ವರದಿ: ದುರ್ಗಾಕುಮಾರ್ ನಾಯರ್ ಕೆರೆ

ಕಾಸರಗೋಡು: ಕರ್ನಾಟಕ - ಕೇರಳ ರಾಜ್ಯಗಳ ಗಡಿ ಪ್ರದೇಶವೂ, ಕ್ಷೇತ್ರಗಳ ಸಂಖ್ಯೆಯ ದೃಷ್ಟಿಯಲ್ಲಿ ಒಂದನೇ ಕ್ಷೇತ್ರವೂ ಆಗಿರುವ ಮಂಜೇಶ್ವರ ಕೇರಳಂ ವಿಧಾನ ಸಭೆಯ ಹೈ ವೋಲ್ಟೇಜ್‌ ಕ್ಷೇತ್ರಗಳ ಪೈಕಿಯೂ ಒಂದನೆಯದಾಗಿದೆ.

1957 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ವಿಧಾನ ಕ್ಷೇತ್ರದಲ್ಲಿ ಎಲ್.ಡಿ.ಎಫ್. ಮತ್ತು ಯು.ಡಿ.ಎಫ್. ಹೀಗೆ ಎರಡೂ ಒಕ್ಕೂಟಗಳು ಅಧಿಕಾರ ಪಡೆದಿದ್ದು 2011 ರಿಂದ ಯು.ಡಿ.ಎಫ್.‌ ಭಾಗವಾಗಿರುವ ಇಂಡಿಯನ್‌ ಮುಸ್ಲೀಮ್‌ ಲೀಗ್‌ ಪ್ರತಿನಿಧಿತ್ವ ಇದೆ. ಆದರೆ 2006 ರಿಂದಲೇ ಇಲ್ಲಿ ಬಿಜೆಪಿ ಅಭ್ಯರ್ಥಿಗಳು ಎರಡನೇ ಸ್ಥಾನದಲ್ಲಿದ್ದಾರೆ ಎನ್ನುವುದೂ ವಿಶೇಷ.ಎಣ್ಮಕಜೆ, ಕುಂಬಳೆ, ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ಪೈವಳಿಕೆ, ಪುತ್ತಿಗೆ, ವರ್ಕಾಡಿ ಪಂಚಾಯಿತಿ ವ್ಯಾಪ್ತಿಗಳನ್ನು ಹೊಂದಿರುವ ಮಂಜೇಶ್ವರ ವಿಧಾನ ಸಭಾ ಕ್ಷೇತ್ರವು ಕನ್ನಡಿಗರನ್ನು ಹೆಚ್ಚು ಹೊಂದಿರುವ ಕ್ಷೇತ್ರವಾಗಿದ್ದು, ಮುಸ್ಲಿಂ ಮತಗಳ ಬಾಹುಳ್ಯದ ಕ್ಷೇತ್ರವೂ ಆಗಿದೆ.ಕ್ಷೇತ್ರದ ಇತಿಹಾಸ: ಕ್ಷೇತ್ರದ ಇತಿಹಾಸವನ್ನು ನೋಡುವುದಾದರೆ 1957ರಲ್ಲಿ ಸ್ವತಂತ್ರ ಪಕ್ಷದ ಎಂ.ಉಮೇಶ್‌ ರಾವ್‌ ಇಲ್ಲಿ ಗೆದ್ದು ಶಾಸಕರಾಗಿದ್ದರು. 1960 ಮತ್ತು 1965ರಲ್ಲಿ ಕೆ.ಮಹಾಬಲ ಭಂಡಾರಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾದರೆ, 1967ರಲ್ಲಿ ಅವರು ಸ್ವತಂತ್ರ ಪಕ್ಷದಿಂದ ಗೆದ್ದು ಶಾಸಕರಾದರು. ಆ ಬಳಿಕ ಸುಮಾರು ಒಂದು ದಶಕದಷ್ಟು ಈ ಕ್ಷೇತ್ರ ಎಡರಂಗದ ಹಿಡಿತದಲ್ಲಿತ್ತು. 1970 ಮತ್ತು 1975ರಲ್ಲಿ ಎಂ. ರಾಮ ರಾವ್‌ ಸಿ.ಪಿ.ಎಂ. ನಿಂದ ಗೆದ್ದು ಶಾಸಕರಾದರೆ 1980 ಮತ್ತು 1982ರಲ್ಲಿ ಎ. ಸುಬ್ಬ ರಾವ್‌ ಶಾಸಕರಾದರು. ಆ ಬಳಿಕದ ಎರಡು ದಶಕ ಮುಸ್ಲಿಂ ಲೀಗ್‌ ಮತ್ತು ಚೆರ್ಕಳಂ ಅಬ್ದುಲ್ಲಾ ಅವರ ಜಮಾನಾ. 1987, 1991, 1996, 2001 ಹೀಗೆ ನಿರಂತರ 4 ಚುನಾವಣೆಗಳಲ್ಲಿ ಅವರು ಗೆದ್ದು ಶಾಸಕರಾದುದಲ್ಲದೆ ಕೇರಳ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದರು. 2006 ರಲ್ಲಿ ಈ ಕ್ಷೇತ್ರ ಮತ್ತೆ ಎಡರಂಗದ ತೆಕ್ಕೆಗೆ ಬಂತು. ಸಿ. ಹೆಚ್.‌ ಕುಂಞಂಬು ಗೆದ್ದು ಶಾಸಕರಾದರು. 2011ರಲ್ಲಿ ರಾಜಕೀಯ ಚಿತ್ರಣ ಮತ್ತೆ ಬದಲಾಯಿತು. ಮುಸ್ಲಿಂ ಲೀಗ್‌ನ ಪಿ.ಬಿ. ಅಬ್ದುಲ್‌ ರಝಾಕ್‌ ಶಾಸಕರಾದರು. 2016 ರಲ್ಲೂ ಅವರಿಗೆ ಗೆಲುವಾಯಿತು. ಅವರ ಅಕಾಲಿಕ ನಿಧನದಿಂದ 2019 ರಲ್ಲಿ ಉಪ ಚುನಾವಣೆ ನಡೆದಾಗ ಮುಸ್ಲಿಂ ಲೀಗ್‌ನ ಎಂ.ಸಿ. ಕಮರುದ್ದೀನ್‌ ಶಾಸಕರಾದರು. 2021ರ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ನ ಎ.ಕೆ.ಎಂ. ಅಶ್ರಫ್‌ ಗೆದ್ದು ಶಾಸಕರಾಗಿದ್ದಾರೆ.

ತ್ರಿಕೋನ ಸ್ಪರ್ಧೆ: ಪ್ರಸ್ತುತ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಯು.ಡಿ.ಎಫ್.‌ ನಿಂದ ಹಾಲಿ ಶಾಸಕ ಎ.ಕೆ.ಎಂ. ಅಶ್ರಫ್‌, ಎನ್.ಡಿ.ಎ.ದಿಂದ ಕೆ.ಸುರೇಂದ್ರನ್, ಎಲ್.ಡಿ.ಎಫ್.‌ ನಿಂದ ಕೆ.ಆರ್‌ ಜಯಾನಂದ ಸ್ಪರ್ಧಿಸಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.ಮತ ಗಳಿಕೆಯ ಇತಿಹಾಸ: 2021ರ ಚುನಾವಣೆಯಲ್ಲಿ ಇಲ್ಲಿ ಎ.ಕೆ.ಎಂ.ಅಶ್ರಫ್‌ 65858 ಮತ ಪಡೆದಿದ್ದು, ಕೆ. ಸುರೇಂದ್ರನ್‌ 65013 ಮತ ಪಡೆದಿದ್ದರು. 855 ಮತಗಳಿಂದ ಅಶ್ರಫ್‌ ಗೆಲುವು ಸಾಧಿಸಿದ್ದ ಇಲ್ಲಿ ಎಲ್.ಡಿ.ಎಫ್.‌ ಅಭ್ಯರ್ಥಿ ವಿ.ವಿ.ರಮೇಶನ್‌ 40631ಮತ ಪಡೆದಿದ್ದರು.2019 ರ ಉಪ ಚುನಾವಣೆಯಲ್ಲಿ ಯು.ಡಿ.ಎಫ್.‌ ಅಭ್ಯರ್ಥಿ ಎಂ.ಸಿ. ಕಮರುದ್ದೀನ್‌ ಎನ್‌.ಡಿ.ಎ. ಅಭ್ಯರ್ಥಿಯಾಗಿದ್ದ ಕುಂಟಾರು ರವೀಶ ತಂತ್ರಿಯವರನ್ನು 7923 ಮತಗಳಿಂದ ಸೋಲಿಸಿದ್ದರು. ಕಮರುದ್ದೀನ್‌ 65407, ರವೀಶ ತಂತ್ರಿ 57484 ಹಾಗೂ ಎಲ್.ಡಿ.ಎಫ್.‌ ನ ಎಂ.ಶಂಕರ ರೈ 38233 ಮತ ಪಡೆದಿದ್ದರು. 2016ರ ಚುನಾವಣೆಯಲ್ಲಿ ಯು.ಡಿ.ಎಫ್.‌ ಅಭ್ಯರ್ಥಿ ಅಬ್ದುಲ್‌ ರಝಾಕ್‌ 56870 ಮತ ಪಡೆದು 5678 1ಮತ ಪಡೆದಿದ್ದ ಕೆ.ಸುರೇಂದ್ರನ್‌ ರವರನ್ನು ಕೇವಲ 89 ಮತಗಳಿಂದ ಸೋಲಿಸಿದ್ದರು. ಆಗ ಎಡರಂಗದ ಅಭ್ಯರ್ಥಿಯಾಗಿದ್ದ ಸಿ.ಹೆಚ್.‌ ಕುಂಞಂಬು 42565 ಮತ ಪಡೆದಿದ್ದರು. ವಿಶೇಷವೆಂದರೆ ಕೆ. ಸುಂದರ ಎಂಬ ಪಕ್ಷೇತರ ಅಭ್ಯರ್ಥಿ 467 ಮತ ಪಡೆದಿದ್ದರು. 2011ರ ಚುನಾವಣೆಯಲ್ಲಿ ಪಿ.ಬಿ.ಅಬ್ದುಲ್‌ ರಝಾಕ್‌ 5128 ಮತಗಳ ಅಂತರದಲ್ಲಿ ಎನ್.ಡಿ.ಎ. ಅಭ್ಯರ್ಥಿ ಸುರೇಂದ್ರನ್‌ ರವರನ್ನು ಸೋಲಿಸಿದ್ದರು. ಅಬ್ದುಲ್‌ ರಝಾಕ್‌ 49817 ಮತ ಪಡೆದರೆ ಎನ್.ಡಿ.ಎ. ಅಭ್ಯರ್ಥಿ 43989 ಮತ ಪಡೆದಿದ್ದರು. ಎಡರಂಗದ ಅಭ್ಯರ್ಥಿ ಕುಂಞಂಬು 35067 ಮತ ಪಡೆದಿದ್ದರು. 2006ರ ಚುನಾವಣೆಯಲ್ಲಿ ಎಡರಂಗದ ಅಭ್ಯರ್ಥಿ ಸಿ.ಹೆಚ್‌. ಕುಂಞಂಬು 39242 ಮತ ಪಡೆದು ಗೆಲುವು ಸಾಧಿಸಿದರು. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ನಾರಾಯಣ ಭಟ್‌ 34413 ಮತ ಪಡೆದಿದ್ದರೆ ಯು.ಡಿ.ಎಫ್.‌ ಅಭ್ಯರ್ಥಿಯಾಗಿದ್ದ ಚೆರ್ಕಳಂ ಅಬ್ದುಲ್ಲ 34186 ಮತ ಪಡೆದಿದ್ದರು. ಸಿ.ಹೆಚ್.‌ ಕುಂಞಂಬು 4819 ಬಹುಮತ ಪಡೆದಿದ್ದರು. ತ್ರಿಕೋನ ಸ್ಪರ್ಧೆಯ ರಂಗು: ಪ್ರಮುಖ ಮೂರು ಒಕ್ಕೂಟಗಳ ಸ್ಪರ್ಧೆಯೊಂದಿಗೆ ಈ ಬಾರಿ ಮಂಜೇಶ್ವರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕೇರಳಂ ಬಿಜೆಪಿಯ ಮಾಜಿ ಅಧ್ಯಕ್ಷರೂ ಆಗಿರುವ ಕೆ.ಸುರೇಂದ್ರನ್‌ ನಾಲ್ಕನೆಯ ಬಾರಿ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ. ಕಳೆದರೆರಡು ಚುನಾವಣೆಗಳಲ್ಲಿ ಅಲ್ಪ ಮತಗಳ ಅಂತರದಿಂದ ಅವರು ಸ್ಥಾನ ಕಳೆದುಕೊಂಡಿದ್ದರು. ಈ ಚುನಾವಣೆಗಳ ಸಂದರ್ಭ ಸುರೇಂದ್ರನ್ ಕೋರ್ಟ್ ಮೆಟ್ಟಲೇರಿದ ಹಾಗೂ ಸುರೇಂದ್ರನ್ ವಿರುದ್ಧ ಕೋರ್ಟ್ ಮೆಟ್ಟಲೇರಿದ ವಿದ್ಯಮಾನಗಳೂ ನಡೆದಿತ್ತು. ಚುನಾವಣೆಯಿಂದ ಚುನಾವಣೆಗೆ ಮತ ಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ ಈ ಬಾರಿಯಾದರೂ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಆದರೆ ಸುರೇಂದ್ರನ್ ಗೆ ಚುನಾವಣೆ ಸಮೀಪಿಸುವಾಗ ಮಂಜೇಶ್ವರ ನೆನಪಾಗುತ್ತದೆ ಎಂಬ ಆರೋಪವೂ ಇದೆ. ಇತ್ತ ಹಾಲಿ ಶಾಸಕ ಎ.ಕೆ.ಎಂ.ಅಶ್ರಫ್‌ ಎರಡನೇ ಬಾರಿಗೆ ಗೆದ್ದು ಶಾಸಕರಾಗುವ ಪಣ ತೊಟ್ಟಿದ್ದಾರೆ. ಟೋಲ್ ಹೋರಾಟದ ಮೂಲಕ ಕೊನೆ ಕ್ಷಣಗಳಲ್ಲಿ ಹೆಚ್ಚು ಜನಪ್ರಿಯರಾದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಅಷ್ಟಾಗಿ ನಡೆದಿಲ್ಲ ಎಂಬ ಆರೋಪವೂ ಇದೆ. ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮತ್ತೋರ್ವ ಅಶ್ರಫ್‌ ರವರು ನಾಮಪತ್ರ ವಾಪಸ್‌ ಪಡೆಯುವುದರೊಂದಿಗೆ, ಮುಸ್ಲಿಂ ಮತವಿಭಜನೆಯ ಆತಂಕದಲ್ಲಿದ್ದ ಯು.ಡಿ.ಎಫ್ ಗೆ ಕೊಂಚ ನಿರಾಳವಾಗಿದೆ.ಕೆ.ಆರ್.ಜಯಾನಂದ ಇಲ್ಲಿ ಎಡರಂಗದ ಅಭ್ಯರ್ಥಿಯಾಗಿದ್ದು 2006 ರ ಫಲಿತಾಂಶ ಮರುಕಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಜಯಾನಂದ ಮತ್ತು ಶಾನವಾಸ್ ಪಾದೂರ್ ರವರ ನಡುವೆ ಟಿಕೆಟ್‌ ಗಾಗಿ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಪಾದೂರ್‌ ಅವರಿಗೆ ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಟಿಕೇಟ್‌ ನೀಡಲಾಗಿತ್ತು.