ಹಿಂದಿ ಹೇರಿಕೆಗೆ ಕನ್ನಡಿಗರ ಆಕ್ರೋಶ

| Published : Sep 16 2024, 01:55 AM IST / Updated: Sep 16 2024, 01:56 AM IST

ಸಾರಾಂಶ

ದೊಡ್ಡಬಳ್ಳಾಪುರ: ನಗರದ ಭಗತ್ ಸಿಂಗ್ ಮೈದಾನದ ಬಳಿಯಿರುವ ಅಂಚೆ ಕಚೇರಿಯ ಆವರಣದಲ್ಲಿ ಕನ್ನಡ ಪಕ್ಷದ ವತಿಯಿಂದ ಕೇಂದ್ರ ಸರಕಾರದ ಹಿಂದಿ ಹೇರಿಕೆ ಖಂಡಿಸಿ ಮತ್ತು ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಮಾಡುತ್ತಿರುವ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ದೊಡ್ಡಬಳ್ಳಾಪುರ: ನಗರದ ಭಗತ್ ಸಿಂಗ್ ಮೈದಾನದ ಬಳಿಯಿರುವ ಅಂಚೆ ಕಚೇರಿಯ ಆವರಣದಲ್ಲಿ ಕನ್ನಡ ಪಕ್ಷದ ವತಿಯಿಂದ ಕೇಂದ್ರ ಸರಕಾರದ ಹಿಂದಿ ಹೇರಿಕೆ ಖಂಡಿಸಿ ಮತ್ತು ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಮಾಡುತ್ತಿರುವ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಕನ್ನಡ ಪಕ್ಷದ ಮುಖಂಡ ಸಂಜೀವ್ ನಾಯ್ಕ್ ಮಾತನಾಡಿ, ಕೇಂದ್ರ ಸರಕಾರ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಒಪ್ಪಿಗೆ ನೀಡಬೇಕು. ಕುಡಿಯುವ ನೀರಿನ ವಿಚಾರದಲ್ಲಿಯೂ ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ರಾಜಕೀಯ ಮಾಡುತ್ತಿವೆ. ಇದನ್ನು ಕನ್ನಡಿಗರು ಪ್ರತಿಭಟಿಸಬೇಕು‌. ಕನ್ನಡಿಗರು ಇಂದು ನಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಸಂಸದರು ಧ್ವನಿ ಎತ್ತಬೇಕು. ಸರ್ಕಾರ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಾ ಬಂದಿದೆ. ಇದರಿಂದ ರಾಜ್ಯದ ಭಾಷೆ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯುಂಟಾಗುತ್ತಿದೆ. ಕೇಂದ್ರ ಸರಕಾರದಿಂದ ಕನ್ನಡ ಭಾಷೆಯನ್ನು ನಿಷ್ಕ್ರಿಯಗೊಳಿಸುವ ಹುನ್ನಾರ ನಡೆಯುತ್ತಿದೆ. ಕನ್ನಡಿಗರೇ ಸ್ಥಾಪಿಸಿ ಬೆಳೆಸಿದ ಬ್ಯಾಂಕ್ ಗಳನ್ನು ವಿಲೀನಗೊಳಿಸಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಒಂದೇ ಭಾಷೆ ಒಂದೇ ದೇಶ ಎಂಬ ಕಲ್ಪನೆ ಅಡಿಯಲ್ಲಿ ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸುತ್ತಾ ಬಂದಿದೆ, ಈ ಬಗ್ಗೆ ನಾಗರೀಕರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಅಪಾಯ ಕಟ್ಟಿಟ ಬುತ್ತಿ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಪಿ ಆಂಜನೇಯ ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲೂಕು ಗೌರವಾಧ್ಯಕ್ಷ ರಂಗನಾಥ್, ಅಧ್ಯಕ್ಷ. ಡಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಕರವೇ ಪ್ರವೀಣ್ ಶೆಟ್ಟಿ ಬಳಗದ ವೆಂಕಟೇಶ್, ಕನ್ನಡ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ನಂಜಪ್ಪ, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಗುರುರಾಜಪ್ಪ, ಪ್ರಜಾವಿಮೋಚನಾ ಚಳುವಳಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯಹನುಮಣ್ಣ, ಶಿವರಾಜಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ್ ಮತ್ತಿತರರು ಭಾಗಿಯಾದರು.

15ಕೆಡಿಬಿಪಿ6-

ದೊಡ್ಡಬಳ್ಳಾಪುರದಲ್ಲಿ ಕನ್ನಡ ಪಕ್ಷದ ನೇತೃತ್ವದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.