ಇಲ್ಲಿನ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಡ್ಯದ ಕರ್ನಾಟಕ ರಾಜ್ಯ ತ್ರೋಬಾಲ್ ಸಂಘ ಸಹಯೋಗದೊಂದಿಗೆ 36 ನೇ ಕಿರಿಯ ಬಾಲಕ ಬಾಲಕಿಯರ ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟದ ತರಬೇತಿ ಮತ್ತು ಆಯ್ಕೆ ಶಿಬಿರ ನಡೆಯುತ್ತಿದೆ.
ಬ್ರಹ್ಮಾವರ: ಇಲ್ಲಿನ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಡ್ಯದ ಕರ್ನಾಟಕ ರಾಜ್ಯ ತ್ರೋಬಾಲ್ ಸಂಘ ಸಹಯೋಗದೊಂದಿಗೆ 36 ನೇ ಕಿರಿಯ ಬಾಲಕ ಬಾಲಕಿಯರ ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟದ ತರಬೇತಿ ಮತ್ತು ಆಯ್ಕೆ ಶಿಬಿರ ನಡೆಯುತ್ತಿದೆ. ಜಿ ಎಮ್ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಶಿಬಿರಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ತ್ರೋಬಾಲ್ ಕ್ರೀಡೆಯಲ್ಲಿ ಕೌಶಲ್ಯವನ್ನು ಪಡೆದುಕೊಂಡು ನಮ್ಮ ದೇಶದ ಹಿರಿಮೆಗೆ ಕಲಶ ಪ್ರಾಯರಾಗಬೇಕು ಎಂದು ಹಾರೈಸಿದರು.
ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಅವರು, ತ್ರೋಬಾಲ್ ಪಂದ್ಯಾಟ ಅದರ ಮಹತ್ವವನ್ನು ತಿಳಿಸಿ ಪ್ರತೀ ಶಿಬಿರಾರ್ಥಿಯು ಪರಸ್ಪರ ಸಹಕಾರದಿಂದ ಶಿಬಿರದಲ್ಲಿ ಭಾಗವಹಿಸಿ ಉನ್ನತ ಮಟ್ಟ ತಲುಪಿ ಎಂದು ಶುಭ ಕೋರಿದರು.ರಾಜ್ಯಮಟ್ಟದ ತ್ರೋಬಾಲ್ ತರಬೇತುದಾರ ಆನಂದತೀರ್ಥ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಶೆಟ್ಟಿ ಅವರು ಶಿಬಿರದ ವಿವರಣೆ ನೀಡಿದರು. ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಹಾಗೂ ರಾಜ್ಯ ತರಬೇತುದಾರರಾದ ಹರ್ಷ, ಸಂಜಯ್ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ 30 ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ತ್ರೋಬಾಲ್ ಆಟಗಾರರು ಉಪಸ್ಥಿತರಿದ್ದರು. ಆಪ್ತ ಸಮಾಲೋಚಕಿ ನೀಲಾವತಿ ಕಾರ್ಯಕ್ರಮ ನಿರೂಪಿಸಿ, ವಿಜಯಕುಮಾರ್ ಸ್ವಾಗತಿಸಿದರು ಮತ್ತು ಸುರೇಶ್ ನಾಯಕ್ ವಂದಿಸಿದರು.