ಬಿಜೆಪಿ ಬಿಟ್ಟು ಕರಡಿ ಎಲ್ಲೂ ಹೋಗಲ್ಲ

| Published : Mar 24 2024, 01:36 AM IST

ಸಾರಾಂಶ

ಎಲ್ಲೂ ಹೋಗಲ್ಲ, ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ ಎಂದು ಸಂಸದ ಸಂಗಣ್ಣ ಕರಡಿ ಗುನುಗುಡುತ್ತಿರುವಂತೆ ಕಾಣುತ್ತಿದೆ. ಇದನ್ನು ಅರಿತಿರುವ ಬಿಜೆಪಿ ನಾಯಕರು ಕರಡಿ ಬೆಂಬಲಿಗರ ಆಕ್ರೋಶ ತಣ್ಣಗಾಗುವಂತೆ ಮಾಡುತ್ತಿದ್ದಾರೆ.

- ಗುನಗುಡುತ್ತಿರುವ ಕರಡಿ

-ಸಂಗಣ್ಣರ ಮನವೊಲಿಸುವುದಕ್ಕೆ ವೇದಿಕೆ ಸಿದ್ಧ ಮಾಡಿಕೊಂಡ ರಾಜ್ಯ ನಾಯಕರು ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಎಲ್ಲೂ ಹೋಗಲ್ಲ, ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ ಎಂದು ಸಂಸದ ಸಂಗಣ್ಣ ಕರಡಿ ಗುನುಗುಡುತ್ತಿರುವಂತೆ ಕಾಣುತ್ತಿದೆ. ಇದನ್ನು ಅರಿತಿರುವ ಬಿಜೆಪಿ ನಾಯಕರು ಕರಡಿ ಬೆಂಬಲಿಗರ ಆಕ್ರೋಶ ತಣ್ಣಗಾಗುವಂತೆ ಮಾಡುತ್ತಿದ್ದಾರೆ.

ಟಿಕೆಟ್ ಘೋಷಣೆಯಾದ ತಕ್ಷಣ ಇದ್ದ ಕಾವು ಈಗ ಇಲ್ಲದಾಗಿದೆ. ಮೊದಲ ದಿನ ಸಂಗಣ್ಣ ಅವರ ನಿವಾಸಕ್ಕೆ ಬಿಜೆಪಿ ನಾಯಕರು ಆಗಮಿಸಿ, ಮನವೊಲಿಸಲು ಮುಂದಾದಾಗ ಬೆಂಬಲಿಗರ ಆಕ್ರೋಶದ ಬಿಸಿ ತಟ್ಟಿತು. ಎರಡು ದಿನ ಕಳೆಯುತ್ತಿದ್ದಂತೆ ಕರಡಿ ಬೆಂಬಲಿಗರು ಸ್ವಾಭಿಮಾನಿ ಸಭೆ ನಡೆಸಿದಾಗ ಆಕ್ರೋಶ ಸ್ಫೋಟಗೊಳ್ಳುವಂತೆ ಆಗಿತ್ತು. ಆದರೆ, ನಾಲ್ಕು ದಿನ ಕಾದು ನೋಡೋಣ ಎಂದು ತಮ್ಮ ನಾಯಕ ಹೇಳುತ್ತಿದ್ದಂತೆ ಬೆಂಬಲಿಗರಲ್ಲಿದ್ದ ಆಕ್ರೋಶ ತಣ್ಣಗಾಯಿತು.

ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ ಎನ್ನುವ ಹಾಡು ಗುನುಗುತ್ತಿದ್ದಾರೆ. ಹೀಗಾಗಿ, ಅವರನ್ನು ಮನವೊಲಿಸುವ ಕಸರತ್ತಿನಲ್ಲಿಯೇ ದಿನಕಳೆಯಲಾರಂಭಿಸಿದರು. ದಿನ ಒಬ್ಬೊಬ್ಬ ನಾಯಕರನ್ನು ಕಳುಹಿಸುತ್ತಾ ಕರಡಿ ಹಾಗೂ ಅವರ ಬೆಂಬಲಿಗರು ಸಮಾಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈಗ ರಾಜ್ಯ ನಾಯಕರ ಜತೆಗೆ ಸಭೆ ನಡೆಸಿ, ಸಂಗಣ್ಣ ಅವರ ಮನವೊಲಿಸುವುದಕ್ಕೆ ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ.

