ಕರವೇಯಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

| Published : Nov 02 2023, 01:01 AM IST

ಸಾರಾಂಶ

ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಬೇಲೂರು ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೇಲೂರು ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಅದ್ಧೂರಿ ೫೦ನೇ ವರ್ಷದ ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಪಟ್ಟಣದ ಕೆಂಪೇಗೌಡ ವೃತ್ತವನ್ನು ಕನ್ನಡ ನಾಡಧ್ವಜಗಳಿಂದ‌ ಸುಂದರವಾಗಿ ಅಲಂಕರಿಸಲಾಗಿತ್ತು. ತಾಯಿ ಭುವನೇಶ್ವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಕರವೇ ಅಧ್ಯಕ್ಷ ಭೋಜೇಗೌಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ನಾಗರಾಜ್ ಧ್ವಜಾರೋಹಣ ನಡೆಸಿದರು. ನಂತರ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಎ ನಾಗರಾಜ್, ಸುವರ್ಣ ಸಂಭ್ರಮ ಮಹೋತ್ಸವ ಆಚರಿಸುತ್ತಿರುವ ನಾವು ಕೇವಲ ಒಂದು ದಿನಕ್ಕೆ ಕನ್ನಡ ಹಬ್ಬವನ್ನು ಆಚರಿಸಿದರೆ ಸಾಲದು, ಇದು ಪ್ರತಿನಿತ್ಯ ನಿತ್ಯೋತ್ಸವ ರೀತಿ ಆಚರಿಸುವಂತಾಗಬೇಕು. ಕನ್ನಡದ ನಾಡು, ನುಡಿ ಸೇವೆಗೆ ಕೇವಲ ಸಂಘಟನೆಗಳು ಮಾತ್ರ ಹೋರಾಡಿದರೆ ಸಾಲದು. ೭ ಕೋಟಿ ಕನ್ನಡಿಗರೂ ಸಹ ನೆಲ, ಜಲ, ಭಾಷೆಗೆ ಹೋರಾಡಬೇಕು. ನಮ್ಮ ಮಾತೃಭಾಷೆಯನ್ನು ಕನ್ನಡವಾಗಿ ಪ್ರತಿಯೊಬ್ಬರೂ ಸಹ ಬಳಸಬೇಕು ಎಂದರು. ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ವಿ ಎಸ್ ಭೋಜೇಗೌಡ ಮಾತನಾಡಿ, ಪ್ರತೀವರ್ಷವೂ ವಿಶೇಷ ರೀತಿಯಲ್ಲಿ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ನಾಡಿನಲ್ಲಿ ಬರಗಾಲವಿದ್ದರೂ ಸಹ ನಮ್ಮ ನಾಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಮ್ಮ ನಾಡಿನಲ್ಲಿ ಮೊದಲು ನಾವು ಕನ್ನಡ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡುವುದು ನಮ್ಮ ಮೊದಲ ಕರ್ತವ್ಯವಾಗಿದೆ. ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಅವರ ಭಾಷೆಗೆ ಪ್ರಾಶಸ್ತ್ಯ ಕೊಡುತ್ತಾರೆ. ಆದರೆ ನಮ್ಮಲ್ಲಿರುವಂತವರು ವ್ಯಾಪಾರ ವಹಿವಾಟು ಮಾಡುವ ಭರದಲ್ಲಿ ಅವರು ಬೇರೆ ಭಾಷೆಗೆ ಪ್ರಾಮುಖ್ಯತೆ ಕೊಡುತ್ತಿರುವುದು ವಿಪರ್ಯಾಸ. ಇನ್ನು ಸರ್ಕಾರಿ ಕಚೇರಿಯಲ್ಲಿ ಕನ್ನಡ ಭಾಷೆ ಮಾಯವಾಗಿದೆ. ಅದರಲ್ಲಿ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಮಾಯವಾಗಿದೆ. ಈ ಮೂಲಕ ಎಚ್ಚರಿಕೆ ನೀಡುತ್ತಿದ್ದು ಯಾವುದೇ ಸಾರ್ವಜನಿಕ ಸೇವೆ ಸಲ್ಲಿಸುವ ಸರ್ಕಾರಿ ಕಚೇರಿಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಕನ್ನಡ ನಾಡ ಬಾವುಟದ ಬಣ್ಣದ ಬಲೂನುಗಳಿಂದ ಕಮಾನು ಮಾಡಿ ಸುಂದರವಾಗಿ ಅಲಂಕರಿಸಿದ್ದು ನೋಡುಗರ ಮನತಣಿಸಿತು. ಈ ಸಂದರ್ಭದಲ್ಲಿ ಕರವೇ ಉಪಾಧ್ಯಕ್ಷ ಅರುಣ್ ಸಿಂಗ್ ರಜಪೂತ್, ಕಾರ್ತಿಕ್, ಯುವಘಟಕದ ಅಧ್ಯಕ್ಷ ಸತೀಶ್, ಕರವೇ ಮೋಹಿತ್, ರಾಕೇಶ್, ಸತೀಶ್, ಚಂದ್ರು, ನವೀನ್, ಹುಸೈನ್ ಹಾಗೂ ಕಸಾಪ ಕಾರ್ಯದರ್ಶಿ ಮಹೇಶ್, ವಕೀಲತ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ವಿತರಕರ ಸಂಘದ ಅಧ್ಯಕ್ಷ ಆರಾಧ್ಯ ಹಾಜರಿದ್ದರು.