ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಲಿಂಗಾಂಗ ಸಮಾರಸ್ಯ ಪಡೆಯಲು ಬೇಕಾದ ಎಲ್ಲ ಮಾಹಿತಿಗಳ ಕೋಶವೇ ಕರಣ ಹಸಿಗೆ ಗ್ರಂಥ ಎಂದು ನಾಗೇನಹಳ್ಳಿ-ಹೋಸಪೇಟೆ ಮನೋರೋಗ ತಜ್ಞ ಡಾ.ಅಜಯಕುಮಾರ ತಾಂಡೂರ ಹೇಳಿದರು.ನಗರದ ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠ ಆವರಣದಲ್ಲಿ ಬಸವ ಕೇಂದ್ರದ ೬೩೯ನೇ ಮಾಸಿಕ ಶಿವಾನುಭವ ಕಾರ‍್ಯಕ್ರಮ ಹಾಗೂ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ನಿಮಿತ್ತ ಹಮ್ಮಿಕೊಳ್ಳಲಾದ ಚನ್ನಬಸವಣ್ಣನವರ ಕರಣಹಸಿಗೆ ವೈಜ್ಞಾನಿಕ ವಿಶ್ಲೇಷಣೆ ಗ್ರಂಥ ಬಿಡುಗಡೆ ಕಾರ‍್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಲಿಂಗಾಯತರು ಏಕೋಪಾಸಕರು. ಗುಡಿಗುಂಡಾರಗಳು ನಮ್ಮ ಧರ್ಮದಲ್ಲಿಲ್ಲ. ಗುಡಿಗುಂಡಾರಗಳಿಂದ ಹೊರತಾಗಿರುವ ಧರ್ಮವೇ ಲಿಂಗಾಯತ ಧರ್ಮ ಎಂದು ಹೇಳಿದರು.
೧೨ನೇ ಶತಮಾನದಲ್ಲಿ ಆರೋಗ್ಯದ ದೃಷ್ಟಿಯಿಂದ ಬಹಳ ಹೀನಾಯವಾದ ಸ್ಥಿತಿಯಲ್ಲಿದ್ದ ದೀನದಲಿತರ ಆರೋಗ್ಯ ಸುಧಾರಣೆಗಾಗಿ ಚನ್ನಬಸವಣ್ಣನವರು ರಚಿಸಿರುವ ೪೦ ವಚನಗಳ ಕೃತಿಯೇ ಕರಣಹಸಿಗೆ. ಅಂದಿನ ಬಸವಣ್ಣ ಅಥವಾ ಶರಣರು ಗುರು, ಲಿಂಗ, ಜಂಗಮದ ಪರಿಕಲ್ಪನೆ ತಂದರು. ಗುರು ಎಂದರೆ ಅರಿವು, ನಮ್ಮೊಳಗಡೆ ಇರುವ ಆಧ್ಯಾತ್ಮಿಕ ಹಾಗೂ ಮನಸ್ಸಿನ ಆರೋಗ್ಯ. ಲಿಂಗ ಎಂದರೆ ನಮ್ಮ ದೇಹ ಹಾಗೂ ದೈಹಿಕ ಆರೋಗ್ಯ. ಜಂಗಮ ಎಂದರೆ ಸಾಮಾಜಿಕ ಆರೋಗ್ಯ. ಇವುಗಳಿಂದ ಮಾತ್ರ ನಮ್ಮ ಆರೋಗ್ಯ ಸ್ವಸ್ಥತೆ ಸಾಧ್ಯ ಎಂದು ಹೇಳಿದರು.ನಮ್ಮ ಮನಸ್ಸು ಸ್ವಸ್ಥವಾಗಿರಬೇಕು, ನಮ್ಮ ವಿವೇಚನೆಗಳು, ಭಾವನೆಗಳು ಬೇರೆಯವರಿಗೆ ನೋವಾಗದಂತೆ ನಡೆದುಕೊಳ್ಳುವುದು ಕೂಡ ಸಾಮಾಜಿಕ ಆರೋಗ್ಯವಾಗಿದೆ. ಇಂದು ಹೆಚ್ಚುತ್ತಿರುವ ಗುಡಿಗುಂಡಾರಗಳಿಂದ ಭಯ ಹೆಚ್ಚಾದರೆ, ಆಸ್ಪತ್ರೆಗಳಿಂದ ನಮ್ಮ ಹಾಯ್‌ಲೆವೆಲ್ ಹೆಚ್ಚಾಗಿದೆ.
ಅಂದಿನ ಬಸವಾದಿ ಶರಣರು ನಮ್ಮ ಆರೋಗ್ಯ ಸುಧಾರಣೆಗಾಗಿ ನಮ್ಮೊಳಗಿನ ಅಂತರ್ ಯಾತ್ರೆಗೆ ಮಹತ್ವ ನೀಡಿದರು. ಅಂದರೆ ಹೊರಗಿನ ಆರೋಗ್ಯ ಸುಧಾರಣೆ ಜೊತೆಗೆ ನಮ್ಮೊಳಗಿನ ಮನಸ್ಸು ಕೂಡ ಸ್ವಸ್ಥವಾಗಿರಬೇಕು. ನಮ್ಮ ಯೋಚನೆಗಳು, ಭಾವನೆಗಳು ಸಮತೋಲನವಾಗಿದ್ದರೆ ಮಾತ್ರ ನಮ್ಮ ಎದೆ ಬಡಿತ ಸರಿಯಾಗಿರುತ್ತದೆ ಎಂದು ಪ್ರತಿಪಾದಿಸಿದರು ಹೇಳಿದರು.ವ್ಯಕ್ತಿಯ ಬಗ್ಗೆ ಗಮನ ಕೊಡಬೇಡಿ, ಶಕ್ತಿಯ ಕಡೆ ಗಮನ ಕೊಟ್ಟಾಗ ಮಾತ್ರ ನಾನು ವಸ್ತುವಿನಿಂದ ಶಕ್ತಿಯ ಕಡೆ, ಸ್ಥೂಲದಿಂದ ಸೂಕ್ಷ್ಮದತ್ತ, ವಸ್ತುವಿನಿಂದ ಶಕ್ತಿಯತ್ತ ಹೋಗಲು ಸಾಧ್ಯ. ಶಕ್ತಿಯ ಕಡೆ ಹೋದಾಗ ನಮ್ಮ ಯಾತ್ರೆ ನಿಲ್ಲಲ್ಲ, ಶಕ್ತಿಯಿಂದ ಬಯಲಿನ ಕಡೆ ಹೋಗಬೇಕು, ಅದೇ ನಮ್ಮ ಮೂಲ ಗುರಿ. ಈ ಪರಿಕಲ್ಪನೆಯೇ ಅಂತರ್‌ಯಾತ್ರೆ ಎಂದು ವೈಜ್ಞಾನಿಕ ವಿಶ್ಲೇಷನೆ ಮಾಡಿದರು.
ಹೊಸಪೇಟೆ ವಿಜಯನಗರ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬ್ಯಾಲಹುನಸಿಯ ಡಾ.ಎಸ್. ಶಿವಾನಂದ ಮಾತನಾಡಿದರು.ಗುರುಮಹಾಂತ ಶ್ರೀಗಳು, ಶಿರೂರಿನ ಮಹಾಂತತೀರ್ಥದ ಡಾ.ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಬಾಗಲಕೋಟೆ ಜಿಪಂ ಮಾಜಿ ಅಧ್ಯಕ್ಷೆ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ, ಬಸವ ಕೇಂದ್ರ ಅಧ್ಯಕ್ಷ ಮಹಾಂತೇಶ ವಾಲಿ ಉಪಸ್ಥಿತರಿದ್ದರು.
ಅಕ್ಕನ ಬಳಗದ ತಾಯಂದಿರು ವಚನ ಪ್ರಾರ್ಥಿಸಿದರು. ಪ್ರವೀನ ಮುದಗಲ್ಲ ಸ್ವಾಗತಿಸಿದರು. ಸಂಗಣ್ಣ ಗದ್ದಿ ನಿರೂಪಿಸಿ ವಂದಿಸಿದರು.