ಕೇಂದ್ರ ಸರ್ಕಾರದ ಪ್ರಧಾನಿ ಸ್ವರೋಜ್‌ಗಾರ್‌, ಸ್ವಸಹಾಯ ಗುಂಪು ಸೇರಿದಂತೆ ಜನತೆಯ ಜೀವನೋಪಾಯ ಭದ್ರತೆಯ ಕಾರ್ಯಕ್ರಮಗಳಿಗೆ ಬ್ಯಾಂಕ್‌ಗಳು ಆದ್ಯತೆ ನೆಲೆಯಲ್ಲಿ ಸಾಲ ಸೌಲಭ್ಯ ನೀಡಬೇಕಾಗಿದ್ದು, ನಿರ್ಲಕ್ಷ್ಯ ತೋರಿಸಬಾರದು ಎಂದು ದ.ಕ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಾಯಕ ನಾರ್ವಡೆ ಕಾರ್ಭಾರಿ ಹೇಳಿದ್ದಾರೆ.

ಮಂಗಳೂರು: ಕೇಂದ್ರ ಸರ್ಕಾರದ ಪ್ರಧಾನಿ ಸ್ವರೋಜ್‌ಗಾರ್‌, ಸ್ವಸಹಾಯ ಗುಂಪು ಸೇರಿದಂತೆ ಜನತೆಯ ಜೀವನೋಪಾಯ ಭದ್ರತೆಯ ಕಾರ್ಯಕ್ರಮಗಳಿಗೆ ಬ್ಯಾಂಕ್‌ಗಳು ಆದ್ಯತೆ ನೆಲೆಯಲ್ಲಿ ಸಾಲ ಸೌಲಭ್ಯ ನೀಡಬೇಕಾಗಿದ್ದು, ನಿರ್ಲಕ್ಷ್ಯ ತೋರಿಸಬಾರದು ಎಂದು ದ.ಕ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಾಯಕ ನಾರ್ವಡೆ ಕಾರ್ಭಾರಿ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಲೀಡ್‌ ಬ್ಯಾಂಕ್‌ ಸಭೆಯ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು, ಪ್ರಧಾನಿ ರೋಜ್‌ಗಾರ್‌, ಸ್ವಸಹಾಯ ಗುಂಪುಗಳಿಗೆ ಸೂಕ್ತ ರೀತಿಯಲ್ಲಿ ಬ್ಯಾಂಕ್‌ಗಳ ಸ್ಪಂದಿಸುತ್ತಿಲ್ಲ ಎಂಬುದು ಕಂಡುಬಂದಿದೆ. ಈ ವಿಭಾಗಗಳಲ್ಲಿ ಬ್ಯಾಂಕ್‌ಗಳ ಗುರಿ ಹಿಂದೆ ಉಳಿದಿದೆ. ಶೇ.ನೂರರಷ್ಟು ಗುರಿ ಮೀರಿದ ಸಾಧನೆ ಮಾಡಿದರೆ ಆರ್ಥಿಕ ಬದಲಾವಣೆ ಜೊತೆಗೆ ಜಿಡಿಪಿ ಕೊಡುಗೆಗೂ ಸಾಧ್ಯವಿದೆ ಎಂದರು.

