ಕರಡ ಬುಲ್ಸ್ ಚಾಂಪಿಯನ್, ವಿರಾಜಪೇಟೆ ಈಗಲ್ಸ್ ರನ್ನರ್ಸ್

| Published : Dec 09 2024, 12:45 AM IST

ಸಾರಾಂಶ

ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯದಲ್ಲಿ ಕರಡ ಬುಲ್ಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತು. ರನ್ನರ್ಸ್‌ ಪ್ರಶಸ್ತಿಯನ್ನು ವಿರಾಜಪೇಟೆ ಈಗಲ್ಸ್‌ ತಂಡ ಪಡೆದುಕೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಯೋಜಿತ 3ನೇ ವರ್ಷದ ವಿಪ್ರ ಕ್ರೀಡೋತ್ಸವ ಅಂಗವಾಗಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ಕರಡ ಬುಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ರನ್ನರ್ಸ್ ಪ್ರಶಸ್ತಿಯನ್ನು ವಿರಾಜಪೇಟೆ ಈಗಲ್ಸ್ ತಂಡ ಪಡೆದುಕೊಂಡಿತು.‌

ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರಡ ಬುಲ್ಸ್ ತಂಡ ನಿಗದಿತ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಭರ್ಜರಿ 103 ರನ್ ಗಳಿಸಿತು. ತಂಡದ‌ ಪರ ಹರಿಪ್ರಸಾದ್ 5 ಸಿಕ್ಸರ್ ಗಳೊಂದಿಗೆ 52 ಹಾಗೂ ಪ್ರದೀಪ್ 42 ರನ್ ಗಳನ್ನು ಗಳಿಸಿದರು. ಇದನ್ನು ಬೆನ್ನಟ್ಟಿದ ವಿರಾಜಪೇಟೆ ಈಗಲ್ಸ್ ತಂಡ 6 ಓವರ್ ಗಳಲ್ಲಿ 6 ವಿಕೆಟ್ ಗಳನ್ನು ಕಳೆದುಕೊಂಡು 40 ರನ್ ಗಳನಷ್ಟೇ ಗಳಿಸಿ ಸೋಲನುಭವಿಸಿತು. ಕರಡ ತಂಡವು ಈ ಮೂಲಕ ಸತತ 3 ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.‌ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು.

ಜಿಲ್ಲೆಯ ಬ್ರಾಹ್ಮಣ ಮಹಿಳೆಯರಿಗೆ ಹಾಗೂ ಪುರುಷರಿಗೆ ಆಯೋಜಿತ ಹಗ್ಗಜಗ್ಗಾಟದಲ್ಲಿ ಪುರುಷರ ವಿಭಾಗದಲ್ಲಿ ವಕೀಲ ಬ್ರಹ್ಮಾಸ್ ಮಡಿಕೇರಿ ಹಾಗೂ ಮಹಿಳೆಯರ ವಿಭಾಗದಲ್ಲಿ ಗುಡ್ಡೆಹಿತ್ಲು ತಂಡ ಪ್ರಶಸ್ತಿ ಪಡೆದುಕೊಂಡಿತು. ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಗೋಣಿಕೊಪ್ಪ ಹಾಗೂ ಕುಶಾಲನಗರ, ಬ್ರಾಹ್ಮಣರ ಸಂಘ ಸೋಮವಾರಪೇಟೆ ಹಾಗೂ ವಿರಾಜಪೇಟೆ ಸಂಘಗಳು ಕ್ರೀಡಾಕೂಟಕ್ಕೆ ಸಹಕಾರ ನೀಡಿದವು.

ಸಮಾಜದಲ್ಲಿ ಒಗ್ಗಟ್ಟು ಅಗತ್ಯ: ಬಿ.ಜಿ‌ ಅನಂತಶಯನ

ಸಮಾಜದಲ್ಲಿ ಇಂದು ಒಗ್ಗಟ್ಟು ಇಲ್ಲದಿದ್ದರೆ ಏನೂ ಕೂಡ ಸಾಧಿಸಲು ಸಾಧ್ಯವಿಲ್ಲ ಎಂದು ಪತ್ರಕರ್ತ ಬಿ.ಜಿ ಅನಂತಶಯನ ಅವರು ಅಭಿಪ್ರಾಯಪಟ್ಟರು.

ವಿಪ್ರ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಇಂದಿನ ಪಂದ್ಯದಲ್ಲಿ ಸಮಾಜದ ಬಾಂಧವರು ಪರಸ್ಪರ ಪರಿಚಯವನ್ನು ಮಾಡಿಕೊಂಡಿದ್ದಾರೆ. ಈ ಒಗ್ಗಟ್ಟನ್ನು ಸದುಪಯೋಗಿಸಿಕೊಂಡು ಬ್ರಾಹ್ಮಣ ಸಮಾಜದ ಸಂಘಟನೆಯತ್ತ ಗಮನಹರಿಸಬೇಕು ಎಂದು ಹೇಳಿದರು. ಧ್ಯಾನ, ಸಮಾಧಾನದಿಂದ ಮಾತ್ರವಷ್ಟೆ ಸಮಾಜದಲ್ಲಿನ ದುಷ್ಟಶಕ್ತಿಗಳನ್ನು ಎದುರಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಎಲ್ಲರೂ ಒಂದಾಗಿ ಸಂಘಟಿತವಾಗಿ ಹೋರಾಡುವ ಅಗತ್ಯವಿದೆ ಎಂದು ಕೂಡ ಈ ಸಂದರ್ಭ ಹೇಳಿದರು.

ಮತ್ತೋರ್ವ ಅತಿಥಿ ಮಡಿಕೇರಿ ಕೊಡಗು ವಿದ್ಯಾಲಯದ ಸಮಿತಿ ಸದಸ್ಯ ಗುರುದತ್ ಅವರು ಮಾತನಾಡಿ, ವಿದ್ಯಾಭಿವೃದ್ಧಿ ನಿಧಿ ಶತಮಾನಭವನವನ್ನು ನಿರ್ಮಿಸಿದ್ದಲ್ಲದೆ 3ನೇ ವರ್ಷದ ಕ್ರೀಡಾಕೂಟವನ್ನೂ ಆಯೋಜಿಸಿ ಯಶಸ್ಸು ಕಂಡಿದೆ. ನನ್ನ ತಂದೆ ಸಿ.ವಿ ಶಂಕರ್ ಅವರು ಜನರಲ್‌ ತಿಮ್ಮಯ್ಯ ಮೈದಾನದಲ್ಲಿ ಕೊಡಗಿನ ಹಲವಾರು ಕ್ರೀಡಾಪಟುಗಳಿಗೆ ಹಾಕಿ ಹಾಗೂ ಕ್ರಿಕೆಟ್ ತರಬೇತಿ ನೀಡಿದ್ದು, ಇಂದು ಹಲವಾರು ಕ್ರೀಡಾಪಟುಗಳು ಭಾರತ ತಂಡದ ಪರವೂ ಆಡಿದ್ದಾರೆ. ಇನ್ನು ಕೆಲ ಮಂದಿ ಉದ್ಯೋಗಗಳನ್ನೂ ಪಡೆದುಕೊಂಡಿದ್ದಾರೆ. ಅವರ ನೆನಪಿಗೆ ಈ ಮೈದಾನದಲ್ಲಿನ ಗ್ಯಾಲರಿಗೆ ಅವರ ಹೆಸರನ್ನು ಇಡಲು ಈ ಹಿಂದೆ ಅನುರಾಗ್ ತಿವಾರಿ ಅವರು ಜಿಲ್ಲಾಧಿಕಾರಿ ಆಗಿದ್ದಾಗಲೇ ನಿಶ್ಚಯಿಸಲಾಗಿತ್ತು. ಆದರೆ ಇಂದಿಗೂ ಕೂಡ ಅದು ಈಡೇರಿಲ್ಲ. ಮೈದಾನ ನಿರ್ವಹಣೆಯೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಈ ಮೈದಾನವನ್ನು ಕ್ರಿಕೆಟ್ ಗೆ ಮೀಸಲಿಟ್ಟು ಬದಿಯಲ್ಲಿ ಅಭ್ಯಾಸ ಪಿಚ್ ಗಳನ್ನು ನಿರ್ಮಿಸುವಂತಾಗಬೇಕು ಎಂದು ಅವರು, ಹಾಕಿಗೆ ಇನ್ನೊಂದು ಮೈದಾನವಿದೆ. ಅದನ್ನೂ ಅಭಿವೃದ್ಧಿಪಡಿಸುವಂತಾಗಬೇಕು ಎಂದರು.

ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿದರು. ಕ್ರೀಡೋತ್ಸವದ ಕ್ರೀಡಾ ಸಂಚಾಲಕ ಗೋಪಾಲಕೃಷ್ಣ ಅವರು ಮಾತನಾಡಿ, ವಿಪ್ರ ಕ್ರೀಡೋತ್ಸವವು ಸಮಾಜದ ಸಂಘಟನೆಗೆ ಅತ್ಯುತ್ತಮ ವೇದಿಕೆ. ಕಳೆದ 3 ವರ್ಷಗಳಿಂದ ಅತ್ಯುತ್ತಮವಾಗಿ ಕ್ರೀಡೋತ್ಸವ ನಡೆಯುತ್ತಿದೆ‌ ಎಂದರು.

ಸಮಾಜದ ಹಿರಿಯರಾದ ಜಿ.ಟಿ ರಾಘವೇಂದ್ರ ಆಟಗಾರರಿಗೆ ಶುಭ ಕೋರಿದರು. ವಿದ್ಯಾಭಿವೃದ್ಧಿ ನಿಧಿ ನಿರ್ದೇಶಕ ಬಿ.ಕೆ ಜಗದೀಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಈ ಸಂದರ್ಭ ವಿದ್ಯಾಭಿವೃದ್ಧಿ ನಿಧಿಯ ಉಪಾಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ಬಿ.ಕೆ ಅರುಣ್ ಕುಮಾರ್, ಸಹ ಕಾರ್ಯದರ್ಶಿ ಎ.ವಿ ಮಂಜುನಾಥ್, ಖಜಾಂಚಿ ರವಿಶಂಕರ್ ಜಿ.ಆರ್, ಲಲಿತಾ ರಾಘವನ್, ಸವಿತಾ ಭಟ್, ಮಂಜುಳಾ ರಾಮಕೃಷ್ಣ, ಶಿವಶಂಕರ್, ನಿಧಿಯ ಸಲಹೆಗಾರ ಸಂಪತ್ ಕುಮಾರ್, ಪ್ರಭಾಕರ ನೆಲ್ಲಿತ್ತಾಯ, ಶ್ಯಾಮ್ ಭಟ್ ಹಾಗೂ ಇತರರು ಇದ್ದರು. ಹರೀಶ್ ಸರಳಾಯ ವೀಕ್ಷಕ ವಿವರಣೆಗಾರಿಕೆ ನೀಡಿದರು. ಎ.ವಿ ಮಂಜುನಾಥ್ ಸ್ಕೋರ್ ರಚನೆಯಲ್ಲಿ ಸಹಕರಿಸಿದರು. ತೀರ್ಪುಗಾರರಾಗಿ ನಯನ್, ನಂದೀಶ್ ಹಾಗೂ ರಕ್ಷಿತ್ ಕಾರ್ಯನಿರ್ವಹಿಸಿದರು. ಕ್ರೀಡಾಕೂಟ ವಿಜೇತರಿಗೆ ಟ್ರೋಫಿ ಪ್ರದಾನ, ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಜನವರಿಯಲ್ಲಿ ನಡೆಯಲಿದೆ.