ಸಾರಾಂಶ
ಕನ್ನಡಪ್ರಭ ವಾರ್ತೆ, ಬೆಂಗಳೂರು
ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ಹಲ್ಲೆ ನಡೆಸಿದ್ದಲ್ಲದೆ ಭಾಷಾ ವಿಚಾರ ಎಳೆದುತಂದು ಕನ್ನಡಿಗರ ಮೇಲೆಯೇ ಗೂಬೆ ಕೂರಿಸಲು ಯತ್ನಿಸಿದ ಘಟನೆಯಿಂದ ಕೆರಳಿರುವ ಕನ್ನಡಪರ ಸಂಘಟನೆಗಳು ಹಿಂದಿ ಭಾಷಿಕರು ತಮ್ಮ ಪುಂಡಾಟ ನಿಲ್ಲಿಸದಿದ್ದರೆ ‘ಉತ್ತರ ಭಾರತೀಯರೇ ಬೆಂಗಳೂರು ಬಿಟ್ಟು ತೊಲಗಿ’ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.ಇತ್ತೀಚೆಗಷ್ಟೇ ಕನ್ನಡಿಗನಿಗೆ ಹಿಂದಿಯಲ್ಲೇ ಮಾತನಾಡುವಂತೆ ಹಿಂದಿವಾಲಾ ಧಮಕಿ ಹಾಕಿದ್ದ ಘಟನೆಯ ಬೆನ್ನಲ್ಲೇ ವಿಂಗ್ ಕಮಾಂಡರ್ ಪ್ರಕರಣ ನಡೆದಿರುವುದು ಕನ್ನಡಿಗರ ಆಕ್ರೋಶ ಹೆಚ್ಚಲು ಕಾರಣವಾಗಿದೆ. ರಸ್ತೆಯಲ್ಲಿ ಆದ ಗಲಾಟೆಯೊಂದನ್ನು ಭಾಷಾ ಗಲಾಟೆಯೆಂದು ಬಿಂಬಿಸಿದ ವಿಂಗ್ ಕಮಾಂಡರ್ ಸುಳ್ಳಿನ ಕಂತೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ರಾಷ್ಟ್ರೀಯ ಮಾಧ್ಯಮಗಳು ಬೆಂಬಲಿಸಿ ಕನ್ನಡಿಗರನ್ನು, ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಅವಮಾನಿಸಿರುವುದನ್ನು ಕನ್ನಡಪರ ಸಂಘಟನೆಗಳು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ವಿಂಗ್ ಕಮಾಂಡರ್ ಶಿಲಾದಿತ್ಯನ ಮೇಲೆ ಹಲ್ಲೆಯಾಗಿದ್ದರೆ ಪೊಲೀಸ್ ದೂರು ಕೊಡಬಹುದಿತ್ತು. ಅದುಬಿಟ್ಟು ಬೌನ್ಸರ್ ಮಾದರಿಯಲ್ಲಿ ಕನ್ನಡಿಗನ ಮೇಲೆ ದಾಳಿ ಮಾಡಿ ಮನಸೋಇಚ್ಛೆ ಬೂಟ್ ಕಾಲಿನಲ್ಲಿ ಒದ್ದಿದ್ದಾನೆ. ಆ ನಂತರ ಕನ್ನಡದ ವಿಚಾರಕ್ಕಾಗಿಯೇ ತನ್ನ ಮೇಲೆ ಹಲ್ಲೆ ಮಾಡಲಾಗಿದೆ. ಸಾರ್ವಜನಿಕರು ಕೂಡ ದಾಳಿ ಮಾಡಲು ಬಂದಿದ್ದರು. ನಮಗೆ ಸಹಾಯ ಮಾಡಿ ಎಂದು ವಿಡಿಯೋ ಚಿತ್ರೀಕರಣ ಮಾಡಿ ಸಂಪೂರ್ಣ ಘಟನೆಯನ್ನು ಹಿಂದಿ ವರ್ಸಸ್ ಕನ್ನಡಿಗ ಎಂದು ಪರಿವರ್ತಿಸಲು ಯತ್ನಿಸಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡಿದ್ದಾನೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿಕಾರಿದ್ದಾರೆ.ಬೆಂಗಳೂರು ಬಿಟ್ಟು ತೊಲಗಿ ಚಳವಳಿ!
ಉತ್ತರ ಭಾರತೀಯರು ಕನ್ನಡಿಗರು, ಕನ್ನಡ ಭಾಷೆ ಮೇಲೆ ದಾಳಿ ನಡೆಸಿ ಅವಮಾನಿಸುವ, ರಾಷ್ಟ್ರಮಟ್ಟದಲ್ಲಿ ಕನ್ನಡಿಗರು ಗೂಂಡಾಗಳು ಎಂದು ಬಿಂಬಿಸಲು ಹೊರಟರೆ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಮರಾಠಿಗರು ಮತ್ತು ಹಿಂದಿವಾಲಾಗಳ ನಡುವೆ ಮಹಾರಾಷ್ಟ್ರದಲ್ಲಿ ಈ ಹಿಂದೆ ನಡೆದ ಘಟನೆ ಬೆಂಗಳೂರಿನಲ್ಲಿ ಮರುಕಳಿಸಬೇಕಾಗುತ್ತದೆ. ಕನ್ನಡಿಗರನ್ನು ಅವಮಾನಿಸುವ, ದಬ್ಬಾಳಿಕೆ ಮಾಡುವ ಯಾವೊಬ್ಬ ಉತ್ತರ ಭಾರತೀಯನೂ ಇಲ್ಲಿ ಉಳಿಯಲು ಬಿಡುವುದಿಲ್ಲ. ಬೆಂಗಳೂರು ಬಿಟ್ಟು ತೊಲಗಿ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಕನ್ನಡ ಪರ ಸಂಘಟನೆಗಳ ಬಿಗಿಪಟ್ಟು:ವಿಂಗ್ ಕಮಾಂಡರ್ ಮತ್ತು ಬೈಕರ್ ನಡುವೆ ಗಲಾಟೆಯಾಗಿ 15 ನಿಮಿಷದಲ್ಲಿ ಬೈಕರ್‌ನ್ನು ವಶಪಡಿಸಿಕೊಂಡ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದರು. ಆದರೆ, ವಿಂಗ್ ಕಮಾಂಡರ್ ವಿರುದ್ಧ ದೂರನ್ನು ಕೂಡ ಪಡೆದಿರಲಿಲ್ಲ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರಾದ ಕನ್ನಡಿಗರನ್ನೇ ಪೊಲೀಸರು ಆರೋಪಿಗಳನ್ನಾಗಿ ನೋಡುತ್ತಿದ್ದಾರೆ ಎಂದು ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಭಾರತೀಯ ಸೇನೆಯ ಯೋಧನಾಗಿ ರೌಡಿಯಂತೆ ವರ್ತಿಸಿ ಕನ್ನಡಿಗರನ್ನು ಅವಮಾನಿಸಿರುವ ವಿಂಗ್ ಕಮಾಂಡರ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂಬು ಪಟ್ಟುಹಿಡಿದ ಕರ್ನಾಟಕ ರಕ್ಷಣಾ ವೇದಿಕೆ, ಯುವ ಕರ್ನಾಟಕ ವೇದಿಕೆ, ಕರ್ನಾಟಕ ರಾಷ್ಟ್ರಸಮಿತಿ, ನಮ್ಮ ನಾಡು, ನಮ್ಮ ಆಳ್ವಿಕೆ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಮುಂದೆ ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದ್ದರಿಂದ ಆರೋಪಿ ಶಿಲಾದಿತ್ಯನ ವಿರುದ್ಧ ಪ್ರಕರಣ ದಾಖಲಾಗಿದೆ. ಇದು ಕನ್ನಡಪರ ಹೋರಾಟಗಾರರ ಹೋರಾಟದ ಫಲ ಎಂದು ಯುವ ಕರ್ನಾಟಕ ವೇದಿಕೆಯ ರೂಪೇಶ್ ರಾಜಣ್ಣ ‘ಕನ್ನಡಪ್ರಭ’ಕ್ಕೆ ತಿಳಿಸಿದರು.ಸುಮ್ಮನೆ ಬಿಡಲ್ಲ: ಕರವೇ
ಕನ್ನಡದ ನೆಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದೆ. ವಿಂಗ್ ಕಮ್ಯಾಂಡರ್ ಎಂದು ಹೇಳಿಕೊಂಡ ವ್ಯಕ್ತಿ ವಿಡಿಯೋ ಮೂಲಕ ಕನ್ನಡಿಗರನ್ನು ದುಷ್ಕರ್ಮಿಗಳು, ರೌಡಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾನೆ. ನ್ಯಾಷನಲ್ ಮೀಡಿಯಾಗಳು ಕನ್ನಡಿಗರನ್ನು ಥಗ್ಸ್ ಕರೆದು ಅವಮಾನಿಸಿವೆ. ಕನ್ನಡಿಗರ ಮೇಲೆ ಇದೆ ರೀತಿ ದೌರ್ಜನ್ಯಗಳು ನಡೆದರೆ, ಕನ್ನಡಿಗರನ್ನು ಗೂಂಡಾಗಳು ಎಂಬಂತೆ ಬಿಂಬಿಸಲು ಯಾರಾದರೂ ಯತ್ನಿಸಿದರೆ ನಾವು ಇನ್ನೂ ಮುಂದೆ ಸುಮ್ಮನೆ ಬಿಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಕೆ.ನಾರಾಯಣಗೌಡ ಎಚ್ಚರಿಸಿದ್ದಾರೆ.