ಬೆಂಗಳೂರಲ್ಲಿ ಸಭೆ:

ಕರಡಿ ನೋವು ತಣಿಸಲು ಮುಂದಾಗಿರುವ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ನಾಯಕರ ಜತೆಯಲ್ಲಿ ಮಾತುಕತೆಗೆ ವೇದಿಕೆ ಸಿದ್ಧ ಮಾಡಿದ್ದಾರೆ. ಅದಕ್ಕಿನ್ನು ದಿನಾಂಕ ನಿಗದಿಯಾಗಿಲ್ಲ. ಈಗ ಇರುವ ಮಾಹಿತಿಯ ಪ್ರಕಾರ ಭಾನುವಾರ ನಡೆಯುವ ಸಾಧ್ಯತೆ ಇದೆ. ಆದರೆ, ಇದಕ್ಕೆ ಸಂಸದರು ಚುನಾವಣಾ ಸಮಿತಿಯ ಎಲ್ಲ ಸದಸ್ಯರು ಇರಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಇದು ಬಿಜೆಪಿ ನಾಯಕರಿಗೆ ಕಷ್ಟಸಾಧ್ಯ ಎನ್ನುವಂತಾಗಿದೆ. ಸದ್ಯಕ್ಕೆ ಇರುವ ಮಾಹಿತಿಯ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಉಪಸ್ಥಿತಿಯಲ್ಲಿಯೇ ಮಾತುಕತೆ ನಡೆಯಲಿದೆ.

ಸದ್ಯಕ್ಕೆ ಟಿಕೆಟ್ ಬದಲಾಯಿಸುವುದು ಅಸಾಧ್ಯ, ಹೀಗಾಗಿ, ಚುನಾವಣೆ ನಂತರ ನಿನಗೆ ಸೂಕ್ತ ರಾಜಕೀಯ ಸ್ಥಾನಮಾನ ನೀಡಲಾಗುವುದು. ಪಕ್ಷದ ಹೈಕಮಾಂಡ್ ಗಮನಕ್ಕೂ ತರಲಾಗುತ್ತದೆ. ಆದ್ದರಿಂದ ತಾವು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎನ್ನುವ ದಾಳ ಉರುಳಿಸಲಾಗುತ್ತದೆ. ಇದಕ್ಕೆ ಕರಡಿ ಒಪ್ಪಿಕೊಳ್ಳುತ್ತಾರೆಯೇ ಎನ್ನುವುದು ಸದ್ಯದ ಕುತೂಹಲವಾಗಿದೆ.

ಆದರೆ, ಕರಡಿ ತಮ್ಮ ಬೆಂಬಲಿಗರ ಕೋರಿಕೆಯಂತೆ ಟಿಕೆಟ್ ಘೋಷಣೆ ಮರುಪರಿಶೀಲನೆ ಮಾಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಆದರೆ, ಇದು ಎಷ್ಟರ ಮಟ್ಟಿಗೆ ಸಾಧ್ಯವಿದೆ ಎನ್ನುವುದು ಮಾತುಕತೆಯ ವೇಳೆಯೇ ಗೊತ್ತಾಗಲಿದೆ.

ಪ್ರಚಾರದ ಭರಾಟೆಯಲ್ಲಿ ಅಭ್ಯರ್ಥಿ:

ಸಂಗಣ್ಣ ಅಸಮಾಧಾನಗೊಂಡಿದ್ದನ್ನು ಪಕ್ಷದ ನಿಯೋಜಿತ ಅಭ್ಯರ್ಥಿ ಡಾ. ಬಸವರಾಜ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಟಿಕೆಟ್ ಘೋಷಣೆಯಾದ 2 ದಿನಗಳ ಕಾಲ ಮನವೊಲಿಸುವ ಪ್ರಯತ್ನದಲ್ಲಿ ಭಾಗಿಯಾಗಿದ್ದ ಅವರು ನಂತರ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ. ಅವರಿಗೆ ಜಿಲ್ಲೆಯ ನಾಯಕರು ಸಾಥ್ ನೀಡುತ್ತಿದ್ದಾರೆ. ಹೀಗಾಗಿ, ಕರಡಿ ಅಸಮಾಧಾನಗೊಂಡಿದ್ದರೂ ಬಿಜೆಪಿ ಜಿಲ್ಲಾದ್ಯಂತ ಬಿರುಸಿನ ಪ್ರಚಾರವನ್ನೇ ನಡೆಸಿರುವುದು ಅಚ್ಚರಿ ತಂದಿದೆ.