ಚನ್ನಯ್ಯನಕೋಟೆಯಲ್ಲಿ ಕಾರ್ಗಿಲ್ ವಿಜಯೋತ್ಸವ

| Published : Jul 31 2025, 12:55 AM IST / Updated: Jul 31 2025, 01:03 AM IST

ಸಾರಾಂಶ

ಯೋಧರ ತ್ಯಾಗ, ಪರಿಶ್ರಮದಿಂದಲೇ ದೇಶದ ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಮುಖ್ಯ ಶಿಕ್ಷಕಿ ಕಾವೇರಮ್ಮ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಚೆನ್ನಯ್ಯನಕೋಟೆ ಗ್ರಾಮ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಕಳೆದ 11 ವರ್ಷಗಳಿಂದ ಕಾರ್ಗಿಲ್ ವಿಜಯೋತ್ಸವ, ಡಾ ಎಪಿಜೆ ಅಬ್ದುಲ್ ಕಲಾಂ ಪುಣ್ಯಸ್ಮರಣೆ ಸೇರಿದಂತೆ ಯುದ್ಧದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಯೋಧರನ್ನು ಸ್ಮರಿಸುವ ಹಾಗೂ ಕುಟುಂಬವನ್ನ ಗೌರವಿಸುವ ದೇಶಾಭಿಮಾನದ ಕಾರ್ಯಕ್ರಮ ಹಮ್ಮಿಕೊಂಡು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡು ಮುನ್ನಡೆಯುತ್ತಿರುವ ಸರ್ವ ಸಹಾಯಿ ಮಿತ್ರ ಮಂಡಳಿಯ ಪದಾಧಿಕಾರಿಗಳ ಸೇವಾ ಕಾರ್ಯ ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಕೇಶವ ಕಾಮತ್‌ ಹೇಳಿದರು.

ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ ಚನ್ನಯ್ಯನಕೋಟೆ ಬಸ್ ನಿಲ್ದಾಣದ ಬಳಿ ನಿರ್ಮಿಸಲಾದ ಬೃಹತ್ ಕಾರ್ಗಿಲ್ ವಿಜಯೋತ್ಸವ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ಪುಣ್ಯ ಸ್ಮರಣೆ ಫ್ಲಕ್ಸ್ ಗೆ ಪುಷ್ಪ ನಮನ ಸಲ್ಲಿಸಿ ಗೌರವಿಸಿ ಮಾತನಾಡಿದರು. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರಿರ ಅರುಣ್ ಕುಮಾರ್ ಮಾತನಾಡಿ ಗ್ರಾಮದಲ್ಲಿರುವ ಸರ್ವಸಹಾಯಿ ಮಿತ್ರ ಮಂಡಳಿ ಹಲವು ವರ್ಷಗಳಿಂದ ದೇಶ ಅಭಿಮಾನದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ದೇಶ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಯೋಧರನ್ನು ಸ್ಮರಿಸುವುದರೊಂದಿಗೆ ಅವರ ಕುಟುಂಬವನ್ನು ಗೌರವಿಸುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದ್ದು ಇಂತಹ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ದೇಶ ಸೇವೆಯಲ್ಲಿರುವ ಯೋಧರಿಗೆ ಸ್ಪೂರ್ತಿ ತುಂಬಬೇಕೆಂದರು.

ಮಾರ್ಗದರ್ಶನವನ್ನು ಮೈಗೂಡಿಸಿಕೊಳ್ಳಬೇಕು:

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಕಾವೇರಮ್ಮ ಮಾತನಾಡಿ ಯೋಧರ ತ್ಯಾಗ ಪರಿಶ್ರಮದಿಂದಲೇ ದೇಶದ ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಗಾಳಿ, ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ತಮ್ಮ ಕುಟುಂಬವನ್ನು ಮರೆತು ದೇಶದ ರಕ್ಷಣೆಗಾಗಿ ಹಗಲಿರಳು ಸೇವೆ ಸಲ್ಲಿಸುತ್ತಿರುವ ಯೋಧರಿಗೆ ದಿನನಿತ್ಯ ಪ್ರಾರ್ಥಿಸಬೇಕಾಗಿದೆ ಎಂದು ಹೇಳಿದ ಅವರು ಮಿಸೈಲ್ ಮ್ಯಾನ್'''' ಎಂದೇ ಖ್ಯಾತರಾಗಿದ್ದ ಶ್ರೇಷ್ಠ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಮಾರ್ಗದರ್ಶನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಸಾಮಾಜಿಕ ಜಾಲತಾಣಗಳಿಗೆ ಹೊಂದಿಕೊಂಡು ಮುನ್ನಡೆಯುತ್ತಿದ್ದು ದೇಶದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವ ಸೌಜನ್ಯವೂ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇಶಕ್ಕಾಗಿ ತ್ಯಾಗ ಹಾಗೂ ಸಾಧನೆ ಮಾಡಿದವರನ್ನು ಗೌರವಿಸುವ ಮೂಲಕ ಇಂತಹ ಕಾರ್ಯಕ್ರಮಗಳು ಪ್ರತಿ ಗ್ರಾಮಗಳಲ್ಲೂ ನಡೆಯುವಂತಾಗಬೇಕು ಎಂದು ಹೇಳಿದರು.

ವಿಶೇಷ ಸನ್ಮಾನ:

ಇದೇ ಸಂದರ್ಭ ಹುತಾತ್ಮರಾದ ಇಬ್ಬರು ಯೋಧರ ಕುಟುಂಬದವರಾದ ಶೋಭಾ ಹಾಗೂ ನೀಲಮ್ಮ ಹಾಗೂ ಮಾಜಿ ಯೋಧ ರೇವಣ್ಣ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ದೇಶ ಕಾಯುವ ಯೋಧರ ಪರಿಶ್ರಮ ತ್ಯಾಗವನ್ನು ಸ್ಮರಿಸಿ ಮನಮುಟ್ಟುವಂತೆ ಹಾಡಿದ ಪಾಲಿಬೆಟ್ಟದ ನಾಸಿರ್ ಅವರು ಗಾಯನಕ್ಕೆ ನೆರೆದಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಸರ್ವಸಹಾಯಿ ಮಿತ್ರ ಮಂಡಳಿ ಅಧ್ಯಕ್ಷ ವಿಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಅಜಿತ್ ಕರುಂಬಯ್ಯ, ಗಣೇಶ್, ಮಾಜಿ ಯೋಧರಾದ ಮಣಿ, ಲೋಕೇಶ್, ಜುಮ ಮಸೀದಿ ಅಧ್ಯಕ್ಷ ಮುಸ್ತಫ, ಪಂಚಾಯಿತಿ ಸದಸ್ಯರಾದ ಶಿಲ್ಪಾ, ಗಣೇಶ್, ಶೀಲಾ ಪ್ರಮುಖರಾದ ದೊಡ್ಡಮ್ಮ, ಇಂದಿರಾ ಮುರ್ಗೇಶ್, ಸಲೀಂ, ಅಬ್ದುಲ್ ರಹಿಮಾನ್, ಶಶಿ ಅಚ್ಚುದನ್, ಮಾದೇವ, ಬನೊಜ್, ಸನಲ್, ರವೀಂದ್ರಬಾವೆ, ನಂಜಪ್ಪ ಪೂಜಾರಿ, ಅಪ್ಪು ಸುಬ್ರಮಣಿ, ಶಾಜಿ, ಕುಮಾರ್, ನಿಜಾಮುದ್ದೀನ್, ಮಹೀಂದ್ರ, ಶಿವಗಾಮಿ ಸೇರಿದಂತೆ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಯ ಪ್ರಮುಖರು ಹಾಗು ಗ್ರಾಮಸ್ಥರು ಹಾಜರಿದ್ದರು.