ ತೊಡಗಿದಲ್ಲಿ ಅಂತಹವರ ಮೇಲೆ ಮುಲಾಜಿಲ್ಲದೇ ಪ್ರಕರಣ ದಾಖಲಿಸಲಾಗುವುದು.

ಚಿದಂಬರ, ಗದಗ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ.