ಸಾರಾಂಶ
ತಪ್ಪು ಮರೆಮಾಚಲು ಕರವೇ ತಾ.ಅಧ್ಯಕ್ಷ ಅಣಕು ಧರಣಿ
ಸಕಲೇಶಪುರ: ಪುರಸಭೆ ವ್ಯಾಪ್ತಿಯಲ್ಲಿ ನಿವೇಶನಗಳ ಒತ್ತುವರಿ ತೆರವಿಗಾಗಿ ಒತ್ತಾಯಿಸಿ ಕರವೇ (ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಲಕ್ಷಾಂತರ ರು. ವೆಚ್ಚ ಮಾಡಿ ಶೆಡ್ ನಿರ್ಮಿಸಿದ ನಂತರ ತಮ್ಮ ತಪ್ಪಿನ ಅರಿವಾಗಿ ಆ ತಪ್ಪನ್ನು ಮರೆಮಾಚಲಿಕ್ಕಾಗಿ ಅಣಕು ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕರನ್ನು ಮೂರ್ಖರನ್ನಾಗಿಸುವ ಯತ್ನ ನಡೆಸಿದ್ದಾರೆ.ಅಣುಕು ಪ್ರತಿಭಟನೆಗೆ ಲಕ್ಷಾಂತರ ರು. ವೆಚ್ಚದ ಶೆಡ್ ನಿರ್ಮಿಸಿರುವ ಕರವೇ ಅಧ್ಯಕ್ಷ ರಮೇಶ್ ಪೂಜಾರಿ ಶೆಡ್ ನಿರ್ಮಾಣಗೊಂಡ ಎರಡು ದಿನದ ಬಳಿಕ ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಹಿನ್ನೆಲೆ:ಪಟ್ಟಣದ ಮುಖ್ಯ ರಸ್ತೆಯ ಶಾಪ್‌ಸಿದ್ದೆಗೌಡ ಶಾಲೆಯ ಮುಂಭಾಗ ಗ್ರಂಥಾಲಯಕ್ಕೆ ಸೇರಿದ ೨ ಗುಂಟೆ ಜಮೀನಿದ್ದು ಇಲ್ಲಿದ್ದ ಗ್ರಂಥಾಲಯ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾದ ವೇಳೆ ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಗೆ ನಿವೇಶನ ಬರಲಿದೆ ಎಂಬ ಕಾರಣ ನೀಡಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದ ಕಾರಣ ಗ್ರಂಥಾಲಯ ಇಂದಿಗೂ ಬಾಡಿಗೆ ಕಟ್ಟಡದಲ್ಲಿದೆ. ಆದರೆ, ಈ ವಿಚಾರ ಅರಿಯದ ಕರವೇ ಅಧ್ಯಕ್ಷ ಪುರಸಭೆಗೆ ಸೇರಿದ ನಿವೇಶನ ಎಂದು ಶನಿವಾರ ರಾತ್ರೋರಾತ್ರಿ ಕಬ್ಬಿಣ ಹಾಗೂ ಶೀಟ್ ಬಳಸಿ ಶೆಡ್ ನಿರ್ಮಿಸಿದ್ದಾರೆ.
ಈ ಸಂಬಂಧ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಕೆಯಾಗಿದೆ. ಗ್ರಂಥಪಾಲಕ ಚಂದ್ರಕುಮಾರ್ ಮೌಖಿಕವಾಗಿ ಶೆಡ್ ತೆರವುಗೊಳಿಸುವಂತೆ ತಿಳಿಸಿದ್ದರು. ಶೆಡ್ ದಕ್ಕಿಸಿಕೊಳ್ಳುವುದು ಕಷ್ಟ ಎಂಬ ಅರಿವು ಮೂಡಿದ ನಂತರ ಪುರಸಭೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ನಿವೇಶನಗಳ ತೆರವಿಗಾಗಿ ಅಣಕು ಪ್ರತಿಭಟನೆ ನಡೆಸಲು ಶೆಡ್ ನಿರ್ಮಿಸಲಾಗಿದೆ ಎಂದು ರಮೇಶ್ ಹೇಳಿಕೆ ನೀಡಿದ್ದಾರೆ. ಇದನ್ನು ನಂಬಿ ಕೆಲವೊಂದು ಡಿಜಿಟಲ್ ಮೀಡಿಯಾಗಳೂ ಸುದ್ದಿಯನ್ನು ಪ್ರಕಟಿಸಿದ್ದವು.ಅಣುಕು ಪ್ರತಿಭಟನೆಗಾದರೆ ರಾತ್ರೋರಾತ್ರಿ ಶೆಡ್ ನಿರ್ಮಿಸಿದ್ದು ಏಕೆ? ಅಷ್ಟೊಂದು ದುಬಾರಿ ವೆಚ್ಚ ಮಾಡಿರುವುದರ ಅರ್ಥ ಏನು? ಶೆಡ್ ನಿರ್ಮಾಣಗೊಂಡ ಎರಡು ದಿನಗಳ ನಂತರ ಪ್ರತಿಭಟನೆ ನಡೆಸಿದ್ದು ಏಕೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಗ್ರಂಥಾಲಯ ಸ್ಥಳದಲ್ಲಿ ಶೆಡ್ ನಿರ್ಮಾಣ ಮಾಡಿರುವ ಕರವೇ ಅಧ್ಯಕ್ಷ ರಮೇಶ್.