ಸಾರಾಂಶ
ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಧರಣಿ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯದಲ್ಲಿ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯಿದೆ ಅನ್ವಯ ರಾಜ್ಯ ಸರ್ಕಾರವು ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಧರಣಿ ನಡೆಸಲಾಯಿತು.ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಬೆಳಗ್ಗೆ ೧೨ ರಿಂದ ಸಂಜೆ ೪ ರವರೆಗೆ ಧರಣಿ ನಡೆಸಿ, ಕನ್ನಡ ನೆಲದಲ್ಲಿ ಎಲ್ಲಾ ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಮತ್ತು ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಘೋಷಣೆಗಳನ್ನು ಕೂಗುತ್ತಾ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ನವೀನ್‌ಕುಮಾರ್ ನಮ್ಮ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಸೂಚನೆ ಮೇರೆಗೆ ಇಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಧರಣಿ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯಿದೆ ಅನ್ವಯ ರಾಜ್ಯ ಸರ್ಕಾರವು ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು. ಕೇಂದ್ರ ಮತ್ತು ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ. ೧೦೦ ರಷ್ಟು ಹಾಗೂ ಇತರೆ ಹುದ್ದೆಗಳಲ್ಲಿ ಶೇ. ೮೦ ರಷ್ಟನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.ಹದಿನೈದು ವರ್ಷಗಳ ಕಾಲ ರಾಜ್ಯದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣನೆ ಮಾಡಲು ಕಡ್ಡಾಯವಾಗಿ ಕನ್ನಡ ಪರೀಕ್ಷೆ ನಡೆಸಿ ಉತ್ತೀರ್ಣರಾದವರನ್ನು ಕನ್ನಡಿಗರು ಎಂದು ಗಣನೆಗೆ ತೆಗೆದುಕೊಳ್ಳಬೇಕು. ಈ ನಿಯಮಾವಳಿಗಳನ್ನು ಪಾಲಿಸದ ಸಂಸ್ಥೆಗಳ ಮಾನ್ಯತೆಯನ್ನು ರದ್ದುಗೊಳಿಸಿ ಅವುಗಳಿಗೆ ದಂಡ ವಿಧಿಸುವ ಮೂಲಕ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು. ಸರ್ಕಾರ ಉದ್ಯೋಗಕ್ಕೆ ಸಂಬಂಧಿಸಿದ ಕಾಯ್ದೆಯನ್ನು ಜಾರಿ ಮಾಡಿದರೆ ತಮ್ಮನ್ನು ಕನ್ನಡದ ಮುಂದಿನ ಪೀಳಿಗೆ ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತದೆ ಎಂದರು,
ಧರಣಿಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಮಂಜೇಶ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಸುರೇಶ್‌ನಾಯ್ಕ, ಪದಾಧಿಕಾರಿಗಳಾದ ಶ್ರೀನಿವಾಸ್, ಅನಂತ್‌ನಾಗ್, ಸಂಜಯ್, ಪ್ರಮೋದ್, ಕೃಷ್ಣಮೂರ್ತಿ, ಮಹದೇವಸ್ವಾಮಿ ನವೀನ್ ಇತರರು ಇದ್ದರು.