ಸಾರಾಂಶ
ಕರವೇ ಜಿಲ್ಲಾ ಘಟಕದಿಂದ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಗೆ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರತಿಯೊಂದು ಅಂಗಡಿಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಪದಗಳಿಗೆ ಆದ್ಯತೆ ನೀಡುವ ಮೂಲಕ ಕ್ರಮ ವಹಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಬುಧವಾರ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರಿಗೆ ಮನವಿ ಸಲ್ಲಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ಕಳೆದ ಎರಡು ದಶಕಗಳಿಂದ ಕನ್ನಡ, ನಾಡು, ನುಡಿ, ಜಲ ಇತ್ಯಾದಿ ಜ್ವಲಂತ ಸಮಸ್ಯೆಗಳ ಕುರಿತು ಹೋರಾಟ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂಬುದನ್ನು ಮನವಿ ಮೂಲಕ ಒತ್ತಾಯಿಸಲಾಗಿದೆ ಎಂದರು. ರಾಜ್ಯವನ್ನು ಕನ್ನಡಮಯಗೊಳಿಸುವ ನಿಟ್ಟಿನಲ್ಲಿ ಯಾವುದೇ ಸರ್ಕಾರಗಳು ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರವನ್ನು ಎಚ್ಚರಿಸಲಾಗಿತ್ತು. ಇದರ ಫಲಶೃತಿಯಾಗಿ ಸರ್ಕಾರ ಸುಗ್ರೀವಾಜ್ಞೆ ಮುಖಾಂತರ ಕಡ್ಡಾಯವಾಗಿ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಸಬೇಕೆಂದು ಆದೇಶ ಹೊರಡಿಸಿದೆ ಎಂದರು. ನಗರದ ಬಹುತೇಕ ಅಂಗಡಿದಾರರು ಆಂಗ್ಲಭಾಷೆ ವ್ಯಾಮೋಹ ಅಥವಾ ವ್ಯಾಪಾರ ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ಇಂಗ್ಲೀಷ್ ಫಲಕಗಳನ್ನು ಹಾಕಿ ಅದೇ ಎಲ್ಲೆಡೆ ರಾರಾಜಿಸುತ್ತಿವೆ. ಹೀಗಾಗಿ ಸರ್ಕಾರ ನೀಡಿರುವ ಫೆ.24ರ ಗಡುವು ಮುಗಿಯುವುದ ರೊಳಗೆ ಆಂಗ್ಲಭಾಷೆ ನಾಮಫಲಕ ತೆರವುಗೊಳಿಸಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಪೌರಾಯುಕ್ತ ಬಿ.ಸಿ. ಬಸವರಾಜ್ ಅವರಿಗೂ ಕರವೇ ಮುಖಂಡರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಮಲ್ಲೇಶ್, ತಾಲೂಕು ಅಧ್ಯಕ್ಷ ಮನೋಜ್‌ಶೆಟ್ಟಿ, ಉಪಾಧ್ಯಕ್ಷ ಇರ್ಷಾದ್ ಅಹ್ಮದ್, ಮಹಿಳಾ ಘಟಕದ ಅಧ್ಯಕ್ಷೆ ನಾಗಲತಾ, ವಕ್ತಾರ ಕೋಟೆ ಸೋಮಣ್ಣ, ಮುಖಂಡರಾದ ಪಂಚಾಕ್ಷರಿ, ಕೇಶವ, ರುದ್ರೇಶ್, ಮಧು ಹಾಜರಿದ್ದರು.
21 ಕೆಸಿಕೆಎಂ 2ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಚಿಕ್ಕಮಗಳೂರು ನಗರಸಭೆಯ ಪೌರಾಯುಕ್ತ ಬಿ.ಸಿ. ಬಸವರಾಜ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.