ಸಾರಾಂಶ
ಬಬಲೇಶ್ವರ ತಾಲೂಕಿನಲ್ಲಿ ಕೆಲವು ವ್ಯಕ್ತಿಗಳು ಮಹಾರಾಷ್ಟ್ರದ ಯುವಕರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಗಡಿನಾಡ ಯುವಕರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ಪಡೆಯುವಂತೆ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಮಹಾರಾಷ್ಟ್ರದ ಯುವಕರ ನಕಲಿ ದಾಖಲೆ ಸೃಷ್ಟಿಸಿ ಗಡಿನಾಡ ಯುವಕರಿಗೆ ದೊರಕಬೇಕಾದ ಸೌಲಭ್ಯಗಳನ್ನು ಅನ್ಯರಿಗೆ ದೊರಕಿಸುವ ಕಾರ್ಯ ನಡೆಯುತ್ತಿದ್ದು, ಬಬಲೇಶ್ವರ ತಾಲೂಕಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂದು ಕರ್ನಾಟಕ ಯುವ ಘರ್ಜನೆ ಸಂಘಟನೆ ರಾಜ್ಯಾಧ್ಯಕ್ಷ ಬಸವರಾಜ ಖಂಡೇಕರ ಒತ್ತಾಯಿಸಿದರು.ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಕರ್ನಾಟಕ ಯುವ ಘರ್ಜನೆ ನೇತೃತ್ವದಲ್ಲಿ ಆಯೋಜಿಸಿದ್ದ ಗಡಿ ಕನ್ನಡಿಗರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಬಬಲೇಶ್ವರ ತಾಲೂಕಿನಲ್ಲಿ ಕೆಲವು ವ್ಯಕ್ತಿಗಳು ಮಹಾರಾಷ್ಟ್ರದ ಯುವಕರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಗಡಿನಾಡ ಯುವಕರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ಪಡೆಯುವಂತೆ ಮಾಡುತ್ತಿದ್ದಾರೆ. ಇದರಲ್ಲಿ ಯಾರ ಕೈವಾಡವಿದೆ ಎಂಬುದು ಬಯಲಾಗಬೇಕಿದೆ. ತಿಕೋಟಾ ತಾಲೂಕು ಆಡಳಿತ ಈ ಬಗ್ಗೆ ಗಮನ ಹರಿಸಿ ಈ ರೀತಿಯ ಪ್ರಕರಣಗಳನ್ನು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದರು.ಸಾನ್ನಿಧ್ಯ ವಹಿಸಿದ ಶ್ರೀ ಬಾಬು ಮಹಾರಾಜರು ಆಶೀವರ್ಚನ ನೀಡಿ, ಕನ್ನಡ ಭಾಷೆ ಅಮೃತವಿದ್ದಂತೆ. ಹೀಗಾಗಿ ಎಲ್ಲೆಲ್ಲೂ ಕನ್ನಡದ ವಾತಾವರಣ ನಿರ್ಮಾಣಕ್ಕೆ ಕನ್ನಡಪ ಸಂಘಟನೆಗಳು ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು.
ತಿಕೋಟಾ ತಾಲೂಕು ಕಸಾಪ ಅಧ್ಯಕ್ಷ ಸಿದ್ಧರಾಮಯ್ಯ ಲಕ್ಕುಂಡಿಮಠ ಮಾತನಾಡಿದರು. ಮಾಜಿ ಸೈನಿಕರಾದ ಮಲ್ಲಪ್ಪ ಯಡವೆ, ಪ್ರವೀಣ ಪವಾರಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕರ್ನಾಟಕ ಯುವಗರ್ಜನೆಯ ಗೌರವಾಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಮಿರ್ಜಿ, ಅಡಿವೆಪ್ಪ ಸಾಲಗಲ್ಲ, ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಯಡವೆ, ಮುತ್ತಪ್ಪ ಶಿವಣ್ಣವರ, ಶರತ ಬಿರಾದಾರ, ಸಂಗಮೇಶ ಜಾಧವ, ಬಸವರಾಜ ತಾಳಿಕೋಟಿ ಉಪಸ್ಥಿತರಿದ್ದರು.