ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕಪ್ಪ ನೀಡಿದ್ದೇ!

| Published : Mar 30 2024, 12:46 AM IST

ಸಾರಾಂಶ

ಚನ್ನಪಟ್ಟಣ: ನಾನು ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಪುಗಸಟ್ಟೆಯಾಗಿ ಬರಲಿಲ್ಲ, ಕಪ್ಪ ಕೊಟ್ಟೆ ನಾನು ಪ್ರಾಧಿಕಾರದ ಹುದ್ದೆಗೆ ಬಂದೆ ಎನ್ನುವ ಮೂಲಕ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲುವೇಗೌಡ ಬಾಂಬ್ ಸಿಡಿಸಿದರು.

ಚನ್ನಪಟ್ಟಣ: ನಾನು ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಪುಗಸಟ್ಟೆಯಾಗಿ ಬರಲಿಲ್ಲ, ಕಪ್ಪ ಕೊಟ್ಟೆ ನಾನು ಪ್ರಾಧಿಕಾರದ ಹುದ್ದೆಗೆ ಬಂದೆ ಎನ್ನುವ ಮೂಲಕ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲುವೇಗೌಡ ಬಾಂಬ್ ಸಿಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಇಬ್ಬಿಬ್ಬರಿಗೆ ಲೆಟರ್ ನೀಡಿದ್ದರು. ಅಧ್ಯಕ್ಷ ಸ್ಥಾನಕ್ಕಾಗಿ ಈಗಿನ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿಗೆ ೧೦ ಲಕ್ಷ ಹಣ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದ್ದರು. ಅದಕ್ಕಾಗಿ ನಾನು ೫ ಲಕ್ಷ ನೀಡಿದ್ದೇ ಎಂದು ಗಂಭೀರ ಆರೋಪ ಮಾಡಿದರು.

ಆನಂದಸ್ವಾಮಿ ಸಹ ಅಧ್ಯಕ್ಷರಾಗಬೇಕು ಎನ್ನುತ್ತಿದ್ದಾರೆ. ನಿನಗೂ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದೇನೆ. ಈಗ ಆನಂದಸ್ವಾಮಿಗೆ ಹಣ ನೀಡಬೇಕು. ಅದಕ್ಕಾಗಿ ೧೦ ಲಕ್ಷ ಕೊಡು ಎಂದು ಯೋಗೇಶ್ವರ್ ನನ್ನ ಬಳಿ ಕೇಳಿದರು. ಈ ಹಿನ್ನೆಲೆಯಲ್ಲಿ ಯೋಗೇಶ್ವರ್‌ಗೆ ೫ ಲಕ್ಷ ನೀಡಿದೆ. ಅದನ್ನು ಪಡೆದು ಆನಂದಸ್ವಾಮಿಗೆ ನೀಡಿದರು ಎಂದು ಆರೋಪಿಸಿದರು.

ಇದಷ್ಟೇ ಅಲ್ಲದೇ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಬಿಜೆಪಿಯ ಎಲ್ಲ ಕಾರ್ಯಕ್ರಮಗಳ ಖರ್ಚುವೆಚ್ಚಕ್ಕೂ ಹಣ ನೀಡಿದ್ದೇನೆ. ಯೋಗೇಶ್ವರ್‌ಗಾಗಿ ಸಾಕಷ್ಟು ದುಡಿದಿದ್ದೇನೆ. ಇತ್ತೀಚಿಗೆ ಅವರು ಸ್ಪಂದಿಸುತ್ತಿರಲಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಇತ್ತೀಚೆಗೆ ಯೋಗೇಶ್ವರ್ ಆದಿಯಾಗಿ ಬಿಜೆಪಿಯಲ್ಲಿ ಎಲ್ಲರಿಗೂ ಕಾರ್ಯಕರ್ತರು ಬೇಡವಾಗಿದ್ದಾರೆ. ಜೆಡಿಎಸ್ ಜತೆ ಸಖ್ಯ ಸಾಧಿಸಿದ ಬಳಿಕ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಅದಕ್ಕೆ ನಾನು ಬಿಜೆಪಿ ತೊರೆದೆ. ನನಗೂ ಹಂಗಾಮಿ ಹಣ ಬಂದಿದ್ದರೆ ನಾನು ಸಹ ಶಾಸಕನಾಗುತ್ತಿದ್ದೆ ಎಂದರು.

