ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಯುಕೆಪಿ 524.256 ಮೀ.ವರೆಗೆ ಎರಡು ಹಂತದಲ್ಲಿ ಪರಿಹಾರ ನೀಡಲು ಸೂಚಿಸಿದ್ದೆ ಸಂಸದ ಗೋವಿಂದ ಕಾರಜೋಳ. ಆದರೆ, ಮೊನ್ನೆ ಇದಕ್ಕೆ ದಾಖಲೆ ನೀಡಿದರೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ನಮ್ಮಲ್ಲಿ ದಾಖಲೆಗಳಿದ್ದು, ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ವಕ್ತಾರ ಚಂದ್ರಶೇಖರ ರಾಠೋಡ ಆಗ್ರಹಿಸಿದರು.ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಜೋಳ ಅವರು ರಾಜೀನಾಮೆ ನೀಡದಿದ್ದರೇ ಈ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. 6 ದಶಕದ ಯೋಜನೆ ಇಲ್ಲಿಯವರೆಗೆ ಮುಗಿದಿಲ್ಲ. ಇದಕ್ಕೆ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಕಾರಣವಾಗಿವೆ. ಎಲ್ಲವನ್ನು ಬಿಟ್ಟು ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ಈ ಯೋಜನೆ ಪೂರ್ಣಗೊಳ್ಳಲು ಸಾಧ್ಯ. ಅದನ್ನು ಬಿಟ್ಟು ಸಂಸದ ಗೋವಿಂದ ಕಾರಜೋಳ ಅವರು ಹೋರಾಟದ ವೇದಿಕೆಯನ್ನು ರಾಜಕೀಯಕ್ಕಾಗಿ ಬಳಸಿದ್ದು ಹೀನ ಕೃತ್ಯ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಯುಕೆಪಿ ನೀರು ಹಂಚಿಕೆ ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಈ ಯೋಜನೆಯನ್ನು ರಾಷ್ಟ್ರೀಯ ಎಂದು ಘೋಷಿಸಲಾಗಲ್ಲ ಎಂದು ಸಂಸದ ಕಾರಜೋಳ ತಿಳಿಸಿದರು. ಆದರೆ, ದೇಶದ ದೊಡ್ಡ ದೊಡ್ಡ ಉದ್ದಿಮೆಗಳ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಕಾನೂನಿನ ಅಡೆತೆಯಾಗಲಿಲ್ಲವೇ? ಇಲ್ಲವನ್ನು ಬಿಟ್ಟು, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.ಮುಖಂಡ ರಮೇಶ ಬದ್ನೂರ ಮಾತನಾಡಿ, 2018-19 ಹಾಗೂ 2021-22ರಲ್ಲಿ ಮಹದಾಯಿ ಹೋರಾಟ ತಾರ್ಕಿಕ ಅಂತ್ಯ ಕಾಣುವ ಸಂದರ್ಭದಲ್ಲಿ ಅಂದಿನ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಹೋರಾಟವನ್ನು ಬಲಿ ಕೊಟ್ಟರು. ರನ್ನ ಕಾರ್ಖಾನೆ ಮುಳುಗಿಸಿ ನೂರಾರು ಕುಟುಂಬಗಳು ಬೀದಿಗೆ ಬರುವಂತೆ ಮಾಡಿ, ಇಂದು ಸಹಿತ ಹೋರಾಟ ವೇದಿಕೆಯನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಂಡು ಹೋರಾಟ ಬಲಿ ಕೊಡುವ ಸುಪಾರಿ ಪಡೆದುಕೊಂಡು ಜಿಲ್ಲೆಗೆ ಬಂದಿದ್ದಾರೆ. ಈ ಕುರಿತು ಕೂಡಲೇ ಕ್ಷಮೆಯಾಚಿಸದಿದ್ದರೇ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬರಲು ನಿಮ್ಮನ್ನು ಬಿಡುವುದಿಲ್ಲ ಎಂದು ತಾಕೀತು ಮಾಡಿದರು. ಮುಖಂಡರಾದ ನಾಗರಾಜ ಹದ್ಲಿ ಹಾಗೂ ಶ್ರೀನಿವಾಸ ಬಳ್ಳಾರಿ ಇದ್ದರು.