ಅಬ್ರಹಾಂ ಹಿರೇಬಿಸು । ಡಿಸಿಎಂಸಿ ಪ್ರೌಢ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಕಾರ್ಗಿಲ್ ವಿಜಯೋತ್ಸವ ಕೇವಲ ಆಚರಣೆಯಾಗದೆ ಸೈನಿಕರ 60 ದಿನಗಳ ಸತತ ಶ್ರಮ ಹಾಗೂ ಬಲಿದಾನದ ಪ್ರತೀಕ ಎಂದು ನಿವೃತ್ತ ಕರ್ನಲ್ ಅಬ್ರಾಹಂ ಹಿರೇಬಿಸು ತಿಳಿಸಿದರು.
ಶನಿವಾರ ಪಟ್ಟಣ ಡಿಸಿಎಂಸಿ ಪ್ರೌಢ ಶಾಲೆಯಲ್ಲಿ ಸ್ಚೇಟ್ ಹಾಗೂ ಸಿಬಿಎಸ್ಸಿ ವಿಭಾಗ, ಸೋಷಿಯಲ್ ಕ್ಲಬ್ ಆಕ್ಟಿವಿಟಿ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 1999 ರಲ್ಲಿ ಜನರಲ್ ಮಲ್ಲಿಕ್ ಅವರ ನೇತೃತ್ವದಲ್ಲಿ ಭಾರತ ಸಾಧಿಸಿದ ವಿಜಯ ಹಾಗೂ ಕಾರ್ಗಿಲ್ ಯುದ್ದದಲ್ಲಿ ದೇಶಕ್ಕಾಗಿ ಜೀವ ತ್ಯಾಗ ಮಾಡಿದ 527 ವೀರ ಯೋಧರ ತ್ಯಾಗ ಎಂದಿಗೂ ಮರೆಯುವಂತಿಲ್ಲ. ವಿದ್ಯಾರ್ಥಿಗಳು ಶಾಲಾ, ಕಾಲೇಜು ಹಂತದಲ್ಲೇ ದೇಶಭಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಗಡಿ ಕಾಯಲು ಹೋಗ ಬೇಕಾಗಿಲ್ಲ. ಶಿಸ್ತಿನಿಂದ ವಿದ್ಯಾಭ್ಯಾಸ ಮಾಡಿ ದೇಶದ ಒಳ್ಳೆಯ ಪ್ರಜೆಯಾಗಬೇಕು. 18- 24 ವರ್ಷ ವಯೋಮಿತಿಯ ಎಲ್ಲಾ ಭಾರತೀಯ ಪ್ರಜೆಯೂ ಕನಿಷ್ಠ 2 ವರ್ಷ ದೇಶ ಸೇವೆ ಮಾಡಿದರೆ ಮಕ್ಕಳಲ್ಲಿ ದೇಶಾಭಿಮಾನ ತಾನಾಗಿಯೇ ಬರುತ್ತದೆ. ನಾನು ಸೈನಿಕನಾಗಿ ದೇಶ ಸೇವೆ ಮಾಡಿದ ತೃಪ್ತಿ ನನಗೆ ಇದೆ ಎಂದರು.ಅತಿಥಿಯಾಗಿದ್ದ ನಿವೃತ್ತ ಯೋಧ ಸಿಂಸೆ ಜಾರ್ಜ್ ಮಾತನಾಡಿ, ದೇಶದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮವನ್ನು ರಕ್ಷಣೆ ಮಾಡುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ವಿದ್ಯಾರ್ಥಿಗಳು ಶಿಸ್ತಿನಿಂದ ಬದುಕಬೇಕು ಎಂದರು. ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ನಿವೃತ್ತ ಕರ್ನಲ್ ಅಬ್ರಾಹಂ ಅವರ ದೇಶ ಸೇವೆ ಎಲ್ಲರಿಗೂ ಮಾದರಿ. ವಿದ್ಯಾರ್ಥಿಗಳು ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಡಿಸಿಎಂಸಿ ಶಾಲೆ ವಿದ್ಯಾರ್ಥಿಗಳು ನಿವೃತ್ತ ಕರ್ನಲ್ ಅಬ್ರಾಹಂ ಅವರಿಗೆ ಥ್ಯಾಂಕಿಂಗ್ ಲೆಟರ್ ನೀಡಿ ಗೌರವಿಸಿದರು. ಸ್ಟೇಟ್ ವಿಭಾಗದಿಂದ ನಿವೃತ್ತ ಯೋಧ ಜಾರ್ಜ್ ದಂಪತಿಯನ್ನು ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್ ವಹಿಸಿದ್ದರು. ತಾ.ಒಕ್ಕಲಿಗರ ಸಂಘದ ಖಜಾಂಚಿ ಕಟಗಳಲೆ ಲೋಕೇಶ್, ಶೈಕ್ಷಣಿಕ ಸಲಹೆಗಾರ ಉದಯಕರ್, ಎಡಿಕೇಶನ್ ಶಿಕ್ಷಣ ಸಂಯೋಜಕಿ ತೃಪ್ತಿ ಅಮರ್, ಪ್ರಾಂಶುಪಾಲೆ ಪದ್ಮರಮೇಶ್, ಮುಖ್ಯ ಶಿಕ್ಷಕಿ ಲಿವಿನಾ ಡೆಕೋಸ್ಟಾ, ಸೋಷಿಯಲ್ ಕ್ಲಬ್ ನ ಮುಖ್ಯಸ್ಥ ಮೊಹಮ್ಮದ್ ಗಸ್ತಗಿರಿ, ಪ್ರಶಾಂತ್ ಸ್ಮಿತ್ ಇದ್ದರು. ವಿದ್ಯಾರ್ಥಿಗಳು ಕಾರ್ಗಿಲ್ ಯೋಧರಿಗೆ ಕ್ಯಾಂಡಲ್ ಬೆಳಗಿ ನಮನ ಸಲ್ಲಿಸಿದರು.