ಸಾರಾಂಶ
ಬಾದಾಮಿ ತಾಲೂಕಿನ ಸುಕ್ಷೇತ್ರ ಮಹಾಕೂಟದಲ್ಲಿ 5 ದಿನಗಳ ಕಾಲ ನಡೆದ 7ನೇ ರಾಜ್ಯಮಟ್ಟದ ಕರಾಟೆ, ಮಾರ್ಷಲ್ಆರ್ಟ್ಸ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕರಾಟೆ ಕ್ರೀಡೆ ವಿದ್ಯಾರ್ಥಿಗಳು, ಯುವಕರಿಗೆ ಮನೋಬಲ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸುವುದರ ಜೊತೆಗೆ ದೇಹವನ್ನು ಸದೃಢವಾಗಿಸಲು ಬಹಳ ಉಪಯುಕ್ತವಾಗಿದೆ ಎಂದು ಶಿರೂರಿನ ವಿಜಯ ಮಹಾಂತ ತೀರ್ಥ ಹಾಗೂ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ಡಾ.ಬಸವಲಿಂಗ ಸ್ವಾಮೀಜಿ ಹೇಳಿದರು.ಬಾದಾಮಿ ತಾಲೂಕಿನ ಸುಕ್ಷೇತ್ರ ಮಹಾಕೂಟದಲ್ಲಿ 5 ದಿನಗಳ ಕಾಲ ನಡೆದ 7ನೇ ರಾಜ್ಯಮಟ್ಟದ ಕರಾಟೆ ಮಾರ್ಷಲ್-ಆರ್ಟ್ಸ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು,
ಜ್ಞಾನವೇ ನಮ್ಮ ಮನಸ್ಸಿನ ಆಹಾರ, ಎಲ್ಲರೂ ಹೆಚ್ಚೆಚ್ಚು ಜ್ಞಾನ ಬೆಳೆಸಿಕೊಳ್ಳಲು ಮುಂದಾಗಬೇಕೆಂದ ಅವರು, ನಮ್ಮ ದೇಹವೇ ದೇಗುಲ, ತನು ಶುಚಿ, ಮನು ಶುಚಿಯಿಂದ ಈ ದೇವ ಮಂದಿರ ಬಹಳ ಸ್ವಚ್ಛವಾಗಿಟ್ಟುಕೊಳ್ಳಬೇಕು. ಬೀಡಿ, ಸಿಗರೇಟ್, ತಂಬಾಕು, ಗುಟಕಾ, ಮಾವಾ, ಮದ್ಯಸೇವನೆ, ಔಷಧ, ಗುಳಗಿ ಹಾಕಿ ಮುನ್ಸಿಪಾಲ್ಟಿ ಕಚರಾ ಡಬ್ಬಾ ಮಾಡಬಾರದೆಂದು ಕಿವಿಮಾತು ಹೇಳಿದರು.ಸಾನ್ನಿಧ್ಯ ವಹಿಸಿ ಮಾತನಾಡಿದ ಶಿಗಿಕೇರಿ ಅಜ್ಜನವರಾದ ಶಂಕ್ರಯ್ಯ ಹಿರೇಮಠ, ಶಿಕ್ಷಣ ಮತ್ತು ಕ್ರೀಡೆ, ಕರಾಟೆಯ ಮೂಲ ಉದ್ದೇಶ ಸಂಸ್ಕಾರವಂತರಾಗಿ ತಂದೆ-ತಾಯಿ, ಗುರುಹಿರಿಯರಿಗೆ ಗೌರವ ಕೊಡಬೇಕು. ಈ ಎಲ್ಲ ಗುಣಗಳನ್ನು ರೂಢಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಸೆಶಿಂಕೈ ಶಿಟೋರ್ಯೂ ಕರಾಟೆ ಡು ಅಸೋಸಿಯೇಶನ್ ಆಫ್ ಕರ್ನಾಟಕ ಹಾಗೂ ರಾಠೋಡ ಮಾರ್ಷಲ್ ಆರ್ಟ್ಸ್ ಮತ್ತು ಸ್ಕಿಲ್ ಯೂನಿಯನ್ ವತಿಯಿಂದ ಹಮ್ಮಿಕೊಂಡಿದ್ದ 5 ದಿನಗಳ ರಾಜ್ಯ ಮಟ್ಟದ ಕರಾಟೆ ತರಬೇತಿ ಶಿಬಿರ ಮತ್ತು ಇಂಟರ್ ಸ್ಕೂಲ್ ಚಾಂಪಿಯನ್ ಶಿಪ್‌ನಲ್ಲಿ ಸುಮಾರು 150ಕ್ಕೂ ಅಧಿಕ ಕರಾಟೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಳಗಿನ ಜಾವ 6 ಗಂಟೆಯಿಂದ ಶುರುವಾದ ಕರಾಟೆ ತರಬೇತಿ ಸತತ 5 ದಿನಗಳ ಕಾಲ ನಡೆಯಿತು. ಶಿಬಿರದಲ್ಲಿ ಬ್ಲ್ಯಾಕ್ ಬೆಲ್ಟ್ ಪರೀಕ್ಷೆ, ಕಲರ್ ಬೆಲ್ಟ್ ಪರೀಕ್ಷೆ ಹಾಗೂ ಚಾಂಪಿಯನ್‌ಶಿಪ್ ಜರುಗಿದ್ದು, ವಿದ್ಯಾರ್ಥಿಗಳು ಫಿಸಿಕಲ್, ಟೆಕ್ನಿಕಲ್ ಹಾಗೂ ಓರಲ್ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮುಂದಿನ ಬೆಲ್ಟ್ ಗೆ ಅವಕಾಶ ಪಡೆದರು.ಬಂಜಾರಾ ಸಮಾಜದ ಮುಖಂಡ ನಿಂಗಪ್ಪ ಲಮಾಣಿ, ಬೈಲಹೊಂಗಲ ಉಪ ತಹಸೀಲ್ದಾರ್ ಬಸವರಾಜ ಸಿಂದಗಿಕರ, ಬಿಟಿಡಿಎ ಎಇಇ ವಿಶ್ವನಾಥ ನೀಲನ್ನವರ, ಎನ್‌ಸಿಸಿ ಸುಪರಿಟೆಂಡೆಂಟ್ ಅಶೋಕ ಹಳ್ಳಿ, ತೋಟಗಾರಿಕೆ ವಿಶ್ವವಿದ್ಯಾಲಯದ ಉಪನ್ಯಾಸಕ ಯಶವಂತ ಕುರಿ, ಕುಂದಾಪುರದ ನಿವೃತ್ತ ಮುಖ್ಯಶಿಕ್ಷಕಿ ಉಷಾ ದೀನಕರ, ನ್ಯಾಯಾಂಗ ಇಲಾಖೆಯ ಬಸವರಾಜ ಬಾದವಾಡಗಿ, ವೈದ್ಯರಾದ ಡಾ.ವೆಂಕಟೇಶ ಎಮ್ಮಿ, ಡಾ.ಎಸ್.ಜಿ ಇದ್ದಲಗಿಮಠ, ದಶರಥ ಚವ್ಹಾಣ ಸೇರದಂತೆ ಪಾಲಕರು, ಕರಾಟೆ ವಿದ್ಯಾರ್ಥಿಗಳು ಮತ್ತಿತ್ತರು ಉಪಸ್ಥಿತರಿದ್ದರು.15 ವಿದ್ಯಾರ್ಥಿಗಳಿಗೆ ಬ್ಲ್ಯಾಕ್ ಬೆಲ್ಟ್ ಪದವಿ:
ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ವಿವಿಧ ಜಿಲ್ಲೆಗಳ 15 ವಿದ್ಯಾರ್ಥಿಗಳು 10 ಕಿಮೀ ನಿರಂತರ ಓಟದ ಜೊತೆಗೆ 4 ದಿನಗಳ ಕಾಲ ನಿರಂತರ ಫಿಸಿಕಲ್, ಟೆಕ್ನಿಕಲ್ ಹಾಗೂ ಓರಲ್ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಬ್ಲ್ಯಾಕ್ ಬೆಲ್ಟ್ ಪದವಿ ತಮ್ಮದಾಗಿಸಿಕೊಂಡರು. ಸೃಜನ ಗಬ್ಬೂರ, ಯಶವಂತ ನಾಯಕ, ಸಾತ್ವಿಕ್ ಶೇಬನ್ನವರ, ಮಹಮ್ಮದ್ ಮಾಜ್ ಗಲಗಲಿ, ಸೃಷ್ಟಿ ಗಣಿ, ಗಣೇಶ ಕೊಡಿಯಾ, ಆಶಿತಾ ಮೆಸ್ತಾ, ಮದನ್ ಭಟ್, ಶೋಭಾ ಹಣ್ಣಿನ, ಸಾಕ್ಷಿ ಹಳ್ಳಿ, ಮುತ್ತಣ್ಣ ಯಾಳಗಿ, ಪ್ರಜ್ವಲ್ ಮುದರಡ್ಡಿ, ಪರಶುರಾಜ ಸಿಂಗ್, ಉಮಿಕಾ ಭಾತಿ, ಮತ್ತು ಈಶ್ವರಯ್ಯ ಗುರುಶಾಂತನವರ ಬ್ಲ್ಯಾಕ್ ಬೆಲ್ಟ್ ಪದವಿ ಪಡೆದುಕೊಂಡರು.