ಸಾರಾಂಶ
ಚಳ್ಳಕೆರೆ: ಚಳ್ಳಕೆರೆ ನಗರ ವ್ಯಾಪ್ತಿಯಲ್ಲಿ ನೂರಾರು ವರ್ಷ ಇತಿಹಾಸವುಳ್ಳ ಅಜ್ಜಯ್ಯನಗುಡಿ ಕೆರೆ ಮೂರು ದಿನಗಳ ಹಿಂದೆ ಕೋಡಿಬಿದ್ದಿದ್ದು, ಇದೀಗ ೫೬ ವರ್ಷಗಳ ನಂತರ ಕರೇಕಲ್ ಕೆರೆ ಕೋಡಿಬಿದ್ದಿದೆ. ನೂರಾನು ಜನರು ಭೇಟಿ ನೀಡಿ ವೀಕ್ಷಿಸಿದ್ದಾರೆ.
ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಕೆರೆ ಏರಿಯಲ್ಲಿ ಎರಡು ಕಡೆ ರಂದ್ರ ಉಂಟಾಗಿ ನೀರು ರಂದ್ರದ ಮೂಲಕ ರಭಸವಾಗಿ ಹರಿಯುತ್ತಿದ್ದು, ಕೆರೆ ಏರಿಗೆ ಧಕ್ಕೆಯಾಗಲಿದೆ ಎಂಬ ಭೀತಿ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.ಎರಡು ವರ್ಷ ಹಿಂದೆ ಕೋಟ್ಯಂತರ ರು. ವೆಚ್ಚದಲ್ಲಿ ಕೆರೆ ಏರಿ ದುರಸ್ತಿ ಮಾಡಲಾಗಿದ್ದು, ಕೋಡಿ ಸ್ಥಳ ಎತ್ತರಗೊಳಿಸಿದ ಹಿನ್ನೆಲೆಯಲ್ಲಿ ನೀರು ಹರಿಯಲು ತೊಂದರೆ ಉಂಟಾಗಿದೆ. ಕೆರೆ ಏರಿ ಮೇಲೆ ನೀರು ಹರಿಯುವ ಸಂಭವವಿದ್ದು, ಇದು ಅಪಾಯವನ್ನು ಉಂಟು ಮಾಡಲಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಕೋಡಿ ನೀರು ಹರಿಯುವ ಸ್ಥಳ ಮೂರು ಅಡಿಯಷ್ಟು ಆಳತೆಗೆದು ನೀರುನ್ನು ಹರಿಬಿಡುತ್ತಿದೆ.
ಜಿಲ್ಲಾಧಿಕಾರಿ ಪರಿಶೀಲನೆ: ಕರೇಕಲ್ ಕೆರೆ ರಂದ್ರ ಹಾಗೂ ಕೋಡಿ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಂಗಳವಾರ ಸಂಜೆ ಭೇಟಿ ನೀಡಿ, ಅಧಿಕಾರಿಗಳಿಗೆ ಸಲಹೆ - ಸೂಚನೆ ನೀಡಿದರು.ಸಣ್ಣನೀರಾವರಿ ಇಲಾಖೆ ಅಧಿಕಾರಿ ಅಣ್ಣಪ್ಪ ಸ್ಥಳದಲ್ಲಿದ್ದು, ಜಿಲ್ಲಾಧಿಕಾರಿಗಳಿಗೆ ರಂದ್ರ ರಿಪೇರಿ ಬಗ್ಗೆ ಮಾಹಿತಿ ನೀಡಿದರು. ಬುಧವಾರ ಬೆಳಗ್ಗೆ ಇಲಾಖೆ ಸಿಬ್ಬಂದಿ ಎರಡೂ ರಂದ್ರ ಮುಚ್ಚಿ ನೀರು ಹರಿಯುವುದನ್ನು ತಡೆಯುತ್ತಾರೆ ಎಂದರು. ತಹಸೀಲ್ದಾರ್ ರೇಹಾನ್‌ಪಾಷ, ಪೌರಾಯುಕ್ತ ಜಗರೆಡ್ಡಿ, ನಗರಸಭೆ ಎಇಇ ಕೆ.ವಿನಯ್, ನಗರಸಭಾ ಸದಸ್ಯ ಮಲ್ಲಿಕಾರ್ಜುನ್, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮಲೆಕ್ಕಿಗ ಪ್ರಕಾಶ್ ಉಪಸ್ಥಿತರಿದ್ದರು.