ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ: ಡಾ. ತೋಂಟದ ಸಿದ್ಧರಾಮ ಶ್ರೀ

| Published : Aug 22 2024, 12:49 AM IST

ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ: ಡಾ. ತೋಂಟದ ಸಿದ್ಧರಾಮ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಶ್ರಮದ ಫಲವಾಗಿ ಇಂದು ಕಪ್ಪತ್ತಗುಡ್ಡ ಉಳಿದಿದ್ದು, ವನ್ಯಜೀವಿಧಾಮವಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಗದಗ: ಕಪ್ಪತಗುಡ್ಡ ಅಪರೂಪದ ಆಯುರ್ವೇದ ಔಷಧಿಯ ಸಸ್ಯಗಳಿಂದ ತುಂಬಿರುವ ಖಜಾನೆ. ಕಪ್ಪತ್ತಗುಡ್ಡ ಹಚ್ಚಹಸಿರಿನಿಂದ ಕಂಗೋಳಿಸುತ್ತಿದ್ದು, ನಾಡಿನ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸಿ ಕಪ್ಪತ್ತಗುಡ್ಡದ ಸೊಬಗನ್ನು ಆನಂದಿಸುತ್ತಿದ್ದಾರೆ. ಪರಿಶುದ್ಧ ಗಾಳಿಯನ್ನು ಹೊಂದಿರುವ ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2707ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಶ್ರಮದ ಫಲವಾಗಿ ಇಂದು ಕಪ್ಪತ್ತಗುಡ್ಡ ಉಳಿದಿದ್ದು, ವನ್ಯಜೀವಿಧಾಮವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಕಪ್ಪತ್ತಗುಡ್ಡ ಉಳಿವಿಗಾಗಿ ಜನರನ್ನು, ಪರಿಸರವಾದಿಗಳನ್ನು, ಅನೇಕ ಸಂಘ-ಸಂಸ್ಥೆಗಳನ್ನು, ಶಾಲಾ-ಕಾಲೇಜುಗಳನ್ನು ಸಂಘಟಿಸಿ ಹೋರಾಟ ಮಾಡಿದ್ದಾರೆ. ಅನೇಕ ಆಯುರ್ವೇದ ಪಂಡಿತರು ವನಸ್ಪತಿಗಾಗಿ ಕಪ್ಪತ್ತಗುಡ್ಡ ಅರಸಿ ಬರುತ್ತಾರೆ. ಅಪಾರ ಖನಿಜ ಸಂಪತ್ತನ್ನು, ಆಯುರ್ವೇದ ಸಂಪತ್ತನ್ನು, ವನ್ಯಜೀವಿಗಳನ್ನು ಹೊಂದಿರುವ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ನಡೆಯದಂತೆ ಶ್ರೀಗಳು ಮುನ್ನೆಚ್ಚರಿಕೆ ವಹಿಸುತ್ತ ಬಂದಿದ್ದಾರೆ. ಕಪ್ಪತ್ತಗುಡ್ಡದ ಅಭಿವೃದ್ಧಿಗೆ ಸರಕಾರ ಕ್ರಮಕೈಕೊಳ್ಳಬೇಕು ಎಂದು ಮತ್ತು ಈ ಭಾಗದ ಸಚಿವರು, ಶಾಸಕರು, ನಾಯಕರು ವಿಶೇಷ ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದರು.

ಪ್ರೊ. ಸಿ.ಎಸ್. ಅರಸನಾಳ ಉಪನ್ಯಾಸ ನೀಡಿ, ಕಪ್ಪತ್ತಗುಡ್ಡ ಸಂರಕ್ಷಣೆಯಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ಪಾತ್ರ ಹಿರಿದಾದುದು. ಗಿಡಮರಗಳನ್ನು ಕಡಿಯುವುದು, ಬೆಂಕಿ ಹಚ್ಚುವುದು, ಗಣಿಗಾರಿಕೆ ಹೀಗೆ ಅನೇಕ ಸಂಕಷ್ಟಗಳ ಸಂದರ್ಭದಲ್ಲಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಕಪ್ಪತ್ತಗುಡ್ಡ ಅಪಾರ ಗಿಡಮೂಲಿಕೆ ಮತ್ತು ಖನಿಜ ಸಂಪತ್ತನ್ನು ಒಳಗೊಂಡಿದೆ. ಮೇಲಾಗಿ ಈ ಭಾಗದ ಜನರ ಜೀವನಾಡಿ, ಸಹ್ಯಾದ್ರಿ ಎನಿಸಿದೆ. ಪೋಸ್ಕೋ ಸೇರಿದಂತೆ ಅನೇಕ ಗಣಿಗಾರಿಕೆ ಕಂಪನಿಗಳು ಕಪ್ಪತ್ತಗುಡ್ಡದ ಮೇಲೆ ಕಣ್ಣು ಹಾಕಿದಾಗ ಶ್ರೀಗಳು ರಕ್ಷಾಕವಚದಂತೆ ಕಪ್ಪತ್ತಗುಡ್ಡವನ್ನು ಉಳಿಸಿದ್ದಾರೆ ಎಂದರು.

ಈ ವೇಳೆ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಸಂಗಡಿಗರು ವಚನ ಸಂಗೀತ ಹಾಡಿದರು. ಧರ್ಮಗ್ರಂಥವನ್ನ ಖುಷಿ ಎಂ. ಲಕ್ಕುಂಡಿ ಪಠಿಸಿದರು. ವರ್ಷಾ ಆರ್. ಮೇಟಿ ವಚನ ಚಿಂತನೆ ನಡೆಸಿದರು. ಶಿವಾನುಭವದ ದಾಸೋಹ ಭಕ್ತಿಸೇವೆಗೈದ ಲಲಿತಾ ಪಾಟೀಲ, ಕೋರ್ಲಹಳ್ಳಿ ಮತ್ತು ಚನ್ನಬಸಯ್ಯ ಕನಕೇರಿಮಠ, ಗಿರಿಜಾದೇವಿ ಕನಕೇರಿಮಠ ಹಾಗೂ ಕುಟುಂಬವರ್ಗ ಪೂಜ್ಯರು ಸನ್ಮಾನಿಸಿದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ, ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಐ.ಬಿ. ಬೆನಕೊಪ್ಪ, ಶಿವಾನಂದ ಹೊಂಬಳ ಇದ್ದರು. ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಸ್ವಾಗತಿಸಿದರು. ಐ.ಬಿ. ಬೆನಕೊಪ್ಪ ನಿರೂಪಿಸಿದರು.