ಸಾರಾಂಶ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ಮಠದಿಂದ ಕಳೆದ ಶ್ರಾವಣ ಮಾಸದಲ್ಲಿ ಕಾರ್ಗಿಲ್ ವಿಜಯೋತ್ಸವದ ನೆನಪಿಗಾಗಿ 25 ಯೋಧರು ಸೇರಿದಂತೆ ಕರ್ನಾಟಕ ಏಕೀಕರಣ ಯೋಧರ ಯಶೋಗಾಥೆ ಎಂಬ ಶೀರ್ಷಿಕೆಯಡಿ ಪ್ರತಿ ದಿನ ಪ್ರವಚನ ಆಯೋಜಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜೀವನ ದರ್ಶನ ಕುರಿತು ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ದೊರೆಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಕಾರ್ಗಿಲ್ ವಿಜಯೋತ್ಸವ 25ರ ನಿಮಿತ್ತ ಕಾರ್ಗಿಲ್ ಜ್ಯೋತಿ ರಥಯಾತ್ರೆ ಅ.10 ಗುರುವಾರ, ಚೊಳಚಗುಡ್ಡ ಶಿವಬಸಯ್ಯ ಕುಲಕರ್ಣಿಯವರ ಸ್ಮಾರಕದಿಂದ ಹೊರಟು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ವರೆಗೆ ಸಂಚರಿಸಲಿದೆ.ಶಿವಯೋಗ ಮಂದಿರ ಉಪಾಧ್ಯಕ್ಷ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು, ಬದಾಮಿಯ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು ಶ್ರೀಗಳು, ಶಾಂತಲಿಂಗ ಶ್ರೀಗಳು, ಶರಣ ಹಜರತ್ ಸೈಯದ್ ಮುಬಾರಕ ಬಾದಷಾ, ಬಾಬು ಅಜ್ಜನವರು, ಬಾದಾಮಿ ಪ್ರಶಾಂತ ದೇವರು ಸಾನ್ನಿಧ್ಯದಲ್ಲಿ ಕಾರ್ಗಿಲ್ ಜ್ಯೋತಿ ರಥಯಾತ್ರೆಗೆ ಚಾಲನೆ ದೊರೆಯಲಿದೆ.
ಅಂದು ಸಂಜೆ 6 ಕ್ಕೆ ಶಾಂತಲಿಂಗ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ 25 ಯೋಧರ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಸಿ.ಸಿ. ಪಾಟೀಲ, ಸಂಸದ ಪಿ.ಸಿ. ಗದ್ದಿಗೌಡ್ರ, ಮಾಜಿ ಸಚಿವ ಬಿ.ಆರ್. ಯಾವಗಲ್, ಧಾರವಾಡದ ಕಾರ್ಗಿಲ್ ಸ್ತೂಪ ಅಧ್ಯಕ್ಷ ಚಂದ್ರಶೇಖರ, ಅಮಿನಗಡದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಪಾರಂಪರಿಕ ವೈದ್ಯ ಹನಮಂತ ಮಳಲಿ ಸೇರಿದಂತೆ ಕನ್ನಡಪರ ಸಂಘಗಳು, ಯೋಧರು, ರೈತರು ಭಾಗವಹಿಸಲಿದ್ದಾರೆ.ರಥಯಾತ್ರೆ ಮಾರ್ಗ:
ಚೊಳಚಗುಡ್ಡ ವೀರಯೋಧ ಶಿವಬಸಯ್ಯ ಕುಲಕರ್ಣಿ ವೀರಗಲ್ಲಿನಿಂದ ಪ್ರಾರಂಭವಾಗುವ ಜ್ಯೋತಿ ರಥಯಾತ್ರೆಯು ಬನಶಂಕರಿ, ಬಾದಾಮಿ, ಮುತ್ತಲಗೇರಿ, ತಿಮ್ಮಾಪೂರ ಎಸ್.ಎನ್. ಕುಳಗೇರಿ ಕ್ರಾಸ್ ಮಾರ್ಗವಾಗಿ ಗೋವನಕೊಪ್ಪ, ಕೊಣ್ಣೂರ, ಭೈರನಹಟ್ಟಿ ಶ್ರೀಮಠಕ್ಕೆ ತಲುಪಲಿದೆ.ಸಿದ್ದಲಿಂಗ ಶ್ರೀಗಳಿಂದ ದೀಕ್ಷೆ:
ಗದುಗಿನ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳಿಂದ ಕನ್ನಡ ದೀಕ್ಷೆ ಪಡೆದಿರುವ ಶಾಂತಲಿಂಗ ಸ್ವಾಮೀಜಿ ಕನ್ನಡ ಕೈಂಕರ್ಯಕ್ಕೆ ಕಟಿ ಬದ್ಧರಾಗಿದ್ದಾರೆ. ಕಾರಣ ನಾಡು, ರಾಷ್ಟ್ರ ಮತ್ತು ಸೈನಿಕರನ್ನು ನೆನೆಸಿದರೆ ನಾಡು ಸುರಕ್ಷಿತವಾಗಿರುತ್ತದೆ ಎಂದು ಬಲವಾಗಿ ನಂಬಿರುವ ಶ್ರೀಮಠದ ಪೀಠಾಧಿಪತಿಗಳು, ಹೀಗೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾಗಿ ಹೊರಹೊಮ್ಮಿದ್ದಾರೆ.ಕನ್ನಡ ಉಳಿಸುವ ಕಾರ್ಯ:
