ಸವಣೂರು: ಏಪ್ರಿಲ್ ೧ರಿಂದ ೩ರ ವರೆಗೆ ಜರುಗಲಿರುವ ಈ ಭಾಗದ ಆರಾಧ್ಯ ದೈವ ತಾಲೂಕಿನ ಸುಕ್ಷೇತ್ರ ಕಾರಡಗಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ರಾಘವೇಂದ್ರಗೌಡ ಪಾಟೀಲ ತಿಳಿಸಿದರು. ತಾಲೂಕಿನ ಕಾರಡಗಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಏ.೧ರಂದು ಸಂಜೆ ೫ ಗಂಟೆಗೆ ವೀರಭದ್ರೇಶ್ವರ ಉತ್ಸವ ಮೂರ್ತಿ ಮೆರವಣಿಗೆ ಹಾಗೂ ಮಹಾ ಗಣಾರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಏ. ೨ರಂದು ಪ್ರಾಥಃಕಾಲ ದೇವರಿಗೆ ರುದ್ರಾಭಿಷೇಕ, ನಂತರ ಗುಗ್ಗಳದೊಂದಿಗೆ ವಿವಿಧ ಧಾರ್ಮಿಕ ಕೈಂಕರ್ಯ ಹಾಗೂ ಸಂಜೆ ೫ ಗಂಟೆಗೆ ಮಂತ್ರವಾಡಿ ಸುಕ್ಷೇತ್ರದ ಸಿದ್ಧರಾಮೇಶ್ವರ ಸ್ವಾಮೀಜಿ, ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿಗಳವರ ಸಾನಿಧ್ಯದಲ್ಲಿ ವೀರಭದ್ರೇಶ್ವರ ಮಹಾ ರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಅಂದು ಸಂಜೆ ಹರ್ಲಾಪುರದ ಶಂಭಯ್ಯ ಹಿರೇಮಠ ಅವರ ಸಾರಥ್ಯದಲ್ಲಿ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರದ(ಸಿ.ವೈ.ಸಿ.ಡಿ) ಕಲಾತಂಡದ ವತಿಯಿಂದ ಜಾಗೃತ ಜಾನಪದ ಕಾರ್ಯಕ್ರಮಗಳು ಜರುಗಲಿವೆ. ಏ.೩ ರಂದು ಪ್ರಾಥಃಕಾಲ ದೇವರಿಗೆ ವಿಶೇಷ ಪೂಜೆ ಅಂದು ಸಂಜೆ ಕಡುಬಿನ ಕಾಳಗ ಹಾಗೂ ಪಲ್ಲಕ್ಕಿ ಉತ್ಸವ ಜರುಗುವುದು ಎಂದು ಹೇಳಿದರು.ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಲು ಕಮಿಟಿ ಮುಂದಾಗಿದ್ದು, ಭಕ್ತಾಧಿಗಳಿಗೆ ಯಾವುದೇ ರೀತಿ ಸಮಸ್ಯೆಗಳು ಉದ್ಭವಿಸದಂತೆ ಕ್ರಮ ವಹಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ನೇಮಕಗೊಂಡ ಮೂರುವರೆ ವರ್ಷಗಳಲ್ಲಿ, ವಿವಿಧ ದಾನಿಗಳಿಂದ ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ವಾಣಿಜ್ಯ ಮಳಿಗೆ, ಯಾತ್ರಿ ನಿವಾಸ, ರಂಗಮಂದಿರ, ಕಲ್ಯಾಣಮಂಟಪದ ಜೀರ್ಣೋದ್ದಾರವನ್ನು ಕೈಗೊಳ್ಳಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸಲು ದಾಸೋಹ ಮಂದಿರವನ್ನು ಕೂಡಾ ನಿರ್ಮಿಸಲಾಗುತ್ತಿದೆ. ಈಗಾಗಲೇ, ದಾನಿಗಳಿಂದ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ಮಹಾದ್ವಾರದ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದ್ದು, ಮುಂಬರುವ ದಿನಗಳಲ್ಲಿ, ಸವಣೂರಿನ ಕಾರಡಗಿ ಕ್ರಾಸ್‌ಬಳಿ, ಹುಲಗೂರಿನ ಕಾರಡಗಿ ಕ್ರಾಸ್, ಮಾದಾಪುರದಿಂದ ದೇವಸ್ಥಾನಕ್ಕೆ ತೆರಳುವ ಒಳ ರಸ್ತೆಯಲ್ಲಿ ಮಹಾದ್ವಾರಗಳನ್ನು ನಿರ್ಮಿಸುವ ಸದುದ್ದೇಶ ಹೊಂದಲಾಗಿದೆ. ಆದ್ದರಿಂದ, ಭಕ್ತಾಧಿಗಳು ನಿರ್ಮಾಣ ಕಾರ್ಯಕ್ಕೆ ತನು ಮನ, ಧನ ಭಕ್ತಿ ಸೇವೆಗೆ ಮುಂದಾಗಬೇಕು ಎಂದರು. ಈ ಹಿಂದಿನಿಂದಲೂ ಪ್ರತಿ ಮಂಗಳವಾರ ವೀರಭದ್ರಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯುತ್ತಾ ಬಂದಿದ್ದು, ಭಕ್ತಾಧಿಗಳ ಅಪೇಕ್ಷೆಯಂತೆ ಪಲ್ಲಕ್ಕಿಯೊಂದಿಗೆ ಬೆಳ್ಳಿ ರಥವನ್ನು ಸಹ ಎಳೆಯುವ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲು ಸುಮಾರು ೧.೫ ಕ್ವಿಂಟಾಲ್ ರಥವನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿದ್ದು, ಭಕ್ತಾಧಿಗಳು ಬೆಳ್ಳಿ ಸೇವೆ ಸಲ್ಲಿಸುವ ಮೂಲಕ ರಥದ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ವಿ.ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಟ್ರಸ್ಟನ ಸಹ ಕಾರ್ಯದರ್ಶಿ ಲ್ಯಾವಪ್ಪ ಕುರವತ್ತಿ, ನಿರ್ದೇಶಕ ಬಸಟ್ಟೆಪ್ಪ ಅತ್ತಿಗೇರಿ ಉಪಸ್ಥಿತರಿದ್ದರು.
ನಾಳೆಯಿಂದ ಕಾರಡಗಿ ವೀರಭದ್ರೇಶ್ವರ ಜಾತ್ರಾಮಹೋತ್ಸವ
ಏಪ್ರಿಲ್ ೧ರಿಂದ ೩ರ ವರೆಗೆ ಜರುಗಲಿರುವ ಈ ಭಾಗದ ಆರಾಧ್ಯ ದೈವ ತಾಲೂಕಿನ ಸುಕ್ಷೇತ್ರ ಕಾರಡಗಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ರಾಘವೇಂದ್ರಗೌಡ ಪಾಟೀಲ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.