ಸಾರಾಂಶ
ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ಇವರಿಂದ ಶ್ರೀಮತಿ ರುಕ್ಮಿಣಿ ಶೆಡ್ತಿ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರು ಇವರ ಸಹಯೋಗದಲ್ಲಿ ಅರಿವಿನ ಬೆಳಕು ಉಪನ್ಯಾಸ ಮಾಲೆ-4 ಕಾರ್ಯಕ್ರಮ ನೆರವೇರಿತು.
ಕನ್ನಡಪ್ರಭ ವಾರ್ತೆ ಉಡುಪಿ
ಡಾ. ಶಿವರಾಮ ಕಾರಂತರು ವೈಚಾರಿಕತೆ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ತಮ್ಮ ಕೃತಿಗಳ ಮೂಲಕ ಮುಂದುವರಿಸಿಕೊಂಡು ಹೋಗುವ ಕಾರ್ಯವನ್ನು ಮಾಡಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಕಾರಂತರರ ಬರವಣಿಗೆ ಅಪೂರ್ವವಾಗಿದೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಹೇಳಿದ್ದಾರೆ. ಬುಧವಾರ ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ಇವರಿಂದ ಶ್ರೀಮತಿ ರುಕ್ಮಿಣಿ ಶೆಡ್ತಿ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರು ಇವರ ಸಹಯೋಗದಲ್ಲಿ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ-4 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ‘ಬಾಳ್ವೆಯೇ ಬೆಳಕು: ವೈಚಾರಿಕತೆಗೆ ರಾಜಮಾರ್ಗ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಸುಲೋಚನ ಪಚ್ಚಿನಡ್ಕ, ಜಗತ್ತಿನಲ್ಲಿರುವ ಅನೇಕ ಉತ್ತಮ ಸಂಗತಿಗಳನ್ನು ನಾವು ತಿಳಿದುಕೊಂಡು ನಮ್ಮ ಬದುಕಿಗೆ ಅವುಗಳನ್ನು ಆಳವಡಿಸಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲು ಡಾ. ಶಿವರಾಮ ಕಾರಂತರ ಬಾಳ್ವೇಯೇ ಬೆಳಕು ಕೃತಿ ಮುಖ್ಯವಾದುದು. ಕೃತಿಯಲ್ಲಿ ಮನುಷ್ಯನು ಹುಟ್ಟಿನಿಂದ ಸಾವಿನವರೆಗೆ ಎದುರಿಸುವ ಪ್ರತಿಯೊಂದು ಸನ್ನಿವೇಶದ ಕುರಿತು ಅರಿವಿನ ಬೆಳಕನ್ನು ಚೆಲ್ಲಿದ್ದಾರೆ ಎಂದರು. ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಪೀಳಿಗೆಯು ಪುಸ್ತಕಗಳ ಓದುವಿಕೆಯಿಂದ ದೂರ ಸರಿದಿದ್ದು, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಾಹಿತ್ಯದಲ್ಲಿ ತಮ್ಮ ಒಲವನ್ನು ಹೆಚ್ಚಿಸಿಕೊಂಡು ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ದಿನನಿತ್ಯ ಜೀವನದಲ್ಲಿ ಪುಸ್ತಕಗಳ ಓದುವಿಕೆಯಿಂದ ಬದುಕಿನ ವಿವಿಧ ಭಾಗಗಳು ಅನಾವರಣಗೊಳ್ಳಲು ಸಾಧ್ಯ ಎಂದರು.ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಡಾ. ಪ್ರಸಾದ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಡಾ. ಶಿವರಾಮ ಕಾರಂತ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಅನಂತ್ ನಿರೂಪಿಸಿ, ಕಾಲೇಜಿನ ಸಹಾಯಕ ಪ್ರಾಧ್ಯಪಕಿ ಶೈಲಜಾ ಎಸ್.ಎಚ್. ವಂದಿಸಿದರು.