ಸಾರಾಂಶ
ಕಾರ್ಗಿಲ್‌ನಂತಹ ಎತ್ತರ ಹಾಗೂ ಮೈನಸ್ 13 ಡಿಗ್ರಿ ಕೊರೆವ ಚಳಿಯಲ್ಲಿ ಯುದ್ದ ಮಾಡಿ ಶತ್ರು ಪಡೆಗಳನ್ನು ಹೊಡೆದೊಡಿಸಿ ಯುದ್ದವನ್ನು ನಮ್ಮ ಸೈನಿಕರು ಗೆಲುವ ಮೂಲಕ ಭಾರತ ದೇಶಕ್ಕೆ ಕೀರ್ತಿ ತಂದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಭಾರತದ ಸೈನಿಕರು ಶತ್ರು ರಾಷ್ಟ್ರದ ವಿರುದ್ಧ ಪ್ರಾಣದ ಹಂಗು ತೊರೆದು ನಿರಂತರ ಹೋರಾಟ ಮಾಡುವ ಮೂಲಕ ಜಯವನ್ನು ತಂದುಕೊಟ್ಟ ಐತಿಹಾಸಿಕ ದಿನವನ್ನು ಪ್ರತಿಯೊಬ್ಬರೂ ಹೆಮ್ಮೆಪಡಬೇಕು ಎಂದು ಮಾಜಿ ಯೋಧರ ಸಂಘದ ಸಹ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು.ಪಟ್ಟಣದ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗ ಶನಿವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಕಿಸ್ತಾನದ ವಿರುದ್ಧ ನಮ್ಮ ದೇಶ ಜಯಗಳಿಸಿದ ಕಾರ್ಗಿಲ್ ಯುದ್ಧದ ವಿಜಯ ದಿನವಾಗಿ ನಾವು ಆಚರಿಸುವ ಜೊತೆಗೆ ನಮ್ಮ ದೇಶಕ್ಕೆ ವೀರ ಪ್ರಾಣತ್ಯಾಗ ಮಾಡಿದ ಸೈನಿಕರನ್ನು ಕೂಡ ಸ್ಮರಿಸುವುದಾಗಿದೆ ಎಂದರು.
ಕಾರ್ಗಿಲ್‌ನಂತಹ ಎತ್ತರ ಹಾಗೂ ಮೈನಸ್ 13 ಡಿಗ್ರಿ ಕೊರೆವ ಚಳಿಯಲ್ಲಿ ಯುದ್ದ ಮಾಡಿ ಶತ್ರು ಪಡೆಗಳನ್ನು ಹೊಡೆದೊಡಿಸಿ ಯುದ್ದವನ್ನು ನಮ್ಮ ಸೈನಿಕರು ಗೆಲುವ ಮೂಲಕ ಭಾರತ ದೇಶಕ್ಕೆ ಕೀರ್ತಿ ತಂದರು ಎಂದರು.ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶಿವಣ್ಣಗೌಡ ಮಾತನಾಡಿ, ದೇಶದ ಗಡಿ ಕಾಯುತ್ತಿರುವ ಸೈನಿಕರ ಜೊತೆಗೆ ದೇಶದ ಪ್ರಜೆಗಳಾದ ನಾವೆಲ್ಲರೂ ನಿಲ್ಲುವ ಜೊತೆಗೆ ಸೈನಿಕರ ಪರಿಶ್ರಮ ಮತ್ತು ಸಾಹಸವನ್ನು ನಾವು ಸ್ಮರಿಸಿಕೊಳ್ಳಬೇಕು ಎಂದರು.
ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆಯಲ್ಲಿ ತಾಲೂಕಿನ ಮಾಜಿ ಸೈನಿಕರ ಸಂಘದ ಸದಸ್ಯರು, ಕುಟುಂಬಸ್ಥರು ಅಮರ್ ಜವಾನ್ ಚಿತ್ರವನ್ನು ತೆರದ ವಾಹನದಲ್ಲಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಸಾರ್ವಜನಿಕರು, ದೇಶಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಪಟ್ಟಣದ ರೋಟರಿ ಶಾಲೆ, ಮಾದರಿ ಬಾಲಕಿಯರ ಶಾಲೆ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ರಾಷ್ಟ್ರ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಸೈನಿಕರಿಗೆ ನಮನ ಸಲ್ಲಿಸಿದರು. ಅಲ್ಲದೆ ಚಿಕ್ಕ ಮಕ್ಕಳೂ ಕೂಡ ಸೈನಿಕರ ಉಡುಪು ಧರಿಸಿ ಎಲ್ಲರ ಗಮನ ಸೆಳೆದರು.
ಈ ವೇಳೆ ಸಂಘದ ಅಧ್ಯಕ್ಷ ಟಿ.ಮರಿಗೌಡ, ಉಪಾಧ್ಯಕ್ಷ ನಾರಾಯಣ್, ಖಜಾಂಚಿ ಗಿರೀಶ್, ಸಂಚಾಲಕ ಎಂ.ಪಿ.ಚಂದ್ರಕುಮಾರ್, ರಘು, ಮಾಜಿ ಸೈನಿಕರ ಸಂಘದ ಸದಸ್ಯರು ಮತ್ತು ಕುಟುಂಬಸ್ಥರು ಇದ್ದರು.