ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿನ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ (ಶ್ರೀನಿವಾಸ) ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಈ ಭಾಗದ ಚಿಕ್ಕ ತಿರುಪತಿ ಎಂದೇ ಹೆಸರಾಗಿರುವ ದೇವಾಲಯದಲ್ಲಿ ನಡೆದ ರಥೋತ್ಸವಕ್ಕೆ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ಬೆಳಗಿನ ಜಾವದಿಂದ ದೇವಾಲಯದ ಅರ್ಚಕರಿಂದ ದೇವರಿಗೆ ಅಭಿಷೇಕ ಸೇರಿದಂತೆ ಇತರ ವಿಶೇಷ ಪೂಜೆಯೊಂದಿಗೆ ಸೇವೆಗಳ ಸಲ್ಲಿಸಲಾಯಿತು.

ದೇವಾಲಯದ ಮುಂಭಾಗದಲ್ಲಿ ವಿಶೇಷ ಹೂವುಗಳಿಂದ ವಿಶೇಷವಾಗಿ ಅಲಂಕರಿಸಿದ್ದ ರಥದ ಮೇಲೆ ಶ್ರೀ ವೆಂಕಟರಮಣ ಸ್ವಾಮಿ ಹಾಗೂ ಪದ್ಮಾವತಿ ಉತ್ಸವ ಮೂರ್ತಿಯನ್ನು ಕೂರಿಸಿ ಮಧ್ಯಾಹ್ನ ಪೂಜಿಸಿ ಮಹಾ ಮಂಗಳಾರತಿಯೊಂದಿಗೆ ಗೋವಿಂದ ಗೋವಿಂದ ಎಂದು ಭಕ್ತರ ಘೋಷಣೆಗಳೊಂದಿಗೆ ರಥವನ್ನು ಎಳೆಯುವ ಮೂಲಕ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ತಹಸೀಲ್ದಾರ್ ಚೇತನಾ ಯಾದವ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ. ಉಮಾ ಸೇರಿದಂತೆ ಅಧಿಕಾರಿಗಳ ಹಾಗೂ ಇತರ ಮುಖಂಡರ ನೇತೃತ್ವದಲ್ಲಿ ಚಾಲನೆ ನೀಡಿದರು.

ಭಕ್ತರು ದೇವಾಲಯದ ಸುತ್ತಲೂ ಒಂದು ಸುತ್ತು ರಥವನ್ನು ಎಳೆದು ಮೆರವಣಿಗೆ ನಡೆಸಿದರು. ರಥಕ್ಕೆ ಹಣ್ಣು ಜವನ ಎಸೆದು ಪ್ರಾರ್ಥಿನೆ ಸಲ್ಲಿಸಿದರು. ಇನ್ನೊಂದೆಡೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವಾಲಯದಲ್ಲಿನ ವೆಂಕಟರಮಣನಿಗೆ ಈಡುಗಾಯಿ ಹೊಡೆದು ಪೂಜೆ ಸಲ್ಲಿಸಿದರು. ನಂತರ ಮೊದಲಿದ್ದ ಸ್ಥಳದಲ್ಲಿ ನಿಲ್ಲಿಸಲಾಯಿತು.


ಕರೀಘಟ್ಟದ ಬೆಟ್ಟದ ತಪಲಿನಿಂದ ಮೆಟ್ಟಿಲಿನವರೆಗೂ ದಾನಿಗಳು ಭಕ್ತರಿಗೆ ಕುಡಿಯಲು ನೀರು, ಮಜ್ಜಿಗೆ ಪಾನಕ ಸೇರಿದಂತೆ ಪುಳಿಯೊಗರೆ ಮೊಸರನ್ನ ಪ್ರಸಾದ ರೂಪದಲ್ಲಿ ನೀಡಿ ಭಕ್ತಿ ಭಾವ ಮೆರೆಯುತ್ತಿದ್ದರು. ಸ್ಥಳೀಯರಲ್ಲದೆ ಮೈಸೂರು. ಬೆಂಗಳೂರು, ತಮಿಳುನಾಡು, ಆಂಧ್ರಪ್ರದೇಶದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಪೊಲೀಸರು ವಾಹನಗಳನ್ನು ಒಂದೆಡೆ ಪಾರ್ಕಿಂಗ್ ಮಾಡಿ, ಭಕ್ತರು ಸರಾಗವಾಗಿ ಬೆಟ್ಟಕ್ಕೆ ಹೋಗಿ ಬರಲು ಬ್ಯಾರಿಕೇಡ್ ಅಳವಡಿಸಿ ಭದ್ರತೆಯಲ್ಲಿದ್ದರು. ಮುಜುರಾಯಿ ಇಲಾಖೆ ಅಧಿಕಾರಿ ವರ್ಗದವರು ರಥೋತ್ಸವ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.