ಕಾರ್ಗಿಲ್‌ ವಿಜಯೋತ್ಸವ ದೇಶಪ್ರೇಮದ ಸಂಕೇತ: ಯೋಗೇಶ್

| Published : Jul 27 2024, 12:46 AM IST

ಸಾರಾಂಶ

ಕಾರ್ಗಿಲ್‌ ಯುದ್ಧದಲ್ಲಿ ಬಲಿದಾನವಾದ ಸೈನಿಕರನ್ನು ನಾವು ನೆನೆಯಬೇಕು. ಕಾರ್ಗಿಲ್‌ ವಿಜಯೋತ್ಸವಕ್ಕೆ 25 ವರ್ಷ ತುಂಬಿದೆ. ದೇಶಭಕ್ತಿ, ರಾಷ್ಟ್ರರಕ್ಷಣೆ, ಸೈನಿಕರ ಸೇವೆ, ತ್ಯಾಗ ಎಲ್ಲವನ್ನೂ ಯುವಕರಿಗೆ ತಿಳಿಸಿಕೊಟ್ಟು ಅವರನ್ನು ದೇಶರಕ್ಷಕರನ್ನಾಗಿ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ವಿದ್ಯಾರ್ಥಿ ದಿಸೆಯಿಂದಲೇ ದೇಶ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾರ್ಗಿಲ್‌ ವಿಜಯೋತ್ಸವ ದೇಶಪ್ರೇಮದ ಸಂಕೇತದಂತಿದ್ದು, ಆ ಯುದ್ಧದ ಮಹತ್ವವನ್ನು ಯುವಕರಿಗೆ ಮನವರಿಕೆ ಮಾಡಿಕೊಟ್ಟು ದೇಶಪ್ರೇಮಿಗಳನ್ನಾಗಿ ರೂಪಿಸಬೇಕು ಎಂದು ಯುವ ಬ್ರಿಗೇಡ್‌ ಪ್ರಚಾರಕ ಯೋಗೇಶ್‌ ತಿಳಿಸಿದರು.

ತಾಲೂಕಿನ ಯಲಿಯೂರು ಸರ್ಕಲ್‌ ಬಳಿ ಇರುವ ಅನಿಕೇತನ ಸ್ಕೂಲ್‌ ಆಪ್‌ ಎಜುಕೇಷನ್‌ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಸಂಘದ ಹಾಗೂ ಮೈಸೂರಿನ ಎನ್‌ಸಿಸಿ 14ನೇ ಕರ್ನಾಟಕ ಬೆಟಾಲಿಯನ್‌ ವತಿಯಿಂದ ಆಯೋಜಿಸಿದ್ದ ಕಾರ್ಗಿಲ್‌ ವಿಜಯ್‌ ದಿವಸ್‌ (ರಜತ ಮಹೋತ್ಸವ) ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಗಿಲ್‌ ಯುದ್ಧದಲ್ಲಿ ಬಲಿದಾನವಾದ ಸೈನಿಕರನ್ನು ನಾವು ನೆನೆಯಬೇಕು. ಕಾರ್ಗಿಲ್‌ ವಿಜಯೋತ್ಸವಕ್ಕೆ 25 ವರ್ಷ ತುಂಬಿದೆ. ದೇಶಭಕ್ತಿ, ರಾಷ್ಟ್ರರಕ್ಷಣೆ, ಸೈನಿಕರ ಸೇವೆ, ತ್ಯಾಗ ಎಲ್ಲವನ್ನೂ ಯುವಕರಿಗೆ ತಿಳಿಸಿಕೊಟ್ಟು ಅವರನ್ನು ದೇಶರಕ್ಷಕರನ್ನಾಗಿ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ವಿದ್ಯಾರ್ಥಿ ದಿಸೆಯಿಂದಲೇ ದೇಶ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪಾಕಿಸ್ತಾನವು ಪದೇ ಪದೇ ಯುದ್ಧಕ್ಕೆ ಕಾಲು ಕೆರೆದು ನಿಲ್ಲುತ್ತದೆ. ಅದಕ್ಕೆ ತಕ್ಕ ಉತ್ತರವನ್ನು ನಮ್ಮ ಸೈನಿಕರು ನೀಡುತ್ತಾ ಬಂದಿದ್ದರೂ ಪಾಕಿಸ್ತಾನ ಇನ್ನೂ ಬುದ್ಧಿ ಕಲಿತಿಲ್ಲ. ನಮ್ಮ ಸೈನಿಕರು ಪಾಕಿಸ್ತಾನ ಬಾಲ ಬಿಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರ ಉಪಟಳಕ್ಕೆ ತಿಲಾಂಜಲಿ ಹಾಡಲಾಗಿದೆ. ಅಲ್ಲಿ ಬದಲಾವಣೆಯ ಯುಗ ಆರಂಭವಾಗಿದೆ. ಚೀನಾದ ಯುದ್ಧದಲ್ಲಿ ಸೋಲಬೇಕಾದರೆ ನಮ್ಮ ರಾಜಕೀಯ ಕಾರಣವಿತ್ತು, ತದನಂತರ ನಾವು ಆ ದೇಶಕ್ಕೂ ತಕ್ಕ ಉತ್ತರ ಕೊಡುವಷ್ಟರ ಮಟ್ಟಿಗೆ ಪ್ರಸ್ತುತದಲ್ಲಿ ಬೆಳೆದು ನಿಂತಿದ್ದೇವೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮಕ್ಕೂ ಮುನ್ನ ರಕ್ತದಾನ ಶಿಬಿರದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 45 ಯೂನಿಟ್‌ ರಕ್ತ ಸಂಗ್ರಹಿಸಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸುಬೇದಾರ್‌ ಶಿವಕುಮಾರ್, ನಾಯಕ್‌ ಲೋಕೇಶ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅನಿಕೇತನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಜಗದೀಶ್‌, ಕಾರ್ಯದರ್ಶಿ ಎಚ್‌.ಎಸ್‌.ಚುಂಚೇಗೌಡ, ಸಂಸ್ಥಾಪಕ ಕಾರ್ಯದರ್ಶಿ ರಾಮಲಿಂಗಯ್ಯ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂದೀಪ್‌ ಬೂದಿಹಾಳ್‌ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.