ಕಾವೇರಿ ಸಂಕಷ್ಟ ಸೂತ್ರಕ್ಕಾಗಿ ದಿಲ್ಲಿಯಲ್ಲಿ ಕರವೇ ಪ್ರತಿಭಟನೆ

| Published : Oct 19 2023, 12:45 AM IST

ಕಾವೇರಿ ಸಂಕಷ್ಟ ಸೂತ್ರಕ್ಕಾಗಿ ದಿಲ್ಲಿಯಲ್ಲಿ ಕರವೇ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಾದ ಇತ್ಯರ್ಥಕ್ಕೆ ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹ. ರಾಷ್ಟ್ರಪತಿ, ಪ್ರಧಾನಿ ಕಚೇರಿ, ಸಚಿವರಿಗೆ ಮನವಿ ಸಲ್ಲಿಕೆ.
ಕನ್ನಡಪ್ರಭ ವಾರ್ತೆ, ನವದೆಹಲಿ ಕರ್ನಾಟಕದಲ್ಲಿ ತೀವ್ರ ಬರಗಾಲ ಇರುವುದರಿಂದ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಂಕಷ್ಟ ಸೂತ್ರ ಜಾರಿ ಮಾಡಬೇಕು. ಜಲ ವಿವಾದ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ದೆಹಲಿಯ ಜಂತರ್ ಮಂತರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಕರವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮಧ್ಯಾಹ್ನ 12 ಗಂಟೆಗೆ ಜಂತರ್‌ ಮಂತರ್‌ಗೆ ಆಗಮಿಸಿದ ಪ್ರತಿಭಟನಾಕಾರರು ಸುಮಾರು ಒಂದೂವರೆ ತಾಸು ಪ್ರತಿಭಟನೆ ನಡೆಸಿದರು. ‘ಕಾವೇರಿ ನಮ್ಮದು, ರಕ್ತ ಕೊಟ್ಟೇವು ಆದರೆ ನೀರು ಬಿಡೆವು’ ಎಂದು ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ತಮಿಳುನಾಡು ವಿರುದ್ಧವೂ ಘೋಷಣೆಗಳು ಮೊಳಗಿದವು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಾರಾಯಣ ಗೌಡ, ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಹೀಗಾಗಿ, ಕೇಂದ್ರ ಸರ್ಕಾರ ಸಂಕಷ್ಟ ಸೂತ್ರ ಜಾರಿ ಮಾಡಬೇಕು. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಿ, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರತಿಭಟನಾಕಾರರು ಪ್ರಧಾನಿ ಕಾರ್ಯಾಲಯ ಹಾಗೂ ರಾಷ್ಟ್ರಪತಿ ಭವನಕ್ಕೆ ತೆರಳಿ ಈ ಸಂಬಂಧ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಗೂ ಮುನ್ನ ಕರವೇ ಅಧ್ಯಕ್ಷ ನಾರಾಯಣ ಗೌಡರ ನೇತೃತ್ವದಲ್ಲಿ ಕರವೇ ನಾಯಕರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಈ ವೇಳೆ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಕೂಡ ಹಾಜರಿದ್ದರು. ಕರ್ನಾಟಕದಲ್ಲಿ ತೀವ್ರ ಬರವಿದ್ದು, ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ. ಹೀಗಾಗಿ, ತುರ್ತಾಗಿ ಸಂಕಷ್ಟ ಸೂತ್ರ ಜಾರಿ ಮಾಡಬೇಕು. ಈ ವಿಷಯವಾಗಿ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ತಾವು ಅವರ ಮೇಲೆ ಒತ್ತಡ ತರಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ನೀರು ಬಿಡುವ ಸ್ಥಿತಿ

ನಮ್ಮ ರಾಜ್ಯದಲ್ಲಿಲ್ಲ

ರಾಜ್ಯದಲ್ಲಿ ಬರಗಾಲವಿದೆ. ಜಲಾಶಯಗಳಲ್ಲಿ ನೀರಿಲ್ಲ. ಇಂತಹ ಸಂಕಷ್ಟದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಆಗುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಸಂಕಷ್ಟ ಸೂತ್ರ ಜಾರಿ ಮಾಡಬೇಕು. ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು.

- ನಾರಾಯಣಗೌಡ, ಕರವೇ ಅಧ್ಯಕ್ಷ