ಕೇಂದ್ರ ಸರ್ಕಾರದ ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ, ಹಿಂದಿ ಹೇರಿಕೆ, ನೆರೆ-ಹೊರೆಭಾಷಿಗರಿಂದ ಕನ್ನಡ ಭಾಷೆಗೆ ಧಕ್ಕೆಯಾಗುವುದನ್ನು ತಡೆದಿದ್ದಾರೆ, ಅನೇಕ ಹೋರಾಟ ಚಳವಳಿಯಿಂದ ಬೈಲು ಸೇರಿದ್ದರೂ ಕನ್ನಡಪರ ಹೋರಾಟ ಮಾಡುವ ಇಂತಹ ದೀಮಂತ ಕನ್ನಡ ಹೋರಾಟಗಾರರಿಗೆ ಶಕ್ತಿ ತುಂಬೋಣ.
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ನಾಡಿನ ಏಕತೆ ಮತ್ತು ಭಾಷಾಭಿಮಾನದ ಹೋರಾಟ ಪ್ರತಿ ಕನ್ನಡಿಗರ ಅಸ್ಮಿತೆಯಾಗಿದೆ, ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ನಾರಾಯಣಗೌಡರು ಕನ್ನಡಿಗರ ಹಕ್ಕುಗಳ ಧ್ವನಿಯಾಗಿ ರಾಜ್ಯದಲ್ಲಿ ಕನ್ನಡಪರ ಸಂಘಟಕರಾಗಿದ್ದಾರೆ ಎಂದು ಜಿಲ್ಲಾ ಘಟಕ ಅಧ್ಯಕ್ಷ ವೇಣು ಅಭಿಪ್ರಾಯಪಟ್ಟರು.ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಪರಸರ ಸಂಸ್ಥೆಯ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಆಯೋಜಿಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ೬೦ನೇ ವರ್ಷದ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ವಿವಿಧ ಸೇವಾ ಕಾರ್ಯ ಮತ್ತು ಗರ್ಭಿಣಿ, ಬಾಣಂತಿ, ಅಗತ್ಯಯುಳ್ಳವರಿಗೆ ಪೌಷ್ಟಿಕಾಹಾರ, ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ, ಹಿಂದಿ ಹೇರಿಕೆ, ನೆರೆ-ಹೊರೆಭಾಷಿಗರಿಂದ ಕನ್ನಡ ಭಾಷೆಗೆ ಧಕ್ಕೆಯಾಗುವುದನ್ನು ತಡೆದಿದ್ದಾರೆ, ಅನೇಕ ಹೋರಾಟ ಚಳವಳಿಯಿಂದ ಬೈಲು ಸೇರಿದ್ದರೂ ಕನ್ನಡಪರ ಹೋರಾಟ ಮಾಡುವ ಇಂತಹ ದೀಮಂತ ಕನ್ನಡ ಹೋರಾಟಗಾರರಿಗೆ ಶಕ್ತಿ ತುಂಬೋಣ ಎಂದರು.ಕರವೇ ಮಾಜಿ ಅಧ್ಯಕ್ಷ ಕೆ.ಟಿ.ಶಂಕರೇಗೌಡ, ‘ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು’ ಎಂಬ ಧ್ಯೇಯವಾಕ್ಯದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಮುನ್ನಡೆಸಿ, ೪೦ವರ್ಷಗಳಿಂದ ಕನ್ನಡಿಗರಿಗಾಗಿ ಹೋರಾಟ, ಚಳವಳಿ ನಡೆಸುತ್ತಿದ್ದಾರೆ, ಕಾವೇರಿ ನದಿ ನೀರಿನ ವಿವಾದ, ಬೆಳಗಾವಿ ಗಡಿ ವಿವಾದ, ಮತ್ತು ಕನ್ನಡ ನಾಮಫಲಕಗಳ ಕಡ್ಡಾಯ ಅಳವಡಿಕೆ ಸೇರಿದಂತೆ ಅನೇಕ ಮಹತ್ವದ ಹೋರಾಟಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ ಎಂದರು.
ಕರವೇ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಎಸ್.ಚಿದಂಬರ್, ಸಾಮಾಜಿಕ ಕಳಕಳಿಯಿಂದ ಅನೇಕ ಹೋರಾಟಗಳು ನ್ಯಾಯಕೊಡಿಸುವಲ್ಲಿ ಸಫಲತೆ ಕಂಡಿವೆ, ಕನ್ನಡ ವಿರೋಧಿ ನೀತಿಗಳು ಮತ್ತು ಭಾಷಾ ಹೇರಿಕೆಯ ವಿರುದ್ಧ ಸರ್ಕಾರವನ್ನು ಆಗ್ರಹಿಸಿ, ರಾಜ್ಯದ ಚಾಲಕರು ಮತ್ತು ಕಾರ್ಮಿಕರ ಸಂಕಷ್ಟಗಳಿಗೂ ಧ್ವನಿಯಾಗಿದ್ದಾರೆ. ಕನ್ನಡ ನಾಡಿನ ಏಕತೆ ಮತ್ತು ಭಾಷಾಭಿಮಾನದ ಸಂದೇಶ ನೀಡುತ್ತಿದ್ದಾರೆ ಎಂದರು.ಇದೇ ವೇಳೆ ಕರವೇ ಕಾರ್ಯಕರ್ತರು ಜಿಲ್ಲಾಧ್ಯಂತ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ, ವಿವಿಧ ಸೇವಾಕಾರ್ಯ ಮತ್ತು ಅನ್ನದಾಸೋಹ, ಹಣ್ಣುಹಂಪಲು ವಿತರಿಸಿದರು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಪದಾಧಿಕಾರಿಗಳಾದ ಸುಜಾತ ಕೃಷ್ಣ, ಭಾರತಿ ಮದ್ದೂರು, ರಾಮಚಂದ್ರ, ಶ್ರೀನಿವಾಸ್, ತೇಜುಕುಮಾರ್, ಶಿವಪ್ರಸಾದ್, ಶೋಭಾ, ಅಶೋಕ್ ಮತ್ತಿತರರಿದ್ದರು.