ಸವಣೂರು: ಭಕ್ತರ ಇಚ್ಛೆಗೆ ಅನುಗುಣವಾಗಿ ಮೂರು ವರ್ಷಗಳಿಂದ ಗುಗ್ಗಳ ಸಮೇತ ಶ್ರೀಕ್ಷೇತ್ರ ಕಾರಡಗಿ ಶ್ರೀ ವೀರಭದ್ರೇಶ್ವರ ದೇವರಿಗೆ ತೆರಳುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ತಿಳಿಸಿದರು.ತಾಲೂಕಿನ ಸುಕ್ಷೇತ್ರ ಕಾರಡಗಿ ಗ್ರಾಮದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸವಣೂರಿನಿಂದ ಮೂರನೇ ವರ್ಷದ ಗುಗ್ಗಳ ಸಮೇತ ಕಾರಡಗಿಗೆ ಸವಣೂರ ಭಕ್ತರ ಪಾದಯಾತ್ರೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಬೇರೆ ದೇವರಲ್ಲಿ ಕ್ಷಮಾಗುಣ ಇರಬಹುದು. ಆದರೆ, ಶ್ರೀ ವೀರಭದ್ರ ದೇವರ ಮುಂದೇ ತಪ್ಪು ಮಾಡಿದಲ್ಲಿ ಶಿಕ್ಷೆ ಒಂದೇ ಪರಿಹಾರ. ಅಂತಹ ಏಕ ಮಾತ್ರ ದೇವರು ಶ್ರೀ ವೀರಭದ್ರ ಆಗಿದ್ದಾನೆ. ಆದ್ದರಿಂದ, ಭಕ್ತರು ಧರ್ಮ ಜಾಗೃತವಾಗಿದ್ದಾರೆ.ಪುರವಂತರ ಮನೆತನವಾಗಿರುವ ಮತ್ತಿಗಟ್ಟಿ ಕುಟುಂಬಸ್ಥರಿಗೆ ಮಾತ್ರ ಸೀಮಿತವಾಗಬೇಕಿದ್ದ ಗುಗ್ಗಳ ಸಮೇತ ಪಾದಯಾತ್ರೆ ಕೇವಲ ಸವಣೂರ ಮಾತ್ರ ಅಲ್ಲದೇ ಗೋವಾ ಸೇರಿದಂತೆ ವಿವಿಧ ಜಿಲ್ಲೆ, ತಾಲೂಕು ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿ ಸಹಸ್ರಾರು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವದನ್ನು ಕಂಡು ಸಂತಸವಾಗಿದೆ. ಪ್ರತಿ ವರ್ಷ ನಾನು ಸಹ ಭಕ್ತರ ನಿರೀಕ್ಷೆಯಂತೆ ಭಾಗವಹಿಸತ್ತೇನೆ ಎಂದರು.ತಹಸೀಲ್ದಾರ್ ರವಿಕುಮಾರ ಕೊರವರ ಮಾತನಾಡಿ, ನಾನು ಶ್ರೀವೀರಭದ್ರ ದೇವರ ಭಕ್ತನಾಗಿ ಸ್ವ-ಇಚ್ಛೆಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದೇನೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷದಿಂದ ಏರಿಕೆ ಕಾಣುತ್ತಿರುವದು ಸಂತಸವಾಗಿದೆ ಎಂದರು.ಗಂಗಾಧರಯ್ಯ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಸುಭಾಸ ಗಡೆಪ್ಪನವರ, ಸಂದೀಶ ಕಂಬಾಳಿಮಠ, ಮಂಜುನಾಥ ಶೆಟ್ಟರ, ಡಾ. ಗುರುಪಾದಯ್ಯ ಸಾಲಿಮಠ, ವೀರಣ್ಣ ತೆಗ್ಗಿಹಳ್ಳಿ, ಕುಮಾರ ತೆಗ್ಗಿಹಳ್ಳಿ, ಸಂತೋಷ ಗುಡಿಸಾಗರ ಸೇರಿದಂತೆ ವಿವಿಧ ಪ್ರಮುಖರು ಪಾಲ್ಗೊಂಡಿದ್ದರು. ಪತ್ರಕರ್ತ ಆನಂದ ಮತ್ತಿಗಟ್ಟಿ ನಿರ್ವಹಿಸಿದರು.ಹಿರಿಯ ಪುರವಂತರಾದ ರುದ್ರೇಶ ಮತ್ತಿಗಟ್ಟಿ ಹಾಗೂ ನಾಗಪ್ಪ ಕುಂಬಾರ ಅವರ ನೇತೃತ್ವದಲ್ಲಿ ಸವಣೂರಿನಿಂದ ಗುಗ್ಗಳ ಸಮೇತ ಪಾದಯಾತ್ರೆ ಅಪಾರ ಸಂಖ್ಯೆಯ ಭಕ್ತರೊಂದಿಗೆ ಕಾರಡಗಿ ತಲುಪಿತು.ಕಾರಡಗಿಯಲ್ಲಿ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ವೆಂಕಟರಾವ್ ಕುಲಕರ್ಣಿ ಹಾಗೂ ಸರ್ವ ಪದಾಧಿಕಾರಿಗಳು ಗುಗ್ಗಳ ಸಮೇತವಾಗಿ ಆಗಮಿಸಿದ ಪಾದಯಾತ್ರಿಕರನ್ನು ಸ್ವಾಗತಿಸಿದರು.