ತೆಲಿಕೆದ ಬೊಳ್ಳಿ ಡಾ.ದೇವದಾಸ್‌ ಕಾಪಿಕಾಡ್‌ ಅವರ ಹೊಸ ಕಾಮಿಡಿ ಶೋ ಸದ್ಯದಲ್ಲೇ ವಿ4 ಚಾನೆಲ್‌ ಹಾಗೂ ಅವಿಕಾ ಪ್ರೊಡಕ್ಷನ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರ ಆಗಲಿದೆ.

ಮಂಗಳೂರು: ತೆಲಿಕೆದ ಬೊಳ್ಳಿ ಡಾ.ದೇವದಾಸ್‌ ಕಾಪಿಕಾಡ್‌ ಅವರ ಹೊಸ ಕಾಮಿಡಿ ಶೋ ಸದ್ಯದಲ್ಲೇ ವಿ4 ಚಾನೆಲ್‌ ಹಾಗೂ ಅವಿಕಾ ಪ್ರೊಡಕ್ಷನ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರ ಆಗಲಿದೆ. ಅವಿಕಾ ಪ್ರೊಡಕ್ಷನ್‌ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಕಾಮಿಡಿ ಶೋದಲ್ಲಿ ಹಿರಿಯ ಪ್ರಮುಖ ಹಾಸ್ಯ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗುವುದು ಎಂದು ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್‌ ತಿಳಿಸಿದರು.

ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಾಪಿಕಾಡ್ಸ್ ಕಾಮಿಡಿ ಜಂಕ್ಷನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತುಳು ರಂಗಭೂಮಿ, ಸಿನಿಮಾ ರಂಗ ಬೆಳೆಯಬೇಕಿದ್ದರೆ ಹೊಸ ತಲೆಮಾರಿನವರೂ ಸಕ್ರಿಯವಾಗಿ ತೊಡಗಿಕೊಳ್ಳಬೇಕಿದೆ. ಹೊಸ ತಲೆಮಾರಿನಲ್ಲಿ ಅಪಾರ ಪ್ರತಿಭೆಗಳಿದ್ದಾರೆ. ಅಂಥವರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಆಸೆಯಾಗಿದೆ. ಹಾಗಾಗಿ ಆಯ್ದ ಕೆಲವು ಪ್ರತಿಭೆಗಳಿಗೂ ಈ ಶೋದಲ್ಲಿ ಅವಕಾಶ ನೀಡಲಾಗುವುದು ಎಂದು ಕಾಪಿಕಾಡ್‌ ತಿಳಿಸಿದರು.ಈಗಾಗಲೇ ಸುಮಾರು 15 ಎಪಿಸೋಡ್‌ ಸಿದ್ಧವಾಗಿದ್ದು, ವಿ4 ಚಾನೆಲ್‌ ಮೂಲಕ ಸಂಜೆ ಅರ್ಧ ತಾಸು ಪ್ರೇಕ್ಷಕರನ್ನು ರಂಜಿಸಲು ಈ ತಂಡ ಸಿದ್ಧವಾಗಿದೆ.ಡಾ. ದೇವದಾಸ್‌ ಕಾಪಿಕಾಡ್‌ ಅವರ ಪರಿಕಲ್ಪನೆಯಲ್ಲಿ ಅವರದ್ದೇ ಸಂಭಾಷಣೆಯನ್ನು ಹೊಂದಿದೆ. ಅನೇಕ ಯುವ ಪ್ರತಿಭೆಗಳಿಗೂ ಅವಕಾಶ ಸಿಗಲಿದ್ದು, ಇದು ಹೊಸಬರಿಗೆ ಮತ್ತು ತುಳು ರಂಗಭೂಮಿಗೆ ದೇವದಾಸ್ ಕಾಪಿಕಾಡ್‌ ಅವರ ವಿಶೇಷ ಕೊಡುಗೆಯಾಗಲಿದೆ.

ಸಮಾರಂಭದಲ್ಲಿ ಉದ್ಯಮಿ ಪ್ರಕಾಶ್ ಕುಂಪಲ, ಶರ್ಮಿಳಾ ದೇವದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್ ಮತ್ತಿತರರಿದ್ದರು.