ಸಾರಾಂಶ
ಐವತ್ತರ ದಶಕದಲ್ಲಿಯೇ ಮೈಸೂರು ಆಕಾಶವಾಣಿ ಮೂಲಕ ಎಚ್.ಆರ್. ಲೀಲಾವತಿ ಅವರು ಸುಗಮ ಸಂಗೀತ ಆರಂಭಿಸಿ ಸುಮಾರು ಐವತ್ತು ವರ್ಷಗಳ ಕಾಲ ಹಾಡಿ, ಕರ್ನಾಟಕದ ಲತಾ ಮಂಗೇಶ್ಕರ್ ಎಂದೇ ಖ್ಯಾತರಾಗಿದ್ದರು. ಅವರು ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಮೂಲಕ ಸಹಸ್ರಾರು ಶಿಷ್ಯರನ್ನು ತಯಾರು ಮಾಡಿದ್ದು, ದೇಶ- ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಖ್ಯಾತ ಸುಗಮ ಸಂಗೀತ ಗಾಯಕಿ ಎಚ್.ಆರ್.ಲೀಲಾವತಿ ಅವರ ನೇತೃತ್ವದಲ್ಲಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಜೆಎಲ್.ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದ ಸಂಗೀತ ಕಲಾನಿಧಿ ಮೈಸೂರು ವಾಸು ದೇವಾಚಾರ್ಯ ಭವನದಲ್ಲಿ ಕನ್ನಡವೆಮ್ಮಯ ಪ್ರಾಣ -ರಾಜ್ಯೋತ್ಸವದ ಸಂಭ್ರಮದಲ್ಲಿ ಕನ್ನಡ ಭಾವಗೀತೆಗಳ ಗಾಯನ ಸಂಗೀತ ಪ್ರಿಯರ ಮನತಣಿಸಿತು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಕನ್ನಡ ಕವಿಗಳ ಕವನಗಳನ್ನು ತಮ್ಮ ಗಾಯನದ ಮೂಲಕ ಕನ್ನಡಿಗರ ಮನೆ- ಮನಗಳಿಗೆ ತಲುಪಿಸಿದ ಕೀರ್ತಿ ಸುಗಮ ಸಂಗೀತ ಗಾಯಕ- ಗಾಯಕರಿಗೆ ಸಲ್ಲುತ್ತದೆ ಎಂದರು.
ಐವತ್ತರ ದಶಕದಲ್ಲಿಯೇ ಮೈಸೂರು ಆಕಾಶವಾಣಿ ಮೂಲಕ ಎಚ್.ಆರ್. ಲೀಲಾವತಿ ಅವರು ಸುಗಮ ಸಂಗೀತ ಆರಂಭಿಸಿ ಸುಮಾರು ಐವತ್ತು ವರ್ಷಗಳ ಕಾಲ ಹಾಡಿ, ಕರ್ನಾಟಕದ ಲತಾ ಮಂಗೇಶ್ಕರ್ ಎಂದೇ ಖ್ಯಾತರಾಗಿದ್ದರು. ಅವರು ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಮೂಲಕ ಸಹಸ್ರಾರು ಶಿಷ್ಯರನ್ನು ತಯಾರು ಮಾಡಿದ್ದು, ದೇಶ- ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ಪ್ರಾಥಮಿಕ ಹಂತದಿಂದಲೇ ಸಂಗೀತ ಮತ್ತು ನೃತ್ಯ ಕಲಿಸಬೇಕು. ಅಕಾಡೆಮಿಗಳು ಕೂಡ ಸಂಗೀತ ಮತ್ತು ನೃತ್ಯಕ್ಕೆ ಸಮಾನ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ಮುಖ್ಯಅತಿಥಿಯಾಗಿದ್ದ ಶ್ರೀನಿಧಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಪ್ರಭಾಕರ ರಾವ್ ಮಾತನಾಡಿ, ಕೆಲಸದ ಸ್ಥಳ ಇರಲಿ, ಮನೆ ಇರಲಿ ಪ್ರತಿಯೊಬ್ಬರಿಗೂ ಸಮಯ ಪ್ರಜ್ಞೆ ಮುಖ್ಯ. ಇಲ್ಲದಿದ್ದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂದರು.ಎಚ್.ಆರ್. ಲೀಲಾವತಿ, ಡಾ.ಮಾಲಿನಿ ರಾವ್ ಇದ್ದರು. ಶ್ರೀನಿವಾಸ ಪದಕಿ ಸ್ವಾಗತಿಸಿದರು. ಸುಕುಮಾರ್ ಎಸ್. ರಘುರಾಂ ನಿರೂಪಿಸಿದರು.
ಹೊರಗಡೆ ಮಳೆ ಸುರಿಯುತ್ತಿತ್ತು. ಏತನ್ಮಧ್ಯೆ ಸಭಾಂಗಣದಲ್ಲಿ ಲೀಲಾ ರವಿಶಂಕರ್, ಕೆ.ಪಿ. ರೇವತಿ, ರೇಖಾ ಅರುಣ್, ಡಾ. ಸುಷ್ಮಾ ಕೃಷ್ಣಮೂರ್ತಿ, ಶ್ರೀನಿವಾಸ ಪದಕಿ, ದೀಪಶ್ರೀ ಪ್ರಣವ್, ಶೈಲಜಾ ಚಂದ್ರಶೇಖರ್, ಭುವನೇಶ್ವರಿ ವೆಂಕಟೇಶ್, ನಯನಾ ಗಣೇಶ್, ಡಾ.ಶ್ರೀದೇವಿ ಕುಳೇನೂರ್, ವಿಜಯಾ ಪ್ರಸಾದ್, ಮಮತಾ ರವೀಂದ್ರ, ಅಶ್ವಿನ್ ಪ್ರಭು, ವೀಣಾ, ದಿಶಾ ಗಿರಿಯನ್, ಅನುರಾಧಾ, ರಶ್ಮಿ ಬಾಲಗೋಪಾಲನ್, ಸ್ಮಿತಾ ಸೋಮೇಶ್ವರ, ಎಲ್.ಕೆ. ಸುಷ್ಮಾ, ಮೈಥಿಲಿ ಮಂಡ್ಯಂ ಅವರಿಂದ ಗಾಯನಗಳ ಸುರಿಮಳೆ. ಎಲ್ಲರೂ ಸಭಿಕರ ಮೆಚ್ಚುಗೆಗೆ ಪಾತ್ರರಾದರು.ಪಕ್ಕವಾದ್ಯದಲ್ಲಿ ವಿಶ್ವನಾಥ್, ಸಮೀರ್ ರಾವ್, ಆತ್ಮಾರಾಂ, ಷಣ್ಮುಖ ಸಜ್ಜ, ವಿನಯ್ ರಂಗದೋಳ್ ಸಾಥ್ ನೀಡಿದರು.