ಧಾರ್ಮಿಕ ಕಾರ್ಯಕ್ರಮದ ಜತೆಗೆ ನೇಗಿಲ ಯೋಗಿಯಿಂದ ಹಿಡಿದು ಗಡಿ ಕಾಯುವ ಯೋಧರ ಸಾದನೆ, ಕೊಡುಗೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಶಾಂತಲಿಂಗ ಶ್ರೀಗಳು, ಭಾಷೆ, ನೆಲ, ಜಲ ಸಂರಕ್ಷಣೆ ಕಾರ್ಯ ಸದ್ದಿಲ್ಲದೇ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.25 ವರ್ಷಗಳಿಂದ ವಿಜಯೋತ್ಸವ ಆಚರಣೆ:
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮೂಲಕ 1999 ರಿಂದ ಕಾರ್ಗಿಲ್ ವಿಜಯೋತ್ಸವ ಆಚರಿಸಿಕೊಂಡು ಬಂದ ಭೈರನಹಟ್ಟಿ ಶ್ರೀಮಠವು ಪ್ರತಿ ವರ್ಷ ಸೈನಿಕರ ಉಪಸ್ಥಿತಿಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದಾರೆ. ಭಾರತೀಯರು ಎಂದೂ ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಕಾರ್ಗಿಲ್ ವಿಜಯ ದಿನವೂ ಒಂದು. ಕಾರ್ಗಿಲ್ ವಿಜಯ ಪತಾಕೆ ಹಾರಿಸಿ 25 ವರ್ಷ ತುಂಬಿದ್ದರ ಪ್ರಯುಕ್ತ ಕಾರ್ಗಿಲ್ ವಿಜಯ ದಿನವನ್ನು ವಿವಿಧ ಕಾರ್ಯಕ್ರಮದೊಂದಿಗೆ ಶ್ರೀಮಠದಲ್ಲಿ ವಿನೂತನವಾಗಿ ಆಚರಿಸಲಾಗುತ್ತದೆ. ಕಾರ್ಗಿಲ್ ಜ್ಯೋತಿ ರಥಯಾತ್ರೆಯನ್ನು ಚಿತ್ರಕಲಾ ಶಿಕ್ಷಕ ಗುರುಸಂಗಪ್ಪ ಕಲ್ಯಾಣಶೆಟ್ಟಿ, ಸಿದ್ದು ಹರನಟ್ಟಿ, ಮಳೆಯಪ್ಪ ಬಡಿಗೇರ, ಚೆನ್ನಪ್ಪ ತಗ್ಗಿನಮನಿ ನಿರ್ಮಾಣ ಮಾಡಿದ್ದಾರೆ.ದೇಶದ ಜನತೆ ಸುರಕ್ಷಿತವಾಗಿರಬೇಕೆಂದರೆ ನಾವು ಯೋಧರನ್ನು ಗೌರವಿಸಬೇಕು, ದೇಶದ ಪ್ರತಿಯೊಂದು ಕುಟುಂಬದ ಮಕ್ಕಳನ್ನು ಯೋಧರನ್ನು ಮಾಡುವುದು ಅವಶ್ಯ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಬಸವಣ್ಣವರ ಕಾಲದಿಂದಲೂ ನಾಡಿನ ಮಠಗಳಲ್ಲಿ ಪುರಾಣ, ಪ್ರವಚನ, ಸಾಧಕರಿಗೆ ಸನ್ಮಾನ ನಡೆಯುತ್ತಿರುವುದು ಸಹಜ, ಆದರೆ ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಕಾರ್ಗಿಲ್ 25ನೇ ವರ್ಷ ವಿಜಯೋತ್ಸವ ಅಂಗವಾಗಿ 25 ಯೋಧರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವುದು ಹರ್ಷ ತಂದಿದೆ ಎಂದು ಮಾಜಿ ಸೈನಿಕ ಹೊಳಬಸಯ್ಯ ಶಿವಮೂರ್ತಯ್ಯ ತಿಳಿಸಿದ್ದಾರೆ.ಭೈರನಹಟ್ಟಿಯ ಕನ್ನಡ ಮಠದ ಶಾಂತಲಿಂಗ ಶ್ರೀಗಳು ಕನ್ನಡದ ಭಾಷೆ, ನೆಲ,ಜಲ,ಗಡಿ ಶಾಲೆಗಳ ಚಿಂತನೆ ಜತೆಗೆ ರಾಷ್ಟ್ರ ರಕ್ಷಣೆ ಮಾಡುವುದರ ಜತೆಗೆ ಕಾರ್ಗಿಲ್‌ದಲ್ಲಿ ಮಡಿದ ವೀರಯೋಧ ಶಿವಬಸಯ್ಯ ಕುಲಕರ್ಣಿ ಸ್ಮಾರಕದಿಂದ ಕಾರ್ಗಿಲ್ ಜ್ಯೋತಿ ರಥಯಾತ್ರೆ ಮಾಡಿ ಶ್ರೀಮಠದಲ್ಲಿ 25 ಕಾರ್ಗಿಲ್ ಯೋಧರಗೆ ಗೌರವ ಸಮರ್ಪಣೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಮಾಜಿ ಸೈನಿಕ ಮಹೇಶರಯ್ಯ ಸುರೇಬಾನ ಹೇಳಿದರು.