ಸಾರಾಂಶ
ಇದು ಸಾಂಸ್ಕೃತಿಕ ಭಯೋತ್ಪಾದನೆಯ ಲಕ್ಷಣ: ಗಿರೀಶಾನಂದ ಜ್ಞಾನಸುಂದರ ಆಕ್ರೋಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ಭಾರತವು ಸಾಂಸ್ಕೃತಿಕ, ಧಾರ್ಮಿಕ, ಭಾಷಿಕವಾಗಿ ವೈವಿಧ್ಯಮಯವಾಗಿದೆ. ಇಲ್ಲಿ ಎಲ್ಲ ಭಾಷಿಕರು ನಾವೆಲ್ಲಾ ಒಂದೇ ಎಂಬ ಭಾವನೆಯೊಂದಿಗೆ ಜೀವಿಸುತ್ತಿದ್ದು, ಇಂತಹ ನೆಲದಲ್ಲಿ ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವುದು ಕ್ರೌರ್ಯ, ರಾಜಕೀಯ ಗೂಂಡಾಗಿರಿ, ಸಾಂಸ್ಕೃತಿಕ ಭಯೋತ್ಪಾದನೆಯ ಲಕ್ಷಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕುಗಳ ವಿಲೀನದ ಹೆಸರಲ್ಲಿ ಕನ್ನಡನಾಡಿನಲ್ಲಿ ಹುಟ್ಟಿದ ಅನೇಕ ಬ್ಯಾಂಕುಗಳು ಈಗ ಇತಿಹಾಸದ ಪುಟ ಸೇರಿಕೊಂಡಿವೆ. ಇನ್ನೂ ಹಲವು ಬ್ಯಾಂಕುಗಳು ವಿಲೀನಗೊಂಡು ಅಸ್ತಿತ್ವ ಕಳೆದುಕೊಳ್ಳಲಿವೆ. ಏಕೀಕರಣಗೊಂಡ ಬ್ಯಾಂಕುಗಳ ಸಿಬ್ಬಂದಿ ಉತ್ತರದ ಭಾಗದಿಂದ ಬಂದವರಾಗಿದ್ದು, ಗ್ರಾಹಕರೊಂದಿಗೆ ಬಲವಂತವಾಗಿ ಹಿಂದಿಯಲ್ಲೇ ಮಾತನಾಡುತ್ತಿದ್ದಾರೆ. ಇದರಿಂದಾಗಿ ಹಿಂದಿ ಗೊತ್ತಿಲ್ಲದವರು ಪ್ರತಿನಿತ್ಯ ಪರದಾಡುತ್ತಿದ್ದಾರೆ.ಸರ್ಕಾರ ಕೇವಲ ಹಿಂದಿಯನ್ನು ಮಾತ್ರ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿದೆ. ಹಿಂದಿಯೇತರ ರಾಜ್ಯಗಳ ಮೇಲೆ ಒತ್ತಡ ಹೇರುವ ಕಾರ್ಯ ಮಾಡುತ್ತಾ ಬಂದಿದೆ. ಕೇಂದ್ರಿಯ ಉದ್ಯೋಗಗಳ ನೇಮಕಾತಿಗಳ ಸಂದರ್ಭ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಪ್ರಾದೇಶಿಕ ಭಾಷೆಯ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಹಿಂದಿಯನ್ನು ಹೊಂದಿದವರು ಅವಕಾಶ ಪಡೆದುಕೊಳ್ಳುತ್ತಿದ್ದರೆ, ಉಳಿದವರು ಉದ್ಯೋಗ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.ಹಿಂದಿಯೊಂದೇ ದೇಶವನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ ಎಂದು ದೆಹಲಿಯಲ್ಲಿ ಕುಳಿತ ನಮ್ಮನ್ನಾಳುವ ರಾಜಕಾರಣಿಗಳು ಹೇಳುತ್ತಾರೆ. ಹಾಗಾದರೆ ಉಳಿದ ಭಾಷೆಗಳು ದೇಶವನ್ನು ಒಡೆಯುತ್ತವೆಯೇ?. ನೆಲದ ಭಾಷಿಕರು ದೇಶವಿರೋಧಿಗಳೆ ಹಿಂದಿಯೊಂದನ್ನೇ ದೇಶದ ಭಾಷೆಯನ್ನಾಗಿ ಬಿಂಬಿಸುವುದು ಸಂವಿಧಾನ ವಿರೋಧಿ ಎಂದರು.
ಈ ಸಂದರ್ಭ ಜಿಲ್ಲಾಧ್ಯಕ್ಷ ಯುವಘಟಕ ಜಿಲ್ಲಾಧ್ಯಕ್ಷ ಹನುಮಂತ ಬೆಸ್ತರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೊಟಗಿ ಮುಖಂಡರಾದ ಕಳಕಪ್ಪ ಹೂಗಾರ, ಶಿವನಗೌಡ ಪಾಟೀಲ, ಸಂಜಯ ಕಟವಟೆ, ಹುಲಿಗೆಮ್ಮ ನಾಯಕ, ಪ್ರಕಾಶ ಮನ್ನೆರಾಳ, ರಮೇಶ ಹಾಲವರ್ತಿ, ನಿಂಗಪ್ಪ ಮೂಗಿನ್, ನೀಲನಗೌಡ ಮಾಲಿಪಾಟೀಲ, ಶರಣಯ್ಯ ಹಳೆಮನಿ ಸೇರಿದಂತೆ ಅನೇಕರು ಇದ್ದರು.ಬಾಕ್ಸ್
ಹಕ್ಕೊತ್ತಾಯಗಳುಕೇಂದ್ರ ಸರ್ಕಾರ ಈ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ಸಾರ್ವಭೌಮತೆ ಕಾಪಾಡಬೇಕು.
ಹಿಂದಿಗೆ ವಿಶೇಷ ಮನ್ನಣೆ ನೀಡುವ ಸಂವಿಧಾನದ 343ರಿಂದ 351ನೇ ವಿಧಿಗಳನ್ನು ರದ್ದುಪಡಿಸಿ ಎಲ್ಲ ಭಾಷೆಗಳು ಒಕ್ಕೂಟದ ದೃಷ್ಟಿಯಲ್ಲಿ ಸಮಾನ ಎಂದು ಸಾರಬೇಕು.ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು.
ಎಲ್ಲ ಬಗೆಯ ಪತ್ರ ವ್ಯವಹಾರಗಳೂ ಕನ್ನಡದಲ್ಲಿ ನಡೆಯಬೇಕು.ಅಂತಾರಾಜ್ಯ ವ್ಯವಹಾರಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ವ್ಯವಹಾರಗಳಿಗೂ ಕನ್ನಡದಲ್ಲೆ ಆಗಬೇಕು.
ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕಾಗಿದೆ.ನಮ್ಮ ಶಾಲಾ ಪಠ್ಯಕ್ರಮಗಳಿಂದ ಹಿಂದಿ ಕಡ್ಡಾಯ ಕಲಿಕೆ ಕೊನೆಗೊಳ್ಳಬೇಕು
14ಕೆಪಿಎಲ್2: ಕೊಪ್ಪಳ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯವರು ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆ ನಡೆಸಿದರು.