ಸಾರಾಂಶ
ಪಡುಬಿದ್ರಿಯ ಸಾಗರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಗಾನ ತರಗತಿಯನ್ನು ಉದ್ಘಾಟಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ ಕಲಾರಂಗ ಪ್ರಶಸ್ತಿ ಪುರಸ್ಕೃತ ರತ್ನಾಕರ್ ಆಚಾರ್ಯ, ಈ ತರಗತಿಯನ್ನು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕಾಪು
ಪಡುಬಿದ್ರಿಯ ಸಾಗರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಉಡುಪಿ, ಕಾಪು ಮತ್ತು ಕುಂದಾಪುರ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸುವ ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ನಡೆಯುವ ಯಕ್ಷಗಾನ ತರಗತಿಯನ್ನು ಗುರುವಾರ ಉದ್ಘಾಟಿಸಲಾಯಿತು.ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ ಕಲಾರಂಗ ಪ್ರಶಸ್ತಿ ಪುರಸ್ಕೃತ ರತ್ನಾಕರ್ ಆಚಾರ್ಯ, ಈ ತರಗತಿಯನ್ನು ಉದ್ಘಾಟಿಸಿ, ಬಾಲ್ಯದಲ್ಲಿಯೇ ಯಕ್ಷಗಾನವನ್ನು ಕಲಿಯುವುದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಅನುಕೂಲವಾಗುತ್ತದೆ. ಜೊತೆಗೆ ಅವರಲ್ಲಿ ನಮ್ಮ ಸಂಸ್ಕೃತಿ, ಪುರಾಣ ಜ್ಞಾನಗಳ ಅರಿವು ಮೂಡುತ್ತದೆ. ಇದರಿಂದ ಪ್ರಜ್ಞಾವಂತ ನಾಗರಿಕರ ಸೃಷ್ಟಿಯಾಗಲು ಸಾಧ್ಯ ಎಂದರಲ್ಲದೆ ಉಡುಪಿ ಯಕ್ಷಗಾನ ಕಲಾರಂಗದಿಂದ ನೀಡುತ್ತಿರುವ ವಿದ್ಯಾರ್ಥಿವೇತನದ ಬಗ್ಗೆಯೂ ಕೂಡ ತಿಳಿಸಿದರು.
ಯಕ್ಷಗಾನ ತರಗತಿಯ ಗುರುಗಳು ನಿತಿನ್ ಪಡುಬಿದ್ರಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಶ್ರೀ ಸುರೇಶ್ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯಕ್ಷಗಾನ ತರಗತಿಯ ನೋಡಲ್ ಶಿಕ್ಷಕಿ ವಿನುತಾ ಶೆಟ್ಟಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ವಿನೋದ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.