ಸಾರಾಂಶ
- ನಿಂಗಪ್ಪ ಎಂಬ ತರಬೇತುದಾರನಿಂದ ಕರಾಟೆ
- ಮಕ್ಕಳಿಗೆ ಕೊಟ್ಟರೆ ಫೀ, ಇಲ್ಲಂದರೆ ಉಚಿತ- ಬಾಲಕಿಯರಿಗೆ ಆತ್ಮರಕ್ಷಣೆ ತರಬೇತಿ ನೀಡುವ ಉದ್ದೇಶ
ಶಿವಾನಂದ ಗೊಂಬಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ದೆಹಲಿ ನಿರ್ಭಯಾ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಆದರೆ, ಅದರಂತೆ ಬೇರಾವ ಹೆಣ್ಮಕ್ಕಳಿಗೆ ಆಗಬಾರದೆಂಬ ಉದ್ದೇಶದಿಂದ ಇಲ್ಲಿನ ಕರಾಟೆ ಶಿಕ್ಷಕರೊಬ್ಬರು ಸರ್ಕಾರಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಕಳೆದ ಎರಡು ವರ್ಷದಿಂದ ಕರಾಟೆ ತರಬೇತಿ ನೀಡುತ್ತಿದ್ದಾರೆ.ನಿಂಗಪ್ಪ ಇಂಡಿ ಅವರು ಕಳೆದ ಎರಡ್ಮೂರು ವರ್ಷಗಳಿಂದ ಉಣಕಲ್, ಅಮರಗೋಳ, ಗಾಮನಗಟ್ಟಿ, ಭೈರಿದೇವರಕೊಪ್ಪ ಹೀಗೆ ನಾಲ್ಕು ಸರ್ಕಾರಿ ಶಾಲೆಗಳ 120-140ರಷ್ಟು ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಕರಾಟೆಯಲ್ಲಿ ವೈಟ್ ಬೆಲ್ಟ್‌ನಿಂದ ಹಿಡಿದು ಬ್ಲ್ಯಾಕ್ ಬೆಲ್ಟ್‌ವರೆಗೂ 10 ಬೆಲ್ಟ್‌ಗಳ ತರಬೇತಿ ಬರುತ್ತದೆಯಂತೆ. ಇವರಲ್ಲಿ ಈ ವರೆಗೆ 8 ಬೆಲ್ಟ್‌ವರೆಗೂ ತರಬೇತಿ ಪಡೆದ ಮಕ್ಕಳಿದ್ದಾರೆ.
ಏಕೀ ತರಬೇತಿ:ಹಾಗೆ ನೋಡಿದರೆ ಮೊದಲಿನಿಂದಲೂ ಇವರು ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಿದ್ದರಂತೆ. ಆದರೆ ಅಷ್ಟೊಂದು ಗಂಭೀರವಾಗಿ ಆಗಿರಲಿಲ್ಲ. ಯಾವಾಗ ದೆಹಲಿಯಲ್ಲಿ ನಿರ್ಭಯ ಪ್ರಕರಣ ನಡೆಯಿತು. ಆಗ ಮಕ್ಕಳಿಗೆ ಅದರಲ್ಲೂ ಹೆಣ್ಮಕ್ಕಳಿಗೆ ಆತ್ಮರಕ್ಷಣೆಯ ತರಬೇತಿ ನೀಡಬೇಕು. ಖಾಸಗಿ ಶಾಲೆಗಳ ಮಕ್ಕಳಿಗೆ, ಶ್ರೀಮಂತ ಮಕ್ಕಳಿಗೆ ಎಲ್ಲೋ ತರಬೇತಿ ಸಿಗುತ್ತದೆ. ಆದರೆ ಸರ್ಕಾರಿ ಶಾಲೆಗಳಿಗೆ ಬಡವರ ಮಕ್ಕಳೇ ಬರುತ್ತಾರೆ. ಅವರಿಗೆ ಕಲಿಸೋಣ. ಅವರು ಕೊಟ್ಟಷ್ಟು ಫೀಸ್ ಪಡೆಯೋಣ. ಕೊಡದಿದ್ದರೆ ಹೋಗಲಿ, ಉಚಿತವಾಗಿಯೇ ಕಲಿಸೋಣ ಎಂದು ನಿರ್ಧರಿಸಿದ್ದಾರೆ.
ಅದರಂತೆ ಮೊದಲಿಗೆ ಉಣಕಲ್‌ನಲ್ಲಿರುವ ರಾಚಯ್ಯ ಚನ್ನಯ್ಯ ಚಿಕ್ಕಮಠ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕರಾಟೆ ತರಬೇತಿ ನೀಡಲು ಮುಂದಾಗಿದ್ದಾರೆ. ಅದಕ್ಕೆ ಶಾಲೆಯ ಶಿಕ್ಷಕರು, ಕೆಲ ಪಾಲಕರು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಶಾಲೆಯಲ್ಲೇ ವಾರಕ್ಕೆ ಮೂರು ದಿನ ಬೆಳಗ್ಗೆ ತರಬೇತಿ ನೀಡುತ್ತಿದ್ದಾರೆ.ಬಳಿಕ ಭೈರಿದೇವರಕೊಪ್ಪ, ಗಾಮನಗಟ್ಟಿ ಹಾಗೂ ಅಮರಗೋಳ ಶಾಲೆಗಳಲ್ಲೂ ಸಹಕಾರ ದೊರೆತಿದೆ. ಅಲ್ಲೂ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಕೆಲ ಶಾಲೆಗಳಲ್ಲಿ ಶಾಲೆ ಆರಂಭಕ್ಕೂ ಮುನ್ನವೇ ತರಬೇತಿ ನೀಡಿದರೆ, ಕೆಲ ಶಾಲೆಗಳಲ್ಲಿ ಶಾಲಾ ಅವಧಿ ಮುಗಿದ ಮೇಲೆ ಕಲಿಸುತ್ತಿದ್ದಾರೆ.
ಯುನಿಫಾರಂ- ಫೀಸ್:ಯಾರ್‍ಯಾರಿಗೆ ಆಸಕ್ತಿ ಇದೆಯೋ ಆ ಮಕ್ಕಳಿಗೆ ಕರಾಟೆ ತರಬೇತಿ ನೀಡುತ್ತಾರೆ. ಕೆಲ ಮಕ್ಕಳಿಗೆ ಆಸಕ್ತಿ ಇರುತ್ತದೆ. ಆದರೆ ಫೀಸ್ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಕರಾಟೆ ಸಮವಸ್ತ್ರ ಪಡೆದುಕೊಳ್ಳುವಷ್ಟು ಶಕ್ತರಿರುವುದಿಲ್ಲ. ಹೀಗಾಗಿ, ಯಾವುದೇ ಮಕ್ಕಳಿಗೆ ಇಷ್ಟೇ ಫೀಸ್ ಎಂದು ನಿಗದಿ ಪಡಿಸಿಲ್ಲ. ಕೆಲವರು 100 ಕೊಟ್ಟರೆ ಕೆಲವರು 200 ಫೀಸ್ ಕೊಡ್ತಾರೆ. ಕೆಲವರು ಏನೊಂದು ಫೀಸ್ ಕೊಡುವುದೇ ಇಲ್ಲ. ಹೀಗಾಗಿ ಯಾರು ಎಷ್ಟು ಕೊಡುತ್ತಾರೋ ಅಷ್ಟೇ ದುಡ್ಡು ಪಡೆದು ಕರಾಟೆ ಕಲಿಸುತ್ತಾರೆ. ಇನ್ನು ಸಮವಸ್ತ್ರವನ್ನು ಇವರೇ ತಮ್ಮ ಸ್ವಂತ ದುಡ್ಡು ಹಾಕಿ ಕೊಡಿಸುತ್ತಾರಂತೆ. ಇತ್ತೀಚಿಗೆ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಉಣಕಲ್ ಶಾಸಕರ ಮಾದರಿಯ 35 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಪಡೆದಿದ್ದಾರೆ.ನಮ್ಮ ಶಾಲೆಯಲ್ಲಿ ಕರಾಟೆ ಕಲಿಸುವುದಾಗಿ ನಿಂಗಪ್ಪ ಆಗಮಿಸಿದ್ದರು. ನಾವು ಅನುಮತಿ ನೀಡಿದ್ದೇವು. ಇದೀಗ ಮಕ್ಕಳು ಬಹಳ ಉತ್ಸಾಹದಿಂದ ಕಲಿಯುತ್ತಿದ್ದಾರೆ. ತರಬೇತಿಗೆ ಫೀಸ್ ಕೂಡ ಇಂತಿಷ್ಟೇ ಎಂದು ನಿಗದಿಪಡಿಸಿಲ್ಲ ಎನ್ನುತ್ತಾರೆ ಉಣಕಲ್ ಸರ್ಕಾರಿ ಶಾಲೆ ಸಹಶಿಕ್ಷಕ ಐ.ಎಸ್. ಬಮ್ಮನಗೌಡರ.
ದೆಹಲಿಯಲ್ಲಿ ನಿರ್ಭಯ ಪ್ರಕರಣ ಆದ ಮೇಲೆ ಮಕ್ಕಳಿಗೆ ಅದರಲ್ಲೂ ಹೆಣ್ಮಕ್ಕಳಿಗೆ ಆತ್ಮರಕ್ಷಣೆ ಕಲಿಸಬೇಕು ಎಂಬ ಆಸೆಯಾಗಿತ್ತು. ಅದರಂತೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ನನ್ನ ಕೈಲಾದಷ್ಟು ತರಬೇತಿ ನೀಡುತ್ತಿದ್ದೇನೆ. ಮಕ್ಕಳು ಹುಮ್ಮಸ್ಸಿನಿಂದ ತರಬೇತಿ ಪಡೆಯುತ್ತಿದ್ದಾರೆ ಎನ್ನುತ್ತಾರೆ ಕರಾಟೆ ತರಬೇತುದಾರ ನಿಂಗಪ್ಪ ಇಂಡಿ.