ಇಂದಿನಿಂದ ಕನ್ನರ್ಪಾಡಿ ಗಣೇಶೋತ್ಸವ

| Published : Aug 25 2025, 01:00 AM IST

ಸಾರಾಂಶ

ಆ.25ರಂದು ಸಂಜೆ ಜೋಡುಕಟ್ಟೆಯಿಂದ ಗಣಪತಿ ಮೈದಾನದ ವರೆಗೆ ಭಕ್ತರ ಭವ್ಯ ಮೆರವಣಿಗೆಯೊಂದಿಗೆ ಈ ಬಾರಿ ಗಣೇಶೋತ್ಸವ ಆರಂಭವಾಗಲಿದೆ. ಗಣೇಶೋತ್ಸವವನ್ನು ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ನಾಡೋಜಿ ಜಿ.ಶಂಕರ್ ಸಭಾಧ್ಯಕ್ಷತೆ ವಹಿಸಲಿದ್ದು, ಸ್ವೀಕರ್ ಯು.ಟಿ.ಖಾದರ್ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ.

14 ದಿನ ವೈಭವಯುತ ಉತ್ಸವ, ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಉಡುಪಿ

ಕಿನ್ನಿಮುಲ್ಕಿಯ ಕನ್ನರ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 20ನೇ ಗಣೇಶೋತ್ಸವವನ್ನು ಆ.25ರಿಂದ ಸೆ.7ರ ವರೆಗೆ 14 ದಿನ ಹಿಂದೆಂದಿಗಿಂತಲೂ ಹೆಚ್ಚು ವೈವಿಧ್ಯಮಯ ಮತ್ತು ವೈ‍ಭವದಿಂದ ನಡೆಸಲಾಗುತ್ತದೆ ಎಂದು ಸಮಿತಿಯ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಹೇಳಿದ್ದಾರೆ.ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಾರಿಯ ಗಣೇಶೋತ್ಸವದ ಬಗ್ಗೆ ವಿವರಗಳನ್ನು ನೀಡಿದರು.

ಆ.25ರಂದು ಸಂಜೆ ಜೋಡುಕಟ್ಟೆಯಿಂದ ಗಣಪತಿ ಮೈದಾನದ ವರೆಗೆ ಭಕ್ತರ ಭವ್ಯ ಮೆರವಣಿಗೆಯೊಂದಿಗೆ ಈ ಬಾರಿ ಗಣೇಶೋತ್ಸವ ಆರಂಭವಾಗಲಿದೆ. ಗಣೇಶೋತ್ಸವವನ್ನು ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ನಾಡೋಜಿ ಜಿ.ಶಂಕರ್ ಸಭಾಧ್ಯಕ್ಷತೆ ವಹಿಸಲಿದ್ದು, ಸ್ವೀಕರ್ ಯು.ಟಿ.ಖಾದರ್ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ. ವಿ.ಪ. ಸದಸ್ಯರಾದ ಐವನ್ ಡಿಸೋಜ ಉಗ್ರಾಣ ಮುಹೂರ್ತ, ಮಂಜುನಾಥ ಭಂಡಾರಿ ಧ್ವಜಾರೋಹಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ ವಿದ್ಯುದ್ದೀಪ ಅಲಂಕಾರ ಅನಾವರಣ, ಮಾಜಿ ಲೋಕಸಭಾ ಸದಸ್ಯ ಜಯಪ್ರಕಾಶ್‌ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಅನೇಕ ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.ಆ.26ರಂದು ಧಾರ್ಮಿಕ ಸಭೆಯನ್ನು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥರು ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಆ.27ರಂದು ಗಣೇಶನ ವಿಗ್ರಹ ಸ್ಥಾಪನೆ, ಪ್ರಾಣಪ್ರತಿಷ್ಠೆ, ಆ.28ರಂದು 108 ಕಾಯಿ ಗಣಯಾಗ, ಆ.29ರಂದು ಲಕ್ಷ್ಮೀಗಣಪತಿ ಹೋಮ, ಆ.30ರಂದು ಸಹಸ್ರಮೋದಕ ಗಣಯಾಗ, ಆ.31ರಂದು ಪ್ರಸನ್ನಗಣಪತಿ ಹೋಮ, ಸೆ.1ರಂದು ಬಾಲಗಣಪತಿ ಹೋಮ, ಸೆ.2ರಂದು 1008 ಕಾಯಿ ಗಣಯಾಗ, ಸೆ.3ರಂದು ಏಕಾದಶಿ, ಸೆ.4ರಂದು 108 ಕಾಯಿ ಗಣಯಾಗ, ಸೆ.5ರಂದು ಹರಿದ್ರಾಗಣಪತಿ ಯಾಗ ನಡೆಯಲಿವೆ. ಸೆ.6ರಂದು ಅಥರ್ವಶೀರ್ಷ ಗಣಯಾಗ, ಸಂಜೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಲಿವೆ.ಸೆ.7ರಂದು ಋಣಮೋಚನಾ ಹೋಮ, ಸಂಜೆ 7 ಗಂಟೆಗೆ ಗಣಪತಿ ವಿಸರ್ಜನ ಮೆರವಣಿಗೆ ನಡೆಯಲಿದೆ. ಈ ವೈಭವೋಪೇತ ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ಟ್ಯಾಬ್ಲೋಗಳು, ವಾದ್ಯವೈವಿಧ್ಯಗಳು ಮತ್ತು ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರ.ಕಾರ್ಯದರ್ಶಿ ಜಯಕರ ಶೇರಿಗಾರ್ ಕನ್ನರ್ಪಾಡಿ, ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ ಒಡ್ಡಾಡಿ, ರವೀಂದ್ರ ಶೆಟ್ಟಿ ಬಾಣಬೆಟ್ಟು, ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ ಕಿನ್ನಿಮುಲ್ಕಿ ಉಪಸ್ಥಿತರಿದ್ದರು.