ಸಾರಾಂಶ
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿಶ್ವವಿದ್ಯಾಲಯವನ್ನು ಮಂಗಳೂರು ವಿಶ್ವವಿದ್ಯಾಲಯದೊಂದಿಗೆ ವಿಲೀನ ಮಾಡುವುದಕ್ಕೆ ಕರವೇ ವಿರೋಧಿಸಿದೆ.
ಮಡಿಕೇರಿ: ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ವಿಶ್ವವಿದ್ಯಾಲಯವನ್ನು ಮಂಗಳೂರು ವಿಶ್ವವಿದ್ಯಾನಿಲಯದೊಂದಿಗೆ ವಿಲೀನ ಮಾಡುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕಿ ದೀಪಾ ಪೂಜಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಪತ್ರಿಕೆ ಹೇಳಿಕೆ ನೀಡಿರುವ ಅವರು, ಕೊಡಗು ಭಾಗದ ಸ್ನಾತಕೋತ್ತರ ಕೇಂದ್ರ ಸೇರಿದಂತೆ ಇಲ್ಲಿನ ಕಾಲೇಜಿನ ನಿರ್ವಹಣೆಗಾಗಿ ಎರಡು ಕೋಟಿ ಹಣವನ್ನು ಮೀಸಲಿಡುವುದರಿಂದ, ಮಂಗಳೂರು ವಿಶ್ವವಿದ್ಯಾನಿಲಯದ ಈಗಿನ ಆರ್ಥಿಕ ಪರಿಸ್ಥಿತಿಯ ಸಂದರ್ಭದಲ್ಲಿ ಯಾವ ಬಗೆಯ ಪ್ರೋತ್ಸಾಹ ದೊರೆಯಬಹುದು ಆಲೋಚನೆ ಮಾಡಿ. ಅದೇ ಸರ್ಕಾರದಿಂದ ಆ ಎರಡು ಕೋಟಿ ಹಣವನ್ನು ಕೊಡಗು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ನೀಡಿದರೆ ಈಗಿನ ಬೆಳವಣಿಗೆಯ ಜೊತೆಗೆ ಉತ್ತಮ ನಿರ್ವಹಣೆ ಹೊಂದಲು ಮತ್ತಷ್ಟು ಪೂರಕವಾಗಿರುತ್ತದೆ ಎಂದು ಹೇಳಿದ್ದಾರೆ.ಪ್ರತಿಯೊಬ್ಬರು ಶಿಕ್ಷಣ ಪಡೆಯುವುದು ಸಂವಿಧಾನದ ಹಕ್ಕುಗಳಲ್ಲೊಂದು. ಅಂತಹ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗುತ್ತಿರುವುದು ಸರಿಯಾದುದ್ದಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು. ಕೊಡಗು ಜಿಲ್ಲೆಯ ಅಸ್ಮಿತೆಯ ಅಳಿವು ಉಳಿವಿನ ಪ್ರಶ್ನೆಯಾಗಿರುವ ಕೊಡಗು ವಿಶ್ವವಿದ್ಯಾಲಯದ ವಿಲೀನ ಮಾಡುವಂತಹ ಚಿಂತನೆಯು ಕೊಡಗು ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳನ್ನು ಕಸಿದುಕೊಂಡತಾಗುತ್ತದೆ, ಹಾಗೇನಾದರೂ ಈ ಸರ್ಕಾರವು ವಿಲೀನವಾಗಿಸಲು ಮುಂದಾದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.