ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಕುವೆಂಪು ವೃತ್ತದ ಬಳಿ ಮೈಸೂರಿನ ಶೇಷಾದ್ರಿಪುರ ಎಂಜಿನಿಯರ್ ಕಾಲೇಜು ಎನ್ಎಸ್ಎಸ್ ಘಟಕ, ಅಚೀವರ್ಸ್ ಅಕಾಡೆಮಿ, ರೋಟರಿ ಸಂಸ್ಥೆ ಹಾಗೂ ಪಟ್ಟಣದ ಗೃಹರಕ್ಷಕ ದಳ ಘಟಕದಿಂದ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.ಕಾರ್ಗಿಲ್ ಯುದ್ಧದಲ್ಲಿ ಮಡಿದಂತ ಎಲ್ಲಾ ವೀರ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ವೇಳೆ
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ರಾಘವೇಂದ್ರ ಮಾತನಾಡಿ, 1999ರ ಕಾರ್ಗಿಲ್ ಯುದ್ಧದ ಹುತಾತ್ಮರಿಗೆ ಈ ದಿನವನ್ನು ಸಮರ್ಪಿಸಲಾಗಿದೆ. ಆಕ್ರಮಣಕಾರಿ ಶತ್ರುಗಳ ವಿರುದ್ಧ ವಿಜಯ ಸಾಧಿಸಲು ಮುಂಚೂಣಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರ ಜೀವನವನ್ನು ಗೌರವಿಸಲು ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ ಎಂದರು.ಹಿರಿಯ ಗಾಂಧಿವಾದಿ ಡಾ.ಸುಜಯ್ ಕುಮಾರ್ ಮಾತನಾಡಿ, ದೇಶ ಕಾಯುವ ಯೋಧರು ಹಗಲು, ರಾತ್ರಿ ವಿಶ್ರಾಂತಿ ಇಲ್ಲದೆ ರಾಷ್ಟ್ರದ ಗೋಡೆಗಳನ್ನು ರಕ್ಷಿಸುತ್ತಿದ್ದಾರೆ. ಹಾಗಾಗಿ ಎಲ್ಲಾ ವೀರ ಸೈನಿಕರಿಗೆ ನನ್ನ ಕೃತಜ್ಞತೆಯನ್ನ ಸಲ್ಲಿಸುತ್ತೇನೆ. ಅಲ್ಲದೇ, 1999ರ ಜುಲೈ 26ರ ದಿನವನ್ನು ಮರೆಯಲಾಗದ ದಿನ ಎಂದರು.
ಇದೇ ವೇಳೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಯೋಧ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ನಂತರ ಕುವೆಂಪು ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದ ವರೆಗೆ ಭಾರತೀಯ ಸೈನಿಕರಿಗೆ ಜಯವಾಗಲಿ ಎಂಬ ಘೋಷವಾಕ್ಯದೊಂದಿಗೆ ಜಾಥಾ ನಡೆಸಿ ನಡೆಸಿದರು.
ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ರೋಟರಿ ಅಧ್ಯಕ್ಷ ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಸರಸ್ವತಿ, ರೇವಣ್ಣ, ಜಿಲ್ಲಾ ಗೃಹರಕ್ಷಕ ದಳದ ಘಟಕದ ಉಮೇಶ್, ವೆಂಕಟೇಶ್, ಅತಿವಸನ ಅಕಾಡೆಮಿ ನಿರ್ದೇಶಕರಾದ ಗುರುಪ್ರಸಾದ್, ಶ್ರೀಧರ್, ಹರೀಶ್, ಎನ್ಎಸ್ಎಸ್ ವಿದ್ಯಾರ್ಥಿಗಳಾದ ಶಾಂಭವಿ, ಹೃದಯ, ಚಂದನ್, ಪ್ರಶಾಂತ್, ರೇವಣ್ಣ, ರಜತ್ ಸೇರಿದಂತೆ ಇತರರು ಇದ್ದರು.