ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ತಾಲೂಕಿನ ಹಳ್ಳದ ಗೆಣ್ಣೂರ ಗ್ರಾಮದಿಂದ 3ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ-218ಕ್ಕೆ ಒಳಪಡುವ ಸ.ನಂಬರ್ 103/ರ 38 ಗುಂಟೆ ಸರ್ಕಾರಿ ಜಾಗದಲ್ಲಿ ಮುಸ್ಲಿಂ ಸಮುದಾಯದವರು ಖಬರಸ್ಥಾನ ಹಾಗೂ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಿಕೊಳ್ಳುವುದಕ್ಕಾಗಿ ತಹಸೀಲ್ದಾರವರಿಗೆ ಮನವಿ ಸಲ್ಲಿಸಿದ್ದಾರೆ. ಈ ಸರ್ಕಾರಿ ಜಾಗದಲ್ಲಿ ಖಬರಸ್ಥಾನ ನಿರ್ಮಾಣಕ್ಕೆ ನಮ್ಮ ತಕರಾರಿದೆ ಎಂದು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ದ ಅಧ್ಯಕ್ಷ ರವಿ ಗೊಳಸಂಗಿ ತಿಳಿಸಿದರು.ಪಟ್ಟಣದ ಯುಕೆಪಿ ಬಳಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 218 ಕ್ಕೆ ಒಳಪಡುವ ಹಳ್ಳದ ಗೆಣ್ಣೂರ ಗ್ರಾಮದ ಸರ್ವೆ ನಂಬರ 103/ರ 38 ಗುಂಟೆ ಸರ್ಕಾರಿ ಜಾಗವು ಲೋಕೋಪಯೋಗಿ ಇಲಾಖೆಗೆ ಸೇರಿದೆ. ಹಳ್ಳದ ಗೆಣ್ಣೂರ ಗ್ರಾಮದ ಮುಸ್ಲಿಂ ಸಮಾಜದವರು ಖಬರಸ್ಥಾನ ಹಾಗೂ ಪ್ರಾರ್ಥನಾ ಮಂದಿರ ನಿರ್ಮಿಸುವುದಕ್ಕೆ ಹೊರಟಿದ್ದಾರೆ. ಈ ಜಾಗದ ಸುತ್ತಮುತ್ತ ಹಲವಾರು ರೈತರ ಮನೆಗಳಿವೆ, ಹಿಂದೂ ಮುಸ್ಲಿಂ ಸಮಾಜದ ಶಾಲಾ ಮಕ್ಕಳ ಹಾಗೂ ಹಳ್ಳದ ಗೆಣ್ಣೂರ ಗ್ರಾಮದ ಸಾರ್ವಜನಿಕರ ಅನಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಈಗಾಗಲೇ ಈ ಜಾಗ ಕೇಂದ್ರ ಸರ್ಕಾರದಿಂದ ಹುಬ್ಬಳ್ಳಿ -ವಿಜಯಪುರ ರಾಷ್ಟ್ರೀಯ ಚತುಷ್ಪದ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆಗೊಂಡಿದೆ. ಈ ಸರ್ಕಾರಿ ಜಾಗ ನೀಡುವುದರಿಂದ ಚತುಷ್ಪದ ಹೆದ್ದಾರಿ ನಿರ್ಮಾಣಕ್ಕೆ ತೊಂದರೆಯಾಗುತ್ತದೆ. ಮುಂದೆ ಕೋಮು ಗಲಭೆಗೆ ಕೂಡಾ ಕಾರಣವಾಗಬಹುದು. ಹೀಗಾಗಿ ಅಧಿಕಾರಿಗಳು ಇಲ್ಲಿ ಖಬರಾಸ್ಥಾನ ನಿರ್ಮಿಸುವುದಕ್ಕೆ ಜಾಗ ನೀಡಬಾರದು ಎಂದು ಆಗ್ರಹಿಸಿದರು.
ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳಿಗೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದಿಂದ ಮನವಿ ಸಲ್ಲಿಸಲಾಗಿದೆ. ಆದರೆ ಇದವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಂದು ವೇಳೆ ಅವರಿಗೆ ಜಾಗವನ್ನು ನೀಡುವುದಾದರೆ ಹಳ್ಳದ ಗೆಣ್ಣೂರು ಗ್ರಾಮದ ಸುತ್ತಮುತ್ತ ನಾಲ್ಕೈದು ಸ್ಥಳಗಳಲ್ಲಿ ಸರ್ಕಾರಿ ಜಮೀನಿದೆ. ಅದನ್ನು ಅವರಿಗೆ ನೀಡಬಹುದು ಅಥವಾ ವಕ್ಫ್ ಬೋರ್ಡ್ ನಿಂದ ತೆರವಾದ ಮುಸ್ಲಿಂ ಸಮುದಾಯಕ್ಕೆ ಸೇರಿದ ರೈತರ ಜಮೀನುಗಳಿಗೆ ಆ ಜಾಗವನ್ನು ನೀಡಬಹುದು. ಇದರಿಂದ ನಮ್ಮದೇನು ತಕರಾರಿಲ್ಲ ಎಂದರು. ಕೊಲ್ಹಾರ ತಾಲೂಕಿನಲ್ಲಿರುವ ಸರ್ಕಾರಿ ಜಾಗವನ್ನು ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಜಾಗ ನೀಡಬೇಕು ವಿನಃ ಬೇರೆ ಯಾವುದೇ ಕಾರಣಕ್ಕೂ ಯಾರಿಗೂ ನೀಡಬಾರದು ಎಂದು ಒತ್ತಾಯಿಸಿದರು.ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಶ್ರೀಧರ ಬಳೆಗಾರ, ಪುಂಡಲೀಕ ಬಾಟಿ,ರಾಜು ಕಟಬರ ಉಪಸ್ಥಿತರಿದ್ದರು.