ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರ ತ್ಯಾಗ ನಮ್ಮ ಸಶಸ್ತ್ರ ಪಡೆಗಳ ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಈ ದೇಶವು ಅವರಿಗೆ ಎಂದೆಂದಿಗೂ ಋಣಿಯಾಗಿರುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ತಿಳಿಸಿದರು.ನಗರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಒನಕೆ ಓಬವ್ವ ವೃತ್ತದಲ್ಲಿ ಹಮ್ಮಿಕೊಂಡ ಕಾರ್ಗಿಲ್ ವಿಜಯ ದಿವಸ ಆಚರಣೆ ವೇಳೆ ಮಾತನಾಡಿದರು.
ನಮ್ಮ ದೇಶದ ಸೈನಿಕರು ಪಾಕಿಸ್ತಾನಿ ಸೈನ್ಯವನ್ನು ಸದೆ ಬಡಿಯವುದರ ಮೂಲಕ ನಮ್ಮ ಜಾಗವನ್ನು ಆಕ್ರಮಿಸಿದ್ದ ಅವರನ್ನು ಅಲ್ಲಿಂದ ಹೊಡೆದೋಡಿಸಿದ ದಿವಸ ಇದಾಗಿದೆ. ಈ ದಿವಸ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನು ಅಪ್ಪಿದವರಿಗೆ ಗೌರವವನ್ನು ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಬೇಕಿದೆ ಎಂದು ಹೇಳಿದರು.ಈ ಘಟನೆ ನಡೆದು 26 ವರ್ಷಗಳು ಕಳೆದಿವೆ. ಕಾರ್ಗಿಲ್ ಬೆಟ್ಟಗಳಿಂದ ಉಗ್ರಗಾಮಿಗಳನ್ನು ಹೊಡೆದೋಡಿಸಿದ ಸಂದರ್ಭವನ್ನು ಸ್ಮರಿಸಲು ಇಂದು ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ ಆಚರಿಸಲಾಗುತ್ತಿದೆ. ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿ ಕೊಳ್ಳಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತನ್ನ ಶೌರ್ಯವನ್ನು ಪ್ರದರ್ಶಿಸಿದ ದಿಟ್ಟತನದ ದಿನ ಇದು ಎಂದರು.
ನಮ್ಮ ದೇಶವನ್ನು ಉಳಿಸಲು ಅತ್ಯಂತ ಕಠಿಣ ಭೂಪ್ರದೇಶದಲ್ಲಿ ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪದಿಂದ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಧೈರ್ಯಶಾಲಿ ಸೈನಿಕರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿ, 1999 ರ ಮೇ-ಜುಲೈನಲ್ಲಿ ಕಾರ್ಗಿಲ್ ಬೆಟ್ಟಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭೀಕರ ಯುದ್ಧ ನಡೆಯಿತು. ಶತ್ರು ಪಡೆಗಳು ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಪ್ರದೇಶವನ್ನು ಪ್ರವೇಶಿಸಿದವು. ಅವರು ಕಾರ್ಗಿಲ್‍ನಲ್ಲಿ ಖಾಲಿಯಾಗಿದ್ದ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡಿದರು. ಅವರ ಆಕ್ರಮಣದ ಬಗ್ಗೆ ತಿಳಿದ ನಂತರ ಭಾರತೀಯ ಸೇನೆಯು ಆಪರೇಷನ್ ವಿಜಯ್ ಎಂಬ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಭಾರತೀಯ ಸೇನೆಯ ಪ್ರತಿದಾಳಿಯಿಂದ ಪಾಕಿಸ್ತಾನಿ ಪಡೆಗಳು ಕಂಗೆಟ್ಟವು. ಅವರು ಭಾರತದ ದಾಳಿಗೆ ಹೆದರಿ ಓಡಿಹೋದರು. ಪಾಕಿಸ್ತಾನಿ ಸೇನೆಯನ್ನು ಓಡಿಸಲಾಗಿದೆ ಎಂದು ಭಾರತೀಯ ಸೇನೆ ಜುಲೈ 26 ರಂದು ಘೋಷಿಸಿತು. ಅಂದಿನಿಂದ ನಾವು ಪ್ರತಿ ವರ್ಷ ಆ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸುತ್ತಿದ್ದೇವೆ ಎಂದರು.
ಸೈನಿಕರ ಪರವಾಗಿ ಜೈಕಾರವನ್ನು ಹಾಕಿ ಕಾರ್ಗಿಲ್ ಯುದ್ದದಲ್ಲಿ ಮಡಿದವರಿಗೆ ಶಾಂತಿಯನ್ನು ಸಲ್ಲಿಸಿ ವಿಜಯಿಯಾಗಿದ್ದಕ್ಕೆ ಸಾರ್ವಜನಿಕರಿಗೆ ಸಿಹಿಯನ್ನು ಹಂಚಲಾಯಿತು.ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜುನ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಮುಖಂಡರುಗಳಾದ ಚಾಲುಕ್ಯ ನವೀನ್, ತಿಪ್ಪೇಸ್ವಾಮಿ, ನಂದಿ ನಾಗರಾಜ್, ಕವನ, ಶoಭು, ಬಸಮ್ಮ, ಶಾಂತಮ್ಮ ರಘು, ಅರುಣ್, ಲಿಂಗರಾಜು, ವರುಣ್, ಪ್ರಭಾಕರ್, ವಸಂತಚಾರ್, ಕಿರಣ್, ಪ್ರಶಾಂತ್ ಕುಮಾರ್ ಮಹಾಂತೇಶ್ ಮುಂತಾದವರು ಹಾಜರಿದ್ದರು.