ಕಾರಂತರ ಹೆಸರಿನ ಪ್ರಶಸ್ತಿ ಜ್ಞಾನಪೀಠದಷ್ಟೇ ಶ್ರೇಷ್ಠ: ಡಾ.ವಿದ್ಯಾಭೂಷಣ

| Published : Oct 11 2023, 12:45 AM IST

ಕಾರಂತರ ಹೆಸರಿನ ಪ್ರಶಸ್ತಿ ಜ್ಞಾನಪೀಠದಷ್ಟೇ ಶ್ರೇಷ್ಠ: ಡಾ.ವಿದ್ಯಾಭೂಷಣ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟದ ಕಾರಂತ ಥೀಮ್ ಪಾರ್ಕ್‍ನಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಹುಟ್ಟೂರ ಪ್ರಶಸ್ತಿ ಪ್ರದಾನ.
ಕನ್ನಡಪ್ರಭ ವಾರ್ತೆ ಕುಂದಾಪುರ ಕಾರಂತರ ಜೀವನದ ತಳಹದಿ ಬಹು ವೈಶಿಷ್ಟ್ಯದಿಂದ ಕೂಡಿದೆ. ಅಂತಹ ಮಹಾನ್ ಸಾಧಕನ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವದೇ ದೊಡ್ಡ ಭಾಗ್ಯ. ಕಾರಂತರ ಹೆಸರಿನ ಪ್ರಶಸ್ತಿ ಜ್ಞಾನಪೀಠದಷ್ಟೆ ಶ್ರೇಷ್ಠತೆ ಹೊಂದಿದೆ ಎಂದು ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕೃತ ಡಾ.ವಿದ್ಯಾಭೂಷಣ್ ಹೇಳಿದ್ದಾರೆ. ಕೋಟದ ಕಾರಂತ ಥೀಮ್ ಪಾರ್ಕ್‍ನಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಇದು ಬಯಸದೇ ಬಂದ ಭಾಗ್ಯ. ಪ್ರಶಸ್ತಿ ಹುಡುಕಿಕೊಂಡು ಹೋಗಬಾರದು. ಅದು ನಮ್ಮನ್ನು ಅರಸಿಕೊಂಡು ಬರಬೇಕು. ನಾನು ಈವರೆಗೂ ಯಾವುದೇ ಪ್ರಶಸ್ತಿ, ಸನ್ಮಾನದ ಬಗ್ಗೆ ಯೋಚಿಸದವನಲ್ಲ. ಇಲ್ಲಿನ ಕಾರಂತ ಥೀಂ ಪಾರ್ಕ್‍ನ ಸೊಬಗು ಕಣ್ಣುಗಳಿಂದ ಅಳೆಯಲು ಸಾಧ್ಯವಿಲ್ಲ. ಅಂತಹ ವಿಶೇಷತೆ ಇಲ್ಲಿ ಇದೆ. ಇದೊಂದು ಮುಂದಿನ ಜನಾಂಗಕ್ಕೆ ಕಾರಂತರನ್ನು ಪರಿಚಯಿಸುವಂತೆ ಮಾಡಿದೆ. ಕಾರಂತರ ಬದುಕು ಇತರರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಅವರು ಹೇಳಿದರು. ಕಾರಂತ ಹುಟ್ಟೂರ ಪ್ರಶಸ್ತಿಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಥ್‌ ಸಂಗೀತ ಲೋಕದ ದಿಗ್ಗಜ ಡಾ.ವಿದ್ಯಾಭೂಷಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯಪಾಲರಿಗೆ ಕರಾವಳಿಯ ಗಂಡುಕಲೆ ಯಕ್ಷಕೀರಿಟ ತೊಡಿಸಿ ಗೌರವಿಸಲಾಯಿತು. ಗಾಂಧಿ ಪುರಸ್ಕಾರ ಪಡೆದ ಹಲವು ಗ್ರಾಮಪಂಚಾಯಿತಿಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಈ ಮೊದಲು ಕಾರಂತ ಪುತ್ಥಳಿಗೆ ರಾಜ್ಯಪಾಲರು ಮಾಲಾರ್ಪಣೆ ಮಾಡಿದರು. ಕಾರಂತ ಥೀಂ ಪಾರ್ಕ್ ನಲ್ಲಿ ನಡೆಯುವ ವಿವಿಧ ಕಲಾ ಚಟುವಟಿಕೆಗಳನ್ನು ವೀಕ್ಷಿಸಿದರು. ಉಡುಪಿ ಜಿಲ್ಲೆಯ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಕುಂದಾಪುರ ಎ.ಸಿ. ರಶ್ಮಿ, ತಹಸೀಲ್ದಾರ್ ಶೋಭಾಲಕ್ಷ್ಮೀ, ಬ್ರಹ್ಮಾವರ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್‌.ವಿ. ಇಬ್ರಾಹಿಂಪುರ್, ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಪ್ರತಿಷ್ಠಾನದ ಸದಸ್ಯ ಯು.ಎಸ್ ಶೆಣೈ ಇದ್ದರು. ಕಾರಂತ ಹುಟ್ಟೂರ ಪ್ರಶಸ್ತಿ ರೂವಾರಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸದಸ್ಯ ಸತೀಶ್ ವಡ್ಡರ್ಸೆ ನಿರೂಪಿಸಿದರು. ಕೋಟತಟ್ಟು ಗ್ರಾಮಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ವಂದಿಸಿದರು. ಕಾರಂತರು ಆಧುನಿಕ ಠಾಗೋರ್‌: ಗೆಹಲೋಥ್‌ ರಾಜ್ಯಪಾಲ ಥಾವರ್ ಚಂದ್ ಗೆಹಲೋಥ್‌ ಮಾತನಾಡಿ, ಕಾರಂತರ ಸಾಹಿತ್ಯ, ಕಲೆ, ಸಂಸ್ಕೃತಿಯ ಅನಾವರಣ ಕಾರಂತ ಥೀಂ ಪಾರ್ಕ್ ಮೂಲಕ ಯುವ ಸಮೂಹವನ್ನು ತಲುಪುತ್ತಿದೆ. ಕಾರಂತರು ಗಾಂಧೀಜಿ ಸಿದ್ಧಾಂತದ ಅನುಯಾಯಿಯಾಗಿದ್ದರು. ಪದ್ಮಭೂಷಣ ಪ್ರಶಸ್ತಿಯನ್ನು ಹಿಂದೆ ನೀಡಿದ ಮಹಾನ್ ವ್ಯಕ್ತಿ, ವಿಶ್ವಕೋಶ ಎಂದೇ ಖ್ಯಾತಿಯಾದ ಕಾರಂತರು ಆಧುನಿಕ ಠ್ಯಾಗೋರ್ ಎಂದೇ ಪ್ರಸಿದ್ಧರಾಗಿದ್ದರು ಎಂದು ಹೇಳಿದರು.