ಮಂಗಳೂರು ಜಾಗತಿಕ ಹಬ್‌: ಐಟಿ ಬಿಟಿ ಕಂಪನಿಗಳು ಕರಾವಳಿಯಲ್ಲಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿರುವುದರಿಂದ ಮಂಗಳೂರು ಈಗ ಗ್ಲೋಬಲ್‌ ಹಬ್‌ಗೆ ತೆರೆದುಕೊಳ್ಳುತ್ತಿದೆ. ವ್ಯಾಪಾರ ವಹಿವಾಟಿನ ಜೊತೆಗೆ ಸಾಕಷ್ಟು ಉದ್ಯೋಗಾವಕಾಶಗಳೂ ಸಾಧ್ಯವಾಗಲಿದೆ. ಆದ್ದರಿಂದ ಸ್ವಉದ್ಯೋಗಕ್ಕೆ ಅನುಕೂಲಕರವಾಗುವ ಮುದ್ರಾ, ಸ್ವಾನಿಧಿ, ಎಂಎಸ್‌ಎಂಇ ಮುಂತಾದ ಯೋಜನೆಗಳಿಗೆ ಹೆಚ್ಚಿನ ಗಮನ ನೀಡಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವ ಜೊತೆಗೆ ನಿಗದಿತ ಗುರಿ ತಲುಪುವ ಬಗ್ಗೆ ವಿಶೇಷ ಗಮನ ಇರಬೇಕು ಎಂದರು.

ಒಟ್ಟು ವ್ಯವಹಾರ ₹ 1.47 ಲಕ್ಷ ಕೋಟಿ: ಜಿಲ್ಲೆಯ ಬ್ಯಾಂಕ್‌ಗಳು 2026ರ ಜೂನ್ ಅಂತ್ಯಕ್ಕೆ ಒಟ್ಟು ₹ 1,47,818.56 ಕೋಟಿ ವ್ಯವಹಾರ ದಾಖಲಿಸಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.11.67ರಷ್ಟು ಬೆಳವಣಿಗೆ ಸಾಧಿಸಿವೆ ಎಂದು ಜಿಲ್ಲಾ ಲೀಡ್‌ ಕೆನರಾ ಬ್ಯಾಂಕ್‌ ಡಿಜಿಎಂ ವೆಂಕಟ ವರ ಪ್ರಸಾದ್‌ ಹೇಳಿದರು.ಜಿಲ್ಲೆಯಲ್ಲಿ ಜೂನ್ ಅಂತ್ಯಕ್ಕೆ ಒಟ್ಟು 669 ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕ್‌ಗಳ ಒಟ್ಟು ಠೇವಣಿ ₹ 86,933.49 ಕೋಟಿಯಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ.12.99ರಷ್ಟು ಏರಿಕೆಯಾಗಿದೆ. ಒಟ್ಟು ಸಾಲ ₹ 60,885.07 ಕೋಟಿಯಾಗಿದ್ದು, ಶೇ.9.83ರಷ್ಟು ಬೆಳವಣಿಗೆ ಕಂಡಿದೆ. ಜೂನ್ 30ರಂದು ಸಾಲ-ಠೇವಣಿ ಅನುಪಾತ ಶೇ.70.04ರಷ್ಟಿದ್ದು, ಹಿಂದಿನ ವರ್ಷದ ಮಾರ್ಚ್ 30ಕ್ಕೆ ಹೋಲಿಸಿದರೆ ಶೇ.1.96ರಷ್ಟು ಇಳಿಕೆಯಾಗಿದೆ.

ಜೂನ್ ಅಂತ್ಯಕ್ಕೆ ಆದ್ಯತಾ ಮತ್ತು ಆದ್ಯತೇತರ ವಲಯಗಳಲ್ಲಿ ಒಟ್ಟು ₹ 14,910.39 ಕೋಟಿ ಸಾಲ ವಿತರಿಸಲಾಗಿದೆ. ತ್ರೈಮಾಸಿಕ ಗುರಿ ₹ 19,482.38 ಕೋಟಿಗೆ ಎದುರಾಗಿ ಶೇ.76.53ರಷ್ಟು ಪ್ರಗತಿ ಸಾಧಿಸಲಾಗಿದೆ.

ಕೃಷಿ ಕ್ಷೇತ್ರಕ್ಕೆ ₹ 3,218 ಕೋಟಿ ಸಾಲ ವಿತರಿಸಲಾಗಿದ್ದು, ₹ 3,587.73 ಕೋಟಿಯ ತ್ರೈಮಾಸಿಕ ಗುರಿಗೆ ಶೇ.89.69ರಷ್ಟು ಸಾಧನೆ ಮಾಡಲಾಗಿದೆ.

