ಕರಾಟೆ ಚಾಂಪಿಯನ್ ಭಾಗ್ಯಶ್ರೀಗೆ ಬೇಕಿದೆ ನೆರವಿನ ಹಸ್ತ
KannadaprabhaNewsNetwork | Published : Oct 03 2023, 06:00 PM IST
ಕರಾಟೆ ಚಾಂಪಿಯನ್ ಭಾಗ್ಯಶ್ರೀಗೆ ಬೇಕಿದೆ ನೆರವಿನ ಹಸ್ತ
ಸಾರಾಂಶ
ಗ್ರಾಮೀಣ ಪ್ರದೇಶದ ಬಡ ಕರಾಟೆ ಪ್ರತಿಭೆಯಾಗಿರುವ ಭಾಗ್ಯಶ್ರೀ ಗುರಪ್ಪ ಬರ್ಮಾ ಇವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಶಾಲೆಯಲ್ಲಿ ಶಿಕ್ಷಕರಿಂದ ತರಬೇತಿ ಪಡೆದುಕೊಂಡು ಇಂದು ವಿಶ್ವ ಮಟ್ಟದಲ್ಲಿ ಕರಾಟೆ ಚಾಂಪಿಯನ್‍ಶಿಪ್‌ಗಳಲ್ಲಿ ಭಾಗಿಯಾಗಿ ಭಾರತದ ಹೆಸರು ಬೆಳಗುತ್ತಿದ್ದಾರೆ. ಕರಾಟೆಯಲ್ಲಿ ಪಳಗಿರುವ ಈ ಗೃಹಿಣಿಗೆ ದೇಶ ವಿದೇಶ ಸುತ್ತಲು ಹಣದ ಕೊರತೆ. ಹೀಗಾಗಿ ಕರಾಟೆಯ ಈ ಪಟುವಿಗೆ ನೆರವಿನ ಹಸ್ತಗಳು ಇಂದು ಅಗತ್ಯವಾಗಿವೆ.
ಕರಾಟೆ ಚಾಂಪಿಯನ್ ಈ ಗೃಹಿಣಿಯ ಫರತಾಬಾದ್ ಟು ಜಕಾರ್ತಾ ಪಯಣವೇ ರೋಚಕ! ರಾಹುಲ್ ದೊಡ್ಮನಿ ಕನ್ನಡಪ್ರಭ ವಾರ್ತೆ ಚವಡಾಪುರ ಗ್ರಾಮೀಣ ಪ್ರದೇಶದ ಬಡ ಕರಾಟೆ ಪ್ರತಿಭೆಯಾಗಿರುವ ಭಾಗ್ಯಶ್ರೀ ಗುರಪ್ಪ ಬರ್ಮಾ ಇವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಶಾಲೆಯಲ್ಲಿ ಶಿಕ್ಷಕರಿಂದ ತರಬೇತಿ ಪಡೆದುಕೊಂಡು ಇಂದು ವಿಶ್ವ ಮಟ್ಟದಲ್ಲಿ ಕರಾಟೆ ಚಾಂಪಿಯನ್‍ಶಿಪ್‌ಗಳಲ್ಲಿ ಭಾಗಿಯಾಗಿ ಭಾರತದ ಹೆಸರು ಬೆಳಗುತ್ತಿದ್ದಾರೆ. ಕರಾಟೆಯಲ್ಲಿ ಪಳಗಿರುವ ಈ ಗೃಹಿಣಿಗೆ ದೇಶ ವಿದೇಶ ಸುತ್ತಲು ಹಣದ ಕೊರತೆ. ಹೀಗಾಗಿ ಕರಾಟೆಯ ಈ ಪಟುವಿಗೆ ನೆರವಿನ ಹಸ್ತಗಳು ಇಂದು ಅಗತ್ಯವಾಗಿವೆ. ಇದೇ ವರ್ಷ ಇಂಡೋನೇಷಿಯಾದ ಜಕಾರ್ತದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ 50 ಕೆ.ಜಿ ಸಿನಿಯರ್ ವಿಭಾಗದಲ್ಲಿ ಆಸ್ಟ್ರೇಲಿಯಾ ಮತ್ತು ಇಂಡೋನೇಷಿಯಾದ ಸ್ಪರ್ಧಾಳುಗಳ ಜೊತೆಗೆ ಸ್ಪರ್ಧಿಸಿ ತೃತಿಯ ಸ್ಥಾನ ಪಡೆದಿದ್ದಾರೆ. ಪಾಣೆಗಾಂವ ಗ್ರಾಮದ ಭಾಗ್ಯಶ್ರೀ ಕಳೆದ 9 ವರ್ಷಗಳ ಹಿಂದೆ ಫರಹತಾಬಾದನ ಗುರಪ್ಪ ಬರ್ಮಾ ಎಂಬುವವರೊಂದಿಗೆ ಮದುವೆಯಾದರು. 2008ರಿಂದ ಕರಾಟೆ ಕ್ರೀಡೆಯಲ್ಲಿ ಆಸಕ್ತಿ ವಹಿಸಿ ದಶರಥ ದುಮ್ಮನಸೂರ ಅವರಿಂದ ತರಬೇತಿ ಪಡೆದು ಸ್ಪರ್ಧಾತ್ಮಕ ಕರಾಟೆ ಚಾಂಪಿಯನ್‍ಶಿಪಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆರಂಭದಲ್ಲಿ ತಾಲೂಕು, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗಿಯಾಗಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಭಾಗ್ಯಶ್ರೀ ಅವರಿಗೆ ಇದುವರೆಗೂ 25 ಪ್ರಶಸ್ತಿಗಳು ಲಭಿಸಿವೆ. ರಾಜ್ಯ ಮಟ್ಟದಲ್ಲೂ ಅಮೋಘ ಯಶಸ್ಸು ಪಡೆದು ನಂತರ ರಾಷ್ಟ್ರ ಮಟ್ಟದ ಚಾಂಪಿಯನ್‍ಶಿಪನಲ್ಲಿ ಭಾಗಿಯಾಗಿ ಅಲ್ಲೂ ವಿಜೇತರಾಗಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗಿಯಾಗಿ ಫರಹತಾಬಾದ ಗ್ರಾಮದ ಹೆಸರನ್ನು ಜಗದಗಲ ಪರಿಚಯಿಸುವ ಮಹತ್ಕಾರ್ಯ ಮಾಡಿದ್ದಾರೆ. 2 ಮಕ್ಕಳ ತಾಯಿ, ಕಮ್ಮಿಯಾಗಿಲ್ಲ ಕರಾಟೆ ಪ್ರೀತಿ: ಭಾಗ್ಯಶ್ರೀ ಅವರಿಗೆ ಮದುವೆಯಾಗಿ 9 ವರ್ಷ, ಪತಿ ಗುರಪ್ಪ ಅವರು ಕೂಲಿ, 6 ವರ್ಷ ಮತ್ತು 3 ವರ್ಷದ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಪದವಿ ವರೆಗೂ ವ್ಯಾಸಂಗ ಮಾಡಿರುವ ಭಾಗ್ಯಶ್ರೀ ಅವರಿಗೆ ಮನೆ, ಮಕ್ಕಳು, ಗಂಡ ಸಂಸಾರ ಎಲ್ಲಾ ಇದ್ದರೂ ಕರಾಟೆ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ. ಕುಟುಂಬ ನಿರ್ವಹಣೆಯ ಜೊತೆಗೆ ಕರಾಟೆಗೆ ಸಮಯ ನೀಡುವ ಇವರು ಆಗಾಗ ನಡೆಯುವ ಚಾಂಪಿಯನಶಿಪಗಳಲ್ಲಿ ಭಾಗಿಯಾಗಿ ವಿಜೇತರಾಗುತ್ತಿದ್ದಾರೆ. ಇವರ ಕ್ರೀಡಾಸಾಧನೆಗೆ ಸಾಕಷ್ಟು ಜನ ಸಹಾಯ, ಸಹಕಾರ ನೀಡುತ್ತಿದ್ದಾರೆ, ತಮ್ಮ ಮುಂದಿನ ಗುರಿ ಇವರ ಕ್ರೀಡಾಸಾಧನೆಗೆ ಇವರ ಪತಿ ಗುರಪ್ಪ ಅವರು ಸಹಾಯ ಮತ್ತು ನೈತಿಕ ಬೆಂಬಲವಾಗಿ ನಿಂತಿದ್ದಾರಾದರೂ ಬೇರೆ ಬೇರೆ ದೇಶಗಳಿಗೆ ಹೋಗಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಆರ್ಥಿಕ ಸಹಾಯ ಬೇಕಾಗಿದೆ. ಬೇಕಿದೆ ನೆರವಿನ ಹಸ್ತ: ಭಾಗ್ಯಶ್ರೀ ಬರ್ಮಾ ಕರಾಟೆಯಲ್ಲಿ ಸಾಧನೆ ಮಾಡುವ ಆಸೆ ಹೊಂದಿರುವುದಲ್ಲದೆ ಕಲಬುರಗಿ ಜಿಲ್ಲೆ, ಅಫಜಲ್ಪುರದಂತ ಹಿಂದುಳಿದ ಪ್ರದೇಶಗಳಲ್ಲಿರುವ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಶ್ರಮ ಹಾಕುತ್ತಿದ್ದಾರೆ. ಇವರ ಸಾಧನೆಗೆ ಹೆಚ್ಚಿನ ಆರ್ಥಿಕ ಸಹಾಯದ ಅವಶ್ಯಕತೆ ಇದ್ದು ಸಹಾಯ ಮಾಡುವ ಮನಸ್ಸಿನವರು ಇವರ ಖಾತೆಗೆ ತಮ್ಮ ಕೈಲಾದ ಸಹಾಯ ಮಾಡಬಹುದಾಗಿದೆ. ಇವರ ಅಕೌಂಟ್ ನಂ: 41044548279., ಐಎಫ್‍ಎಸ್‍ಸಿ ನಂಬರ್: ಎಸ್‌ಬಿಐಎನ್0020234 ಕೋಟ್... ಕರಾಟೆಯಲ್ಲಿ ವಿಶ್ವ ಚಾಂಪಿಯನ್ ಆಗಬೇಕೆಂಬ ಕನಸಿದೆ. ಮನೆ, ಪತಿ, ಮಕ್ಕಳು, ಸಂಸಾರದ ಜೊತೆಗೇ ಕರಾಟೆಗಾಗಿ ಸಮಯ ಮೀಸಲಿಡುತ್ತಿದ್ದೇನೆ. ನನ್ನ ಪತಿ , ದಾನಿಗಳ ನೆರವು ಸದಾ ಇದೆ. ನನ್ನಂತೆ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಆಸೆ ಇಟ್ಟುಕೊಂಡ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ಪೂರ್ತಿಯಾಗಬೇಕೆನ್ನುವ ಆಸೆಯೂ ಇದೆ. - ಭಾಗ್ಯಶ್ರೀ ಗುರಪ್ಪ ಬರ್ಮಾ, ಅಂತಾರಾಷ್ಟ್ರೀಯ ಕರಾಟೆ ಕ್ರೀಡಾಪಟು --- ಭಾಗ್ಯಶ್ರೀ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ಭಾಗಿಯಾಗಿ ಫರಹತಾಬಾದ ಗ್ರಾಮದ ಹೆಸರನ್ನು ಪರಿಚಯಿಸಿದ್ದಾರೆ. ಅವರ ಕನಸಿಗೆ ಇಡೀ ಗ್ರಾಮಸ್ಥರೆಲ್ಲ ಹಾರೈಸುತ್ತಿದ್ದೇವೆ. ಅವರು ವಿಶ್ವ ಚಾಂಪಿಯನ್ ಆಗಿ ಫರಹತಾಬಾದ, ಕಲಬುರಗಿ ಹೆಸರು ಬೆಳಗಲಿ. - ರಾಜಶೇಖರ ನೆಲೋಗಿ, ಫರಹತಾಬಾದ ಗ್ರಾ.ಪಂ ಸದಸ್ಯ