ಈಗಾಗಲೇ ಸಾವಿರಾರು ಜನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದೇ ಯೋಗೇಶ್ವರ್ ಸಾಕಷ್ಟು ಬಾರಿ ಪಕ್ಷಾಂತರ ಮಾಡಿದ್ದಾರೆ. ಆಗ ಅವರು ಉಂಡ ಮನೆಗೆ ದ್ರೋಹ ಮಾಡಲಿಲ್ಲವಾ? ಅವರು ಮಾಡಿದರೆ ತಪ್ಪಿಲ್ಲ, ನಾವು ಮಾಡಿದರೆ ತಪ್ಪಾ? ಇದನ್ನು ಕೇಳಲು ತಾಲೂಕು ಅಧ್ಯಕ್ಷ ತೂಬಿನಕರೆ ರಾಜುಗೆ ಯೋಗ್ಯತೆ ಇಲ್ಲ. ಇದೇ ರೀತಿ ಮಾತನಾಡಿದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾರು ಕೇಳಲು ರಾಜು ಯಾರು?:

ತಾಪಂ ಮಾಜಿ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ, ಯೋಗೇಶ್ವರ್ ನನಗೆ ಕಾರು ಕೊಡಿಸಿದ್ದರೆ ಅದನ್ನು ಅವರು ಕೇಳುತ್ತಾರೆ. ಇಲ್ಲದಿದ್ದಲ್ಲಿ ಅವರ ಮಗ ಕೇಳುತ್ತಾರೆ. ಕಾರು ಕೇಳಲು ರಾಜು ಯಾರು? ಅವರು ಕಾರು ನೀಡಿದ್ದರೆ ಎಂದು ಪ್ರಶ್ನಿಸಿ, ನಾನು ಬಿಜೆಪಿ ಸದಸ್ಯನಲ್ಲ. ಬಿಜೆಪಿಗೂ ನನಗೂ ಸಂಬಂಧವಿಲ್ಲ. ನಾನು ಯೋಗೇಶ್ವರ್‌ಗಾಗಿ ದುಡಿದ್ದೇನೆ. ಅವರ ವಿರುದ್ಧ ಆರೋಪ ಬಂದಾಗ ಧ್ವನಿ ಎತ್ತಿದ್ದೇನೆ. ಸ್ವಾಮಿ ನಿಷ್ಠೆಗಾಗಿ ಏಳು ಬಾರಿ ಪಕ್ಷಾಂತರ ಮಾಡಿದ್ದೇನೆ. ಪಕ್ಷ ನಿಷ್ಠೆ ಬಗ್ಗೆ ಇವನಿಂದ ಕಲಿಯುವ ಅಗತ್ಯವಿಲ್ಲ. ಈ ಹಿಂದೆ ರಾಜು ಯಾವ ರೀತಿ ಸ್ವಾಮಿನಿಷ್ಠೆ ತೋರಿದ್ದರು ಎಂಬುದು ಗೊತ್ತಿದೆ ಎಂದು ಏಕವಚನದಲೇ ತಿರುಗೇಟು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್.ಪ್ರಮೋದ್, ಸುನೀಲ್, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ.ವೀರೇಗೌಡ, ಮುಖಂಡರಾದ ಸಿಂಗರಾಜಿಪುರ ರಾಜಣ್ಣ, ರಮೇಶ್, ಪ್ರೇಂಕುಮಾರ್ ಇತರರಿದ್ದರು. ಬಾಕ್ಸ್‌........ಸಿಪಿವೈ ಸೋಲಿಸಲು ಒಂದು ಕೋಟಿ ಕೇಳಿದ್ದರು! ಹಿಂದೆ ವಿಧಾನಸಭೆಗೆ ಬಿಜೆಪಿಯಿಂದ ರವಿಕುಮಾರಗೌಡ ಸ್ಪರ್ಧಿಸಿದ್ದಾಗ ಇದೇ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷ ಬಂದಿದ್ದ ಸಂಪನ್ಮೂಲದ ಹಂಚಿಕೆಗಾಗಿ ಬಡಿದಾಡಿದ್ದರು. ೨೦೧೩ರ ವಿಧಾನಸಭೆ ಚುನಾವಣೆ ವೇಳೆ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದ್ದ ಯೋಗೇಶ್ವರ್‌ರನ್ನು ಸೋಲಿಸುತ್ತೇವೆ ಎಂದು ಅನಿತಾ ಕುಮಾರಸ್ವಾಮಿ ಬಳಿ ಒಂದು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಂತವರು ನಮ್ಮ ಸ್ವಾಮಿ ನಿಷ್ಠೆ ಕುರಿತು ಮಾತನಾಡುತ್ತಾರಾ ಎಂದು ಕಿಡಿಕಾರಿದ ಅವರು, ಈ ಹಿಂದೆ ಇವರೇ ಸಾಮಾಜಿಕ ಜಾಲತಾಣಗಳಲ್ಲಿ ಯೋಗೇಶ್ವರ್ ತೇಜೋವಧೆ ನಡೆಸಿದ್ದರು. ಯೋಗೇಶ್ವರ್ ಕುರಿತು ಇವರಿಗೆ ಯಾವುದೇ ಒಲವಿಲ್ಲ ಎಂದು ಮಲುವೇಗೌಡ ಹೇಳಿದರು.ಪೊಟೋ೨೯ಸಿಪಿಟಿ೩:

ಚನಟ್ಪಟ್ಟಣದಲ್ಲಿ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲುವೇಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.