ಗುರಿ ಮೀರಿದ ಪ್ರಗತಿ:

ಆದ್ಯತಾ ವಲಯದ ಶಿಕ್ಷಣ ಸಾಲಕ್ಕೆ ₹ 29 ಕೋಟಿ ವಿತರಿಸಲಾಗಿದ್ದು, ಗುರಿಯ ಶೇ.48.80ರಷ್ಟು ಸಾಧನೆ ಆಗಿದೆ. ಗೃಹ ಸಾಲ ಕ್ಷೇತ್ರದಲ್ಲಿ ₹ 118 ಕೋಟಿ ವಿತರಿಸಲಾಗಿದ್ದು, ತ್ರೈಮಾಸಿಕ ಗುರಿಯ ಶೇ.109.41ರಷ್ಟು ಪ್ರಗತಿ ಸಾಧಿಸಲಾಗಿದೆ. ಆದ್ಯತಾ ವಲಯದಲ್ಲಿ ಒಟ್ಟಾರೆ ₹ 8,853 ಕೋಟಿ ಸಾಲ ವಿತರಣೆಯಾಗಿದ್ದು, ₹ 6,592.31 ಕೋಟಿಯ ಗುರಿಗೆ ಎದುರಾಗಿ ಶೇ.134.29ರಷ್ಟು ಸಾಧನೆ ಮಾಡಲಾಗಿದೆ. ಆದರೂ ಕೆಲವು ರಾಷ್ಟ್ರೀಯ ಹಾಗೂ ಖಾಸಗಿ ರಂಗದ ಬ್ಯಾಂಕ್‌ಗಳು ಪಿಎಂಜೆಜೆಪಿವೈ, ಮುದ್ರಾ ಮತ್ತಿತರ ಯೋಜನೆಗಳಲ್ಲಿ ಶೇ.50ಕ್ಕಿಂತಲೂ ಕಳಪೆ ಸಾಧನೆ ಮಾಡಿದ್ದು, ಈ ಬಗ್ಗೆ ಜಿ.ಪಂ. ಸಿಇಒ ಎಚ್ಚರಿಕೆ ನೀಡಿದರು. ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ: 2026ರ ಏಪ್ರಿಲ್‌ನಿಂದ ಜೂನ್‌ವರೆಗೆ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ₹ 373.86 ಕೋಟಿ ಸಾಲ ವಿತರಿಸಲಾಗಿದೆ. ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಡಿ 10,134 ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ.

ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗೆ 9,420 ಮಂದಿ ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ 19,953 ಮಂದಿ ನೋಂದಣಿಯಾಗಿದ್ದಾರೆ. ಅಟಲ್ ಪಿಂಚಣಿ ಯೋಜನೆಯಡಿ 8,278 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಜೂನ್ 30ರ ವರೆಗೆ ಪಿಎಂ ಸ್ವನಿಧಿ ಯೋಜನೆಯಡಿ ಮೊದಲ ಕಂತಿನಲ್ಲಿ 13,527, ಎರಡನೇ ಕಂತಿನಲ್ಲಿ 6,882 ಹಾಗೂ ಮೂರನೇ ಕಂತಿನಲ್ಲಿ 3,370 ಮಂಜೂರಾತಿ ದೊರಕಿವೆ ಎಂದರು. ಆರ್‌ಬಿಐ ಡಿಜಿಎಂ ಅರುಣ್‌ ಕುಮಾರ್‌, ನಬಾರ್ಡ್‌ ಡಿಜಿಎಂ ಸಂಗೀತಾ ಕರ್ತಾ, ಲೀಡ್‌ ಬ್ಯಾಂಕ್‌ ಮೆನೇಜರ್‌ ಗೀತಾ ಯಶೋಧರ್‌ ಇದ್ದರು.