ಸಾರಾಂಶ
-ದಾವಣಗೆರೆ ಬಿಟ್ಟು ನೆರೆಯ ಜಿಲ್ಲೆಯಲ್ಲಿ ಶರಣಾದ ಆರೋಪಿಗಳು
---ಕನ್ನಡಪ್ರಭ ವಾರ್ತೆ ದಾವಣಗೆರೆ
ರೌಡಿ ಶೀಟರ್ ಕಣುಮ ಅಲಿಯಾಸ್ ಕಣುಮ ಸಂತೋಷಕುಮಾರನನ್ನು ಬರ್ಬರವಾಗಿ ಹತ್ಯೆಗೈದು ಸ್ಥಳದಿಂದ ನಾಪತ್ತೆಯಾಗಿದ್ದ ಹಂತಕರ ಪೈಕಿ 10 ಜನ ಮಂಗಳವಾರ ಸಂಜೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.ಕಣುಮ ಸಂತೋಷನ ಹತ್ಯೆ ಮಾಡಿ, ಬಸ್ ಮೂಲಕ ತಾವು ಹೊಳಲ್ಕೆರೆಗೆ ಬಂದಿರುವುದಾಗಿ ಪೊಲೀಸರ ಮುಂದೆ ಶರಣಾದ ಆರೋಪಿಗಳು ಹೇಳಿಕೆ ನೀಡಿದ್ದಾರೆ.
ಹತ್ತು ಜನರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಚಿತ್ರದುರ್ಗ ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ವಿಚಾರಣೆ ನಂತರ ಕಣುಮನ ಹತ್ಯೆ ಆರೋಪಿಗಳನ್ನು ನ್ಯಾಯಾಧೀಶರ ಸಮಕ್ಷಮದಲ್ಲಿ ಹಾಜರುಪಡಿಸಿ, ದಾವಣಗೆರೆ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ. ಕಣುಮನ ಹಂತಕರು ಹೊಳಲ್ಕೆರೆ ಠಾಣೆಯಲ್ಲಿ ಶರಣಾಗಿರುವ ವಿಷಯ ತಿಳಿಯುತ್ತಿದ್ದಂತೆ ಹಂತಕರ ಪತ್ತೆಗೆ ರಚನೆಯಾಗಿದ್ದ ದಾವಣಗೆರೆ ನಗರ ಡಿವೈಎಸ್ಪಿ ನೇತೃತ್ವದ ಅಧಿಕಾರಿ, ಸಿಬ್ಬಂದಿ ತಂಡ ಚಿತ್ರದುರ್ಗ ಜಿಲ್ಲೆಗೆ ಆರೋಪಿಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಕೈಗೊಳ್ಳಲು ತೆರಳಿದೆ.
ದಾವಣಗೆರೆ ಭಾರತ ಕಾಲನಿ ನಿವಾಸಿ ಸಂತೋಷ್ ಅಲಿಯಾಸ್ ಚಾವಳಿ ಸಂತೋಷ, ಕಾರ್ತಿಕ್, ಪ್ರಭು, ನವೀನ್ ಅಲಿಯಾರ್ ಬಾಕ್ರಿ, ರಾಜ ಅಲಿಯಾಸ್ ತಾರಕ್ ರಾಜ, ನವೀನ್ ಅಲಿಯಾಸ್ ಸೈಲೆಂಟ್ ನವೀನ, ಮಾರುತಿ, ಬಸವರಾಜ ಅಲಿಯಾಸ್ ಪಿಂಕಿ, ಜಯಸೂರ್ಯ, ಭರತ್ ಅಲಿಯಾಸ್ ಸ್ಲಂ ಪೊಲೀಸರಿಗೆ ಶರಣಾಗಿದ್ದು, ಪ್ರಕರಣದ ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆಂದು ಹೇಳಲಾಗಿದೆ.12 ಜನ, ಇತರರ ವಿರುದ್ಧ ದೂರು : ರೌಡಿ ಶೀಟರ್, ಕಾಂಗ್ರೆಸ್ ಮುಖಂಡ ಸಂತೋಷಕುಮಾರ ಅಲಿಯಾಸ್ ಕಣುಮ ಸಂತೋಷನ ಕೊಲೆಗೆ ಸಂಬಂಧಿಸಿದಂತೆ 12 ಮಂದಿ ಸೇರಿದಂತೆ ಇತರರ ವಿರುದ್ಧ ಮೃತನ ಪತ್ನಿ ಟಿ.ಕೆ.ಶೃತಿ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಗರದ ವಾಸಿಗಳಾದ ಗುಂಡಪ್ಪ, ಭಾರತ್ ಕಾಲನಿಯ ಕಾರ್ತಿಕ್, ಬೂದಾಳ್ ರಸ್ತೆಯ ನವೀನ್, ಖಾರದ ಪುಡಿ ನವೀನ್ (ಖಾರದ ಪುಡಿ ಮಂಜನ ತಮ್ಮ), ಚಾವಳಿ ಸಂತು ಅಲಿಯಾಸ್ ಚಾವಳಿ ಸಂತೋಷ, ಬಸವರಾಜ ಅಲಿಯಾಸ್ ಬಸ್ಯಾಷ ಹನುಮಂತಪ್ಪ, ಗಡ್ಡ ವಿಜಿ, ಚಿಕ್ಕನಹಳ್ಳಿ ಶಿವು, ಕಡ್ಡಿ ರಘು, ಪ್ರಶಾಂತ್ ಅಲಿಯಾಸ್ ಪಚ್ಚಿ, 60 ಅಡಿ ರಸ್ತೆಯ ಗಣಿ ಮತ್ತು ಇತರರು ತನ್ನ ಪತಿ ಸಂತೋಷಕುಮಾರ ಅಲಿಯಾಸ್ ಕಣುಮ ಸಂತೋಷನನ್ನು ಕೊಲೆ ಮಾಡಿರುವುದಾಗಿ ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ವಿವರ: ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದುರಿನ ರಿಕ್ರಿಯೇಷನ್ ಕ್ಲಬ್‌ನಲ್ಲಿ ಕಾಂಗ್ರೆಸ್ ಮುಖಂಡ ಕಣುಮ ಸಂತೋಷ ಸೇರಿದಂತೆ ಬಿಜೆಪಿ ಮುಖಂಡರು, ಇತರೆ ವ್ಯಕ್ತಿಗಳು ಜೆ ರಿಕ್ರಿಯೇಷನ್ ಕ್ಲಬ್ ನಲ್ಲಿ ಕುಳಿತಿದ್ದ ವೇಳೆ ಏಳೆಂಟು ಜನರ ಗುಂಪು ಅಲ್ಲಿಗೆ ನುಗ್ಗಿ ಏಕಾಏಕಿ ಮಚ್ಚು, ಲಾಂಗ್‌ಗಳಿಂದ ಕಣುಮನನ್ನೇ ಗುರಿಯಾಗಿಸಿಕೊಂಡು, ಮುಖ, ಕೈ, ಕುತ್ತಿಗೆ ಮೇಲೆ ದಾಳಿ ಮಾಡಿ, ಬರ್ಬರವಾಗಿ ಹತ್ಯೆ ಮಾಡಿತ್ತು.ಮೃತ ಕಣುಮ ಸಂತೋಷನ ಪತ್ನಿ ಟಿ.ಕೆ.ಶೃತಿ, ತನ್ನ ಪತಿ ಸಂತೋಷಕುಮಾರ ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದರು. ಆದರೆ, ಸಂಜೆ ತಮ್ಮ ಸಂಬಂಧಿ ಮಂಜುನಾಥ ತನಗೆ ಕರೆ ಮಾಡಿ, ಸಂತೋಷ್ ಗೆ ಸೋಮೇಶ್ವರ ಆಸ್ಪತ್ರೆ ಎದುರಿನ ಕಟ್ಟಡದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ಪತಿಯನ್ನು ಕೊಲೆ ಮಾಡಿದವರನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
................................ಫೋಟೊ: 6ಕೆಡಿವಿಜಿ8-ದಾವಣಗೆರೆಯ ಹದಡಿ ರಸ್ತೆಯ ರಿಕ್ರಿಯೇಷನ್ ಕ್ಲಬ್ ಮುಂದೆ ಸೋಮವಾರ ಸಂಜೆ ಬರ್ಬರವಾಗಿ ಹತ್ಯೆಯಾಗಿದ್ದ ರೌಡಿ ಶೀಟರ್, ಕಾಂಗ್ರೆಸ್ ಮುಖಂಡ ಕಣುಮ ಅಲಿಯಾಸ್ ಕಣುಮ ಸಂತೋಷಕುಮಾರ.
...................6ಕೆಡಿವಿಜಿ9-ದಾವಣಗೆರೆಯಲ್ಲಿ ಸೋಮವಾರ ಸಂಜೆ ರೌಡಿ ಶೀಟರ್ ಕಣುಮನನ್ನು ಭೀಕರವಾಗಿ ಹತ್ಯೆಗೈದು, ಮಂಗಳವಾರ ಸಂಜೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಶರಣಾದ 10 ಜನ ಆರೋಪಿಗಳು.