ಸಾರಾಂಶ
ಜಿಲ್ಲಾಧಿಕಾರಿಗಳು ತಕ್ಷಣವೇ ಪುರಸಭೆ ಒಳ ವ್ಯವಹಾರವನ್ನು ರದ್ದುಪಡಿಸಿ ಮಳಿಗೆಗಳ ಬಹಿರಂಗ ಹರಾಜಿಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಕರವೇ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪುರಸಭೆ ವ್ಯಾಪ್ತಿ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪುರಸಭಾ ಕಚೇರಿ ಎದುರು ಪ್ರತಿಭಟಿಸಿ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದರು.ಜಿಲ್ಲಾ ಕರವೇ ಅಧ್ಯಕ್ಷ ಡಿ.ಎಸ್.ವೇಣು ನೇತೃತ್ವದಲ್ಲಿ ಪುರಸಭಾ ಕಚೇರಿಗೆ ಆಗಮಿಸಿದ ಕಾರ್ಯಕರ್ತರು, ಹಲವು ದಶಕಗಳಿಂದ ಪುರಸಭೆ ತನ್ನ ವಾಣಿಜ್ಯ ಮಳಿಗೆಗಳನ್ನು ಬಹಿರಂಗ ಹರಾಜು ಮಾಡದೆ ಕೆಲವೇ ವ್ಯಕ್ತಿಗಳ ಏಕಸಾಮ್ಯಕ್ಕೆ ನೀಡಿರುವುದನ್ನು ಖಂಡಿಸಿದರು.
ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಮಾತನಾಡಿ, ರಾಜ್ಯದಲ್ಲಿ ಇತರರಿಗೆ ಒಂದು ಸಂವಿಧಾನವಿದ್ದರೆ ಕೆ.ಆರ್.ಪೇಟೆ ಪುರಸಭೆಗೆ ಪ್ರತ್ಯೇಕ ಸಂವಿಧಾನವಿದೆ. ಪುರಸಭೆ ಸ್ಥಳೀಯ ಸಂಸ್ಥೆಗಳ ಮಳಿಗೆಗಳ ಹರಾಜು ಪ್ರಕ್ರಿಯೆ ನಿಯಮಗಳನ್ನು ಪಾಲಿಸದೆ ಕೆ.ಟಿ.ಪಿ.ಪಿ ನಿಯಮ 20ಅನ್ನು ಉಲ್ಲಂಘನೆ ಮಾಡಿದೆ ಎಂದು ದೂರಿದರು.ಪುರಸಭೆಯ ಇತಿಹಾಸದಲ್ಲಿಯೇ ವಾಣಿಜ್ಯ ಮಳಿಗೆಗಳು ಬಹಿರಂಗ ಹರಾಜು ಆಗಿರುವುದನ್ನು ಯಾರೂ ಕಂಡಿಲ್ಲ. ಇದರಿಂದ ವಾಣಿಜ್ಯ ಮಳಿಗೆಗಳು ಕೆಲವೇ ವ್ಯಕ್ತಿಗಳ ಏಕ ಸ್ವಾಮ್ಯದಲ್ಲಿ ಸಿಲುಕಿವೆ. ಮಳಿಗೆ ಪಡೆದ ವ್ಯಕ್ತಿಗಳು ಪುರಸಭೆಗೆ ಕೇವಲ 700 ರಿಂದ 800 ರು. ಬಾಡಿಗೆ ಪಾವತಿಸುತ್ತಿದ್ದು, ತಮ್ಮ ಹೆಸರಿನ ಮಳಿಗೆಗಳನ್ನು ಇತರರಿಗೆ ಮಾಸಿಕ 25 ರಿಂದ 30 ಸಾವಿರ ರು.ಗಳಿಗೆ ಬಾಡಿಗೆಗೆ ನೀಡಿದ್ದಾರೆ ಎಂದು ಆರೋಪಿಸಿದರು.
ಪುರಸಭೆಗೆ ಪ್ರತಿ ಮಳಿಗೆಗೆ ಬರಬೇಕಾದ ಸಾವಿರಾರು ರು. ಬಾಡಿಗೆ ಆದಾಯ ಅನ್ಯರ ಪಾಲಾಗುತ್ತಿದೆ. ಚುನಾಯಿತ ಪುರಸಭಾ ಸದಸ್ಯರು ಮಳಿಗೆಗಳ ಬಹಿರಂಗ ಹರಾಜು ಬಗ್ಗೆ ಧ್ವನಿಯೆತ್ತಿ ಪಟ್ಟಣದ ನಿರುದ್ಯೋಗಿ ಯುವಕರಿಗೆ ಸಹಾಯ ಮಾಡುತ್ತಿಲ್ಲ. ಕರವೇ ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಪಾಂಡವಪುರ ಉಪ ವಿಭಾಗಾಧಿಕಾರಿಗಳಿಗೆ ಲಿಖಿತ ಮನವಿ ನೀಡಿ ಬಹಿರಂಗ ಹರಾಜಿಗೆ ಕ್ರಮ ವಹಿಸುವಂತೆ ಕೋರಿದ್ದರೂ ಯಾವುದೇ ಪ್ರತಿಫಲ ಸಿಕ್ಕಿಲ್ಲ ಎಂದು ಅಸಮಾಧಾನ ಸೂಚಿಸಿದರು.ಜಿಲ್ಲಾಧಿಕಾರಿಗಳು ತಕ್ಷಣವೇ ಪುರಸಭೆ ಒಳ ವ್ಯವಹಾರವನ್ನು ರದ್ದುಪಡಿಸಿ ಮಳಿಗೆಗಳ ಬಹಿರಂಗ ಹರಾಜಿಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಕರವೇ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರವೇ ಪದವೀಧರರ ಘಟಕದ ಅಧ್ಯಕ್ಷ ಸಿ.ಬಿ.ಚೇತನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್, ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ನಗರ ಘಟಕದ ಅಧ್ಯಕ್ಷ ಮದನ್, ಸಂಘಟನಾ ಕಾರ್ಯದರ್ಶಿಗಳಾದ ಸ್ವಾಮಿ, ಗೋಪಿ ಇದ್ದರು.