ಸಾರಾಂಶ
ಕಾಂತೂರು ಮೂರ್ನಾಡು ಮಹಿಳಾ ತಂಡವು ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಕನ್ನಡಪ್ರಭ ವಾರ್ತೆ ಮೂರ್ನಾಡು
ಇತ್ತೀಚಿಗೆ ನಡೆದ ರಾಜ್ಯ ಮಟ್ಟದ 16 ನೇ ಈಶ ಗ್ರಾಮೋತ್ಸವದ ಪಂದ್ಯಾಟದಲ್ಲಿ ಕಾಂತೂರು-ಮೂರ್ನಾಡು ಮಹಿಳಾ ತಂಡವು ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಈಶ ಗ್ರಾಮೋತ್ಸವದಲ್ಲಿ ಥ್ರೋಬಾಲ್ ಪಂದ್ಯಾಟದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 14 ತಂಡಗಳ ನಡುವೆ ರೋಮಾಂಚಕ ಪ್ರದರ್ಶನಗಳು ನಡೆದು, ಕೊಡಗು ಜಿಲ್ಲೆಯ ಕಾಂತೂರು-ಮೂರ್ನಾಡು ಮಹಿಳಾ ತಂಡ ಮತ್ತು ಮರಗೋಡು ಬ್ಲಾಕ್ ಪ್ಯಾಂಥರ್ಸ್ ಮಹಿಳಾ ಕ್ಲಬ್ ತಂಡಗಳು ಫೈನಲ್‌ಗೆ ಪ್ರವೇಶಿಸಿತು.
ಈ ಎರಡು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕಾಂತೂರು-ಮೂರ್ನಾಡು ಮಹಿಳಾ ತಂಡ ವಿಜಯ ಸಾಧಿಸಿತು. ಈ ತಂಡವು ಇದೇ ತಿಂಗಳು 28ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ.