ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸಲು ಕ್ರಮ ವಹಿಸಿ

| Published : Jan 19 2024, 01:45 AM IST

ಸಾರಾಂಶ

ಸಿಂಧನೂರಿನ ಕರವೇ (ಟಿ.ನಾರಾಯಣಗೌಡ ಬಣ) ತಾಲೂಕು ಘಟಕದಿಂದ ಪ್ರತಿಭಟಿಸಿ ಪೌರಾಯುಕ್ತ ಮಂಜುನಾಥ ಗುಂಡೂರುಗೆ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಸಿಂಧನೂರು ನಗರದಲ್ಲಿರುವ ವಾಣಿಜ್ಯ ಮಳಿಗೆ, ಶಾಲಾ-ಕಾಲೇಜು, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರುವಂತೆ ಕ್ರಮವಹಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ನಾರಾಯಣಗೌಡ ಬಣ) ತಾಲೂಕು ಘಟಕದಿಂದ ಸ್ಥಳೀಯ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು.

ವೇದಿಕೆಯ ಹೋರಾಟದಿಂದ ರಾಜ್ಯ ಸರ್ಕಾರ ಎಲ್ಲ ವ್ಯವಹಾರಿಕ ಅಂಗಡಿ ಮುಂಗಟ್ಟುಗಳ ನಾಮಫಲಕ ಶೇ.60ರಷ್ಟು ಕನ್ನಡದಲ್ಲಿ ಇರಬೇಕು ಎಂದು ಆದೇಶ ಹೊರಡಿಸಿದೆ. ಇದಕ್ಕೆ ಸಿಂಧನೂರು ನಗರಸಭೆ ಸಕರಾತ್ಮಕ ಸ್ಪಂದನೆ ನೀಡದೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಕೂಡಲೇ ಎಚ್ಚೆತ್ತುಕೊಂಡು ಅಂಗಡಿ ಮುಂಗಟ್ಟುಗಳು, ವಿದ್ಯಾಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಬೇಕು. ಆಟೋದಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಕೈಗೊಳ್ಳಬೇಕು. ಒಂದು ವಾರದೊಳಗೆ ನಾಮಫಲಕ ಕನ್ನಡದಲ್ಲಿ ಇರುವಂತೆ ಹಾಕಬೇಕು ಎಂದು ಅಧ್ಯಕ್ಷ ಎಚ್.ಗಂಗಣ್ಣ ಡಿಶ್ ಒತ್ತಾಯಿಸಿದರು.

ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾ ಉಪಾಧ್ಯಕ್ಷ ಎಸ್.ದೇವೇಂದ್ರಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಭೋವಿ, ಸದಸ್ಯರಾದ ರಾಮಕೃಷ್ಣ ಭಜಂತ್ರಿ, ಶರಣಬಸವ ಮಲ್ಲಾಪುರ, ಕುನ್ನಟಗಿ ಶರಣಪ್ಪ, ರಾಜಾಸಾಬ ಗಾಂಧಿನಗರ, ಮಹಿಬೂಬ್ ಕುನ್ನಟಗಿ, ಬಸವರಾಜ ಟೇಲರ್, ಅಶೋಕ, ಶಂಕರ್ ಸಿಂಗ್, ವೀರೇಶ, ರವಿಕುಮಾರ ಇದ್ದರು.