ಸಾರಾಂಶ
- ಕ್ಲಬ್‌ನಲ್ಲಿ ಕುಳಿತಿದ್ದ ಕಣುಮನ ಮೇಲೆ ಮಚ್ಚು-ಲಾಂಗ್‌ಗಳಿಂದ ಹಠಾತ್ ದಾಳಿ । ರಕ್ತದ ಮಡುವಲ್ಲೇ ಕೊನೆಯುಸಿರು
- ಕೇವಲ 33 ಸೆಕೆಂಡ್‌ನಲ್ಲೇ ಕೃತ್ಯ । ತಲೆ, ಕುತ್ತಿಗೆ, ಮುಖಕ್ಕೆ ಮಚ್ಚಿನೇಟು । ಮೃತ ಕಣುಮ ರೌಡಿ ಶೀಟರ್, ಕಾಂಗ್ರೆಸ್ ಮುಖಂಡ- 4 ಬೈಕ್, 1 ಆಟೋದಲ್ಲಿ ಬಂದಿದ್ದ 7ರಿಂದ 10 ಜನರ ಗುಂಪಿನಿಂದ ಕೃತ್ಯ । ಪರಿಚಯಸ್ಥ ಯುವಕರಿಂದಲೇ ಹತ್ಯೆ ಶಂಕೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ರೌಡಿ ಶೀಟರ್‌ವೊಬ್ಬನನ್ನು ನಾಲ್ಕು ಬೈಕ್, ಆಟೋ ರಿಕ್ಷಾದಲ್ಲಿ ಬಂದ ಏಳೆಂಟು ಯುವಕರ ಗುಂಪೊಂದು ಮಚ್ಚು, ಲಾಂಗ್‌ನಿಂದ ಕೇವಲ 33 ಸೆಕೆಂಡ್‌ಗಳಲ್ಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹದಡಿ ರಸ್ತೆಯ ರಿಕ್ರಿಯೇಷನ್ ಕ್ಲಬ್‌ವೊಂದರಲ್ಲಿ ಸೋಮವಾರ ಸಂಜೆ ನಡೆದಿದೆ.ನಗರದ ನಿಟುವಳ್ಳಿ 60 ಅಡಿ ರಸ್ತೆಯ ವಾಸಿ, ಕಾಂಗ್ರೆಸ್ ಯುವ ಮುಖಂಡ, ರೌಡಿ ಶೀಟರ್ ಕಣುಮ ಅಲಿಯಾಸ್ ಕಣುಮ ಸಂತೋಷ (36) ಕೊಲೆಯಾದ ವ್ಯಕ್ತಿ. ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದುರಿನ ಪವರ್ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ಕಣುಮ ಸಂತೋಷ ತನ್ನ ಬೆಂಬಲಿಗರೊಂದಿಗೆ ಕುಳಿತಿದ್ದ. ಈ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ.
ಕಣುಮ ಸಂತೋಷ ಮೇಲೆ ಮುಗಿಬಿದ್ದ ಗುಂಪು ಏಕಾಏಕಿ ಮಚ್ಚು, ಲಾಂಗ್‌ಗಳನ್ನು ಬೀಸಿದೆ. ಮಚ್ಚು, ಲಾಂಗ್ ಬೀಸಿದ್ದನ್ನು ಕಂಡು ಕಣುಮ ಸಂತೋಷನಿಗೆ ಏನು ಮಾಡಬೇಕೆಂದೂ ಯೋಚಿಸೋದಕ್ಕೂ ಸಮಯ ಸಿಕ್ಕಿಲ್ಲ. ಕೇವಲ 33 ಸೆಕೆಂಡ್‌ನಲ್ಲೇ ಹಂತಕರ ಗುಂಪು ಕಣುಮನ ತಲೆ, ಕುತ್ತಿಗೆ, ಮುಖ ಇತರೆ ಭಾಗದ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಕಣುಮ ಸಂತೋಷ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಸ್ಥಳದಲ್ಲಿದ್ದವರು, ಕಣುಮನ ಜೊತೆಗಿದ್ದವರು, ಕ್ಲಬ್‌ಗೆ ಬಂದಿದ್ದವರು ದಾಳಿಯ ಭೀಬಿತ್ಸತೆ ಕಂಡು, ಕ್ಲಬ್ ಬಾಗಿಲನ್ನು ತೆಗೆದು ಹೊರಗೆ ಓಡಿಹೋಗಿದ್ದಾರೆ.ಉಧೋ ಉಧೋ ಘೋಷಣೆ:
ಕಣುಮ ಸಂತೋಷನನ್ನು ಕೊಚ್ಚಿ, ಆತ ಮೃತಪಟ್ಟಿದ್ದು ಖಚಿತವಾಗುತ್ತಿದ್ದಂತೆಯೇ ಹಂತಕರ ಗುಂಪು ಕೈಯಲ್ಲಿದ್ದ ರಕ್ತಸಿಕ್ತ ಮಚ್ಚು, ಲಾಂಗ್‌ಗಳನ್ನು ಗಾಳಿಯಲ್ಲಿ ತೇಲಿಸುತ್ತಾ, ದುಗ್ಗಮ್ಮ ನಿನ್ನಾಲ್ಕು ಉಧೋ ಉಧೋ... ಎಂದು ಘೋಷಣೆಗಳನ್ನು ಕೂಗುತ್ತಾ ಬೈಪಾಸ್ ರಸ್ತೆಯತ್ತ ತೆರಳಿದೆ. ಕೊಲೆ ವಿಚಾರ ಮಿಂಚಿನಂತೆ ಎಲ್ಲೆಡೆ ಹರಡಿದ ಪರಿಣಾಮ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಿಕೊಂಡು ಹೋದರು. ವಿದ್ಯಾನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲಿಸಿದಾಗ ಅಲ್ಲಿ ಹತ್ಯೆಯಾಗಿದ್ದು, ರೌಡಿ ಶೀಟರ್, ಕಾಂಗ್ರೆಸ್ ಮುಖಂಡ ಕಣುಮ ಅಲಿಯಾಸ್ ಕಣುಮ ಸಂತೋಷ ಎಂಬುದು ಸ್ಪಷ್ಟವಾಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿಗಳಾದ ಶರಣ ಬಸವೇಶ್ವರ, ಬಿ.ಎಸ್. ಬಸವರಾಜ, ಸಿಪಿಐಗಳಾದ ಶಿಲ್ಪ, ನಾಗರಾಜ, ಅಧಿಕಾರಿಗಳು- ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿತು. ಶ್ವಾನದಳದ ಶ್ವಾನವು ಘಟನಾ ಸ್ಥಳದಿಂದ ರಸ್ತೆಯತ್ತ ಸಾಗಿತು. ಕಣುಮ ಸಂತೋಷನ ಹತ್ಯೆ ವಿಷಯ ತಿಳಿದ ಜನರು ರಿಕ್ರಿಯೇಷನ್ ಕ್ಲಬ್ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದರಿಂದಾಗಿ ದಾವಣಗೆರೆ- ಹದಡಿ- ಚನ್ನಗಿರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ಕಣುಮ ಸಂತೋಷ್ ಪತ್ನಿ, ಪುತ್ರ, ಬಂಧು-ಬಳಗ, ಸ್ನೇಹಿತರು, ಹಿತೈಷಿಗಳು, ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು. ಕಣುಮನ ಪತ್ನಿ, ಪುತ್ರನ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನಂತೂ ತನ್ನ ತಂದೆ ಹತ್ಯೆಯ ಸಂಗತಿ ಅರಗಿಸಿಕೊಳ್ಳಲಾಗದೇ, ಹಂತಕರು ಯಾರೇ ಆಗಿದ್ದರೂ ಬಿಡಬೇಡಿ ಎಂಬುದಾಗಿ ಪೊಲೀಸ್ ಅಧಿಕಾರಿಗಳ ಬಳಿ ಕಣ್ಣೀರು ಹಾಕುತ್ತಿದ್ದನು. ಕಣುಮನ ಬಂಧು-ಬಳಗ, ಸ್ನೇಹಿತರು ಕಣುಮನ ಮಗನನ್ನು ಸಮಾಧಾನಪಡಿಸಲು ಸಾಕಷ್ಟು ಪ್ರಯತ್ನಿಸಿದರು.
- - - (ಫೋಟೋಗಳಿವೆ